ಭಾಷೆ, ಸಂಸ್ಕೃತಿ ಉಳಿಸಲು ಸರ್ಕಾರ ಬದ್ಧ

7
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೆ.ಜೆ.ಜಾರ್ಜ್

ಭಾಷೆ, ಸಂಸ್ಕೃತಿ ಉಳಿಸಲು ಸರ್ಕಾರ ಬದ್ಧ

Published:
Updated:
Prajavani

ಹೇಮಾವತಿ ಪ್ರಧಾನ ಸಾಹಿತ್ಯ ವೇದಿಕೆ (ಮೂಡಿಗೆರೆ): ‘ಕನ್ನಡ ನಾಡಿನ ಭಾಷೆ, ಸಂಸ್ಕೃತಿಯನ್ನು ಉಳಿಸಲು ಸರ್ಕಾರ ಬದ್ಧವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟರು.

ಪಟ್ಟಣದ ಅಡ್ಯಂತಾಯ ರಂಗಮಂದಿರದ ಹೇಮಾವತಿ ಪ್ರಧಾನ ಸಾಹಿತ್ಯ ವೇದಿಕೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಚಿಕ್ಕಮಗಳೂರು ಜಿಲ್ಲೆಯು ಹಲವು ಸಾಹಿತಿಗಳ ತವರೂರಾಗಿದೆ. ಜಗದ್ವಿಖ್ಯಾತ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು, ತಮ್ಮ ಕೃತಿಗಳ ಮೂಲಕ ಇಡೀ ವಿಶ್ವಕ್ಕೆ ಮಲೆನಾಡಿನ ಪ್ರಕೃತಿಯ ವೈಶಿಷ್ಟ್ಯವನ್ನು ಹರಡಿದ್ದಾರೆ. ‘ಜೈಮಿನಿ ಭಾರತ’ದ ಲಕ್ಷ್ಮೀಶ ಈ ಜಿಲ್ಲೆಯವರು ಎಂಬ ಸಂಗತಿಯು ಹೆಮ್ಮೆ ತರುತ್ತದೆ. ಹೊಯ್ಸಳ ಸಾಮ್ರಾಜ್ಯದ ಮೂಲ ನೆಲೆ ಕೂಡ ಇದೇ ಜಿಲ್ಲೆಯಿಂದ ಪ್ರಾರಂಭವಾಗುತ್ತದೆ. ಇಂತಹ ಹಲವಾರು ವೈಶಿಷ್ಟ್ಯಗಳು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಕಾಣಸಿಗುತ್ತವೆ. ಅಂತಹ ಶ್ರೇಷ್ಠ ನಾಡಿನ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಕಾಪಾಡುವ ಜವಾಬ್ದಾರಿಯ ಪ್ರತಿಯೊಬ್ಬರದ್ದಾಗಿದ್ದು, ಸರ್ಕಾರವು ನಾಡು, ನುಡಿಯ ರಕ್ಷಣೆ ಹಾಗೂ ಭಾಷೆ ಸಂಸ್ಕೃತಿಯ ಉಳಿವಿಗೆ ಸದಾ ಬದ್ಧವಾಗಿರುತ್ತದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ‘ಕನ್ನಡ ಶಾಲೆಗಳಲ್ಲಿ ಕಲಿತವರು ಎಂತಹ ಸಾಧನೆಯನ್ನು ಬೇಕಾದರೂ ಮಾಡುವಂತಹ ಶಕ್ತಿಯನ್ನು ಹೊಂದಿರುತ್ತಾರೆ. ಇದಕ್ಕೆ ವೇದಿಕೆ ಮೇಲೆ ಕುಳಿತಿರುವ ಪ್ರತಿಯೊಬ್ಬರೂ ಸಾಕ್ಷಿಯಾಗಿದ್ದಾರೆ. ಯಾವುದೇ ಭಾಷೆಯ ಮೇಲೆ ಅಭಿಮಾನವಿರಬೇಕೇ ಹೊರತು ಅಂಧಾಭಿಮಾನ ಇರಬಾರದು. ಕೇವಲ ಕನ್ನಡ ಭಾಷೆಯೊಂದನ್ನೇ ಕಲಿತರೆ ಚಿತ್ರದುರ್ಗದಿಂದ ಮುಂದೆ ಸಾಗಲು ಸಾಧ್ಯವಾಗುವುದಿಲ್ಲ! ಕನ್ನಡ ಭಾಷೆಯೊಂದನ್ನೇ ಇಟ್ಟುಕೊಂಡು ಬೆಂಗಳೂರಿನಲ್ಲಿ ಇರುವುದಕ್ಕಾಗುವುದಿಲ್ಲ. ಇದಕ್ಕಾಗಿ ಕನ್ನಡ ಭಾಷೆ ಇರಲಿ. ಅದರೊಂದಿಗೆ ಜೀವನದ ಶಿಕ್ಷಣ ನೀಡುವ ಭಾಷೆಯನ್ನು ಕಲಿಸಬೇಕಾಗುತ್ತದೆ. ಜೀವನದ ಭಾಷೆಯೇ ಪ್ರಧಾನವಾಗದೇ ಮಾತೃಭಾಷೆಯನ್ನು ಪ್ರಧಾನವಾಗಿಸುವ ಕೆಲಸವಾಗಬೇಕಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಮಾತನಾಡಿ, ‘ಕನ್ನಡ ನಾಡಿನಲ್ಲಿ ಕನ್ನಡವನ್ನು ಉಳಿಸಿ ಎಂಬಂತಹ ದಯನೀಯ ಸ್ಥಿತಿಗೆ ಕನ್ನಡಿಗರಾದ ನಾವೇ ಕಾರ್ಣಕರ್ತರಾಗಿದ್ದೇವೆ. ನಾವು ಭಾಷಣಕ್ಕೆ ಮಾತ್ರ ಕನ್ನಡದ ಏಳಿಗೆಯನ್ನು ಬಯಸುತ್ತಿರುವುದು ಈ ದುಸ್ಥಿತಿಗೆ ಕಾರಣವಾಗಿದೆ. ಪ್ರತಿಯೊಬ್ಬರೂ ಕನ್ನಡದ ಏಳಿಗೆಗೆ ಸೈದ್ಧಾಂತಿಕ ಚಟುವಟಿಕೆಯನ್ನು ಬಿಟ್ಟು, ಪ್ರಾಯೋಗಿಕ ಕಾರ್ಯಗಳಲ್ಲಿ ತೊಡಗಬೇಕಿದೆ. ಸಾಹಿತ್ಯ ಸಮ್ಮೇಳನಗಳ ಮೂಲಕ ದತ್ತಿಗಳನ್ನು ನೀಡಿ, ವರ್ಷಪೂರ್ತಿ ಕನ್ನಡ ಚಟುವಟಿಕೆಗಳು ನಡೆಯುವಂತೆ ಪ್ರೋತ್ಸಾಹಿಸಬೇಕಿದೆ’ ಎಂದರು.

ಕಾರ್ಯಕ್ರಮದಲ್ಲಿ ಸಮ್ಮೇಳನಧ್ಯಕ್ಷ ಡಾ. ಡಿ.ಎಸ್.ಜಯಪ್ಪಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸುಜಾತ ಕೃಷ್ಣಪ್ಪ, ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರಾದೇವಿ, ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ.ರತನ್, ಸಮ್ಮೇಳನದ ಕೋಶಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಜಿಲ್ಲಾಧಿಕಾರಿ ಶ್ರೀರಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಕಸಾಪ ತಾಲ್ಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಸುಲೋಚನಾ ಜಯಪ್ಪಗೌಡ, ಲಕ್ಷ್ಮೀಕಾಂತ್ ಇದ್ದರು.

ಬರೆದ ಭಾಷಣ ಓದಿದ ಸಚಿವರು

ಜಿಲ್ಲಾ ಉಸ್ತುವಾರಿ ಸಚಿವರು ತಾವು ಬರೆದು ತಂದಿದ್ದ ಸಿದ್ಧ ಭಾಷಣವನ್ನು ಓದುವ ಮೂಲಕ, ಸಮ್ಮೇಳನದ ಉದ್ಘಾಟನಾ ನುಡಿಗಳನ್ನಾಡಿದರು. ತಮ್ಮ ಸಿದ್ಧ ಭಾಷಣದಲ್ಲಿ ಜಿಲ್ಲೆಯ ವಿವಿಧ ಕವಿಗಳು, ಹೊಯ್ಸಳ ಸಾಮ್ರಾಜ್ಯ, ಐತಿಹಾಸಿಕ ತಾಣಗಳ ಕುರಿತು ಪ್ರಸ್ತಾಪಿಸಿ, ಜಿಲ್ಲೆಯ ಪ್ರಾಮುಖ್ಯತೆಯನ್ನು ಎತ್ತಿಹಿಡಿದರು.

‘ಬಿರುಗಾಳಿ ಪೊಡೆಯಲ್ಕೆ ಫಲಿತ ಕದಲಿ…’

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ತಮಟೆ ಬಾರಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಬೇಕಿತ್ತು. ಆದರೆ, ವೇದಿಕೆ ಮುಂಭಾಗದಿಂದ ರಾಮಾಯಣ ಶ್ಲೋಕ ಎಂದು ಕೂಗಿದ್ದರಿಂದ, ತಮಟೆ ಬೇಡ ಎಂದು ಧ್ವನಿವರ್ಧಕದತ್ತ ತೆರಳಿದ ಅವರು, ‘ಬಿರುಗಾಳಿ ಪೊಡೆಯಲ್ಕೆ ಫಲಿತ ಕದಲಿ…’ ಎಂಬ ರಾಮಾಯಣದ ಸಾಲುಗಳನ್ನು ರಾಗವಾಗಿ ಹಾಡಿ, ಅರ್ಥವನ್ನು ವಿವರಿಸಿ ಕನ್ನಡದ ಉಳಿವಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.

ಶಾಸಕರ ಗೈರಿಗೆ ಬೇಸರ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಳೀಯ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಗೈರು ಎದ್ದು ಕಾಣುತ್ತಿತ್ತು. ಶಾಸಕರ ಗೈರನ್ನು ಪ್ರಸ್ತಾಪಿಸಿದ ಕಸಾಪ ಜಿಲ್ಲಾಧ್ಯಕ್ಷ, ‘ಜಿಲ್ಲಾ ಉಸ್ತುವಾರಿ ಮಂತ್ರಿಗಳ ಬರುವಿಕೆ ಸಂತಸ ತಂದಿದ್ದರೆ, ಸ್ಥಳೀಯ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಗೈರು ಹಾಜರಿಯು ನೋವನ್ನು ತಂದಿದೆ’ ಎಂದು ಭಾವುಕರಾದರು.

ವಿಷಯ ಪ್ರಸ್ತಾಪಿಸಿದ ಮಾಜಿ ಕೇಂದ್ರ ಸಚಿವೆ ಡಿ.ಕೆ.ತಾರಾದೇವಿ, ‘ಇಂದಿನ ರಾಜಕೀಯ ಬೆಳವಣಿಗೆಯು ಎಂ.ಪಿ.ಕುಮಾರಸ್ವಾಮಿ ಗೈರಾಗುವಂತೆ ಮಾಡಿದೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !