ಮೂಡಿಗೆರೆ: ‘ಸರ್ಕಾರದ ವತಿಯಿಂದ ರಚಿಸಲಾಗಿರುವ ಸಂಜೀವಿನಿ ಒಕ್ಕೂಟಗಳು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವಲ್ಲಿ ಯಶಸ್ವಿಯಾಗಿವೆ’ ಎಂದು ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ ಹೇಳಿದರು.
ತಾಲ್ಲೂಕಿನ ಹಂತೂರು ಗ್ರಾಮದಲ್ಲಿ ಸಂಜೀವಿನಿ ಒಕ್ಕೂಟದಿಂದ ಏರ್ಪಡಿಸಿದ್ದ ಸಂಜೀವಿನಿ ಒಕ್ಕೂಟದ ವಾರ್ಷಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಿಳೆಯರಲ್ಲಿ ಕೌಶಲ ಅಭಿವೃದ್ಧಿಗೊಳಿಸಿ ಅವರನ್ನು ಆರ್ಥಿಕವಾಗಿ ಪ್ರಗತಿಶೀಲರನ್ನಾಗಿಸುವ ಸಲುವಾಗಿ ರಾಜ್ಯದೆಲ್ಲೆಡೆ ಸಂಜೀವಿನಿ ಒಕ್ಕೂಟಗಳನ್ನು ರಚಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸ್ವಸಹಾಯ ಸಂಘಗಳ ಸಂಜೀವಿನಿ ಒಕ್ಕೂಟಗಳಿವೆ. ಕಿರು ಉದ್ಯಮಗಳನ್ನು ನಡೆಸುವುದಲ್ಲದೇ, ತಾವು ಉತ್ಪಾದಿಸುವ ವಸ್ತುಗಳಿಗೆ ಮಾರುಕಟ್ಟೆಯನ್ನು ಒದಗಿಸಿ ಕೊಡುವ ಕೆಲಸವನ್ನೂ ಸಂಜೀವಿನಿ ಒಕ್ಕೂಟ ಮಾಡುತ್ತಿದೆ’ ಎಂದರು.
ಹಂತೂರು ಗ್ರಾಮ ಪಂಚಾಯಿತಿ ಸದಸ್ಯ ವಿನೋದ್ ಕಣಚೂರು ಮಾತನಾಡಿ, ‘ಮಹಿಳೆಯರು ಆರ್ಥಿಕವಾಗಿ ಪ್ರಗತಿ ಸಾಧಿಸಿದರೆ ಇಡೀ ಕುಟುಂಬವೇ ಪ್ರಗತಿ ಸಾಧಿಸುತ್ತದೆ. ಮಹಿಳೆಯರು ಸಂಘಗಳ ಮೂಲಕ ಬಿಡುವಿನ ಸಮಯವನ್ನು ಆರ್ಥಿಕತೆಗೆ ಬಳಸಿಕೊಳ್ಳಬೇಕು. ಯಾವುದೇ ಉದ್ದಿಮೆ ಯಶಸ್ಸಿಗೆ ಆರ್ಥಿಕ ಶಿಸ್ತು ಮುಖ್ಯವಾಗಿದ್ದು, ಸಂಘದಲ್ಲೂ ಆರ್ಥಿಕ ಚಟುವಟಿಕೆಗಳಲ್ಲಿ ಶಿಸ್ತನ್ನು ರೂಢಿಸಿಕೊಳ್ಳಬೇಕು’ ಎಂದರು.
ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಎಸ್.ಆರ್. ಭಾಗೀರತಿ, ಹಂತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ನಾಗರಾಜ್, ಉಪಾಧ್ಯಕ್ಷೆ ಪಾರ್ವತಮ್ಮ ಮಾತನಾಡಿದರು. ಸದಸ್ಯರಾದ ವಿನೋದ್, ಶೈಲಾ, ಅಂಬಿಕಾ, ಸಂಜೀವಿನಿ ಒಕ್ಕೂಟ ತಾಲ್ಲೂಕು ನೋಡೆಲ್ ಅಧಿಕಾರಿ ಅಬ್ದುಲ್ ನಾಜಿಂ, ಸಿಬ್ಬಂದಿ ಅಭಿಜಿತ್ ಇದ್ದರು.