ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಸ್ಥೆ ಉಳಿಸುವುದು ಸರ್ಕಾರದ ಜವಾಬ್ದಾರಿ’

ಸಹಕಾರ ಸಾರಿಗೆ ಬೇಡಿಕೆ ಈಡೇರುವವರೆಗೆ ಧರಣಿ; ಬಸ್ ಸ್ಥಗಿತ
Last Updated 17 ಫೆಬ್ರುವರಿ 2020, 5:49 IST
ಅಕ್ಷರ ಗಾತ್ರ

ಕೊಪ್ಪ: ಇಲ್ಲಿನ ಸಹಕಾರ ಸಾರಿಗೆ ಸಂಸ್ಥೆ ಕಚೇರಿ ಆವರಣದಲ್ಲಿ ಭಾನುವಾರ ನಡೆದ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ಸಂಸ್ಥೆಯ ಬೇಡಿಕೆ ಈಡೇರುವವರೆಗೆ ತಾಲ್ಲೂಕು ಕಚೇರಿ ಎದುರು ಸೋಮವಾರದಿಂದ ಧರಣಿ ನಡೆಸುವುದರ ಕುರಿತು ನಿರ್ಧರಿಸಲಾಯಿತು.

ಸಮಸ್ಯೆ ನಿವಾರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಸ್ಥೆಯು ಪದಾಧಿಕಾರಿಗಳನ್ನೊಳಗೊಂಡ ಜನಪ್ರತಿನಿಧಿಗಳ ನಿಯೋಗ ಇತ್ತೀಚೆಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿದ ಅವರು, ಸಹಕಾರ ಸಾರಿಗೆ ಸಂಸ್ಥೆಗೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ನೀಡುತ್ತಿರುವ ಸವಲತ್ತುಗಳನ್ನು ನೀಡಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಆದರೆ, ಹಣಕಾಸು ಇಲಾಖೆ ಮಾತ್ರ ಇದನ್ನು ಬೇರೆ ಬೇರೆ ಕಾರಣಗಳನ್ನು ನೀಡಿ ನಿರಾಕರಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಗ್ರಾಮೀಣ ರಸ್ತೆಗಳಲ್ಲಿ ಬಸ್ ಓಡಿಸುವ ಮೂಲಕ ಜನಸ್ನೇಹಿಯಾಗಿ ಸಹಕಾರ ಸಾರಿಗೆ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆ ಉಳಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಆರ್ಥಿಕ ಸಹಾಯ ಒದಗಿಸಿದರೆ, ಸರ್ಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ. ಮುಖ್ಯಮಂತ್ರಿ ಮನಸ್ಸು ಮಾಡಿದರೆ ಖಂಡಿತಾ ಸಮಸ್ಯೆ ಬಗೆಹರಿಯಲಿದೆ. ಸದನದಲ್ಲಿ ಇದನ್ನು ಪ್ರಸ್ತಾಪಿಸಿ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.

‘ಮುಖ್ಯ ರಸ್ತೆಗಳಲ್ಲಿ ಕೆಎಸ್‍ಆರ್‌ಟಿಸಿ ಬಸ್ ಓಡಿಸುತ್ತಿದ್ದು, ಸಹಕಾರ ಸಾರಿಗೆ ಸಂಸ್ಥೆ ಬಸ್‍ಗಳನ್ನು ದುರ್ಗಮ ಪ್ರದೇಶದಲ್ಲಿ ಓಡಿಸಲಾಗುತ್ತಿದೆ. ಇದರಿಂದ ಸಂಸ್ಥೆಗೆ ನಷ್ಟ ಹೆಚ್ಚಾಗಿದೆ. ಡೀಸೆಲ್ ದರ, ವಿಮೆ, ವಾಹನ ತೆರಿಗೆ ದರ, ಬಿಡಿ ಭಾಗಗಳ ದರ ಹೆಚ್ಚಳದಿಂದ ಸಂಸ್ಥೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಸಮಸ್ಯೆ ನಿವಾರಿಸಲು ಬಿಎಂಟಿಸಿ, ಕೆಎಸ್‌ಆರ್‌ಟಿಸಿಗೆ ನೀಡುತ್ತಿರುವ ಸವಲತ್ತುಗಳನ್ನು ಸಂಸ್ಥೆಗೂ ನೀಡಬೇಕು. ತಕ್ಷಣಕ್ಕೆ ಪರಿಹಾರ ಒದಗಿಸಲು ಸರ್ಕಾರ ಮುಂದಾಗಬೇಕು. ಇಲ್ಲವೇ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿ ಮುನ್ನಡೆಸಬೇಕು’ ಎಂದು ಸಂಸ್ಥೆ ಅಧ‍್ಯಕ್ಷ ಈ.ಎಸ್.ಧರ್ಮಪ್ಪ ಆಗ್ರಹಿಸಿದರು.

ಸಭೆಯ ಅಂಗವಾಗಿ ಸಂಸ್ಥೆಗೆ ಸೇರಿದ ಒಟ್ಟು 76 ಬಸ್‌ಗಳ ಸೇವೆಯನ್ನು ಭಾನುವಾರ ಸ್ಥಗಿತಗೊಳಿಸಲಾಗಿತ್ತು. ವಿವಿಧ ಬೇಡಿಕೆ ಈಡೇರುವವರೆಗೆ ಬಸ್ ಸೇವೆ ಸ್ಥಗಿತಗೊಳಿಸಿ, ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾ
ನಿಸಲಾಯಿತು. ಭಾನುವಾರ ಬಸ್ ಸ್ಥಗಿತಗೊಳಿಸಿದ್ದರಿಂದ ಹಲವು ಭಾಗದ ಜನರಿಗೆ ತೊಂದರೆ ಉಂಟಾಯಿತು.

ತೊಂದರೆ ನಿವಾರಣೆ ದೃಷ್ಟಿಯಿಂದ ಸಾರಿಗೆ ಇಲಾಖೆಗೆ ಸೇರಿದ 10 ಬಸ್‌ಗಳನ್ನು ಭಾನುವಾರ ನಿಯೋಜಿಸಲಾಗಿತ್ತು. ಅಗತ್ಯ ಬಿದ್ದರೆ ಹೆಚ್ಚಿನ ಬಸ್‍ಗಳನ್ನು ನಿಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಸಂಸ್ಥೆ ನೀಡುತ್ತಿರುವ ಸೌಲಭ್ಯ: ಮಲೆನಾಡಿನ ಕುಗ್ರಾಮಗಳಿಗೂ ಸಾರಿಗೆ ಸಂಪರ್ಕ ಕಲ್ಪಿಸಿರುವ ಸಹಕಾರ ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳಿಗೆ ಶೇ 50 ರಿಯಾಯಿತಿ ದರದಲ್ಲಿ ಬಸ್ ಪಾಸ್, ಅಂಗವಿಕಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌, ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ ಪ್ರಯಾಣದ ಅವಕಾಶ, ಮಾಜಿ ಸೈನಿಕರಿಗೆ ಶೇ 25ರ ರಿಯಾಯಿತಿ ಮೂಲಕ ಪ್ರಯಾಣಕ್ಕೆ ಅವಕಾಶ, ಅಂಗವಿಕಲರು, ವಯೋವೃದ್ದರು, ಪತ್ರಕರ್ತರು ಮತ್ತು ಸಹಕಾರ ಸಂಘಗಳ ನೌಕರರಿಗೆ ಶೇ 50 ರಿಯಾಯಿತಿ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಮೂರೂ ತಾಲ್ಲೂಕುಗಳ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಂಸ್ಥೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT