ಸರ್ಕಾರಿ ಶಾಲೆ ಮಕ್ಕಳಿಂದ ಗದ್ದೆ ನಾಟಿ

7
ಚಿನ್ನಿಗಾ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ

ಸರ್ಕಾರಿ ಶಾಲೆ ಮಕ್ಕಳಿಂದ ಗದ್ದೆ ನಾಟಿ

Published:
Updated:
Deccan Herald

ಮೂಡಿಗೆರೆ: ರಾಷ್ಟ್ರೀಯ ಹೆದ್ದಾರಿ 234ರ ಅಣಜೂರು ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಅಚ್ಚರಿ ಘಟನೆ ಗ್ರಾಮಸ್ಥರನ್ನಷ್ಟೇ ಅಲ್ಲದೇ ದಾರಿ ಹೋಕ ರನ್ನು ಹುಬ್ಬೇರಿಸುವಂತೆ ಮಾಡಿತು. ಸರ್ಕಾರಿ ಶಾಲೆಯಲ್ಲಿ ಪೆನ್ನು ಹಿಡಿಯ ಬೇಕಿದ್ದ ಪುಟ್ಟ ಕೈಗಳು ಪಟಪಟನೆ ಭತ್ತದ ಸಸಿಗಳನ್ನು ಕಿತ್ತು, ನೋಡು ನೋಡುತ್ತಿದ್ದಂತೆಯೇ ನಾಟಿ ಕಾರ್ಯ ಮಾಡಿದ್ದು ನುರಿತ ಕೃಷಿ ಕಾರ್ಮಿಕರನ್ನು ನಾಚಿಸುವಂತಾಯಿತು. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು ಅಣಜೂರು ಗ್ರಾಮದ ನಾಗೇಶ್‌ ಅವರ ಭತ್ತದ ಗದ್ದೆ.

ತಾಲ್ಲೂಕಿನ ಜನ್ನಾಪುರ (ಚಿನ್ನಿಗಾ) ಸಮೀಪದಲ್ಲಿರುವ ಅಣಜೂರು ಗ್ರಾಮದ ನಾಗೇಶ್‌ ಅವರು ಭತ್ತದ ನಾಟಿಗಾಗಿ ಸಿದ್ಧತೆ ಮಾಡಿಕೊಂಡು, ಬುಧವಾರ ನಾಟಿ ಕಾರ್ಯಕ್ಕೆ ಮುಂದಾ ಗಿದ್ದರು. ಬೆಳಿಗ್ಗೆ ಶಾಲಾ ಅವಧಿಗೆ ಸರಿಯಾಗಿ ಚಿನ್ನಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6 ಹಾಗೂ 7ನೇ ತರಗತಿಯ ಸುಮಾರು 60ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಸಮವಸ್ತ್ರದಲ್ಲಿಯೇ ಬಂದು ನಾಟಿ ಕಾರ್ಯದಲ್ಲಿ ಪಾಲ್ಗೊಂಡು, ಭತ್ತದ ಬೆಳೆ ಕ್ಲಿಷ್ಟ ಎಂದು ಕೈಬಿಟ್ಟಿರುವ ರೈತರು ನಾಚುವಂತೆ ನಾಟಿ ಮಾಡಿದರು.

ವಿವಿಧ ಗುಂಪುಗಳನ್ನಾಗಿ ಮಾಡಿ ಕೊಂಡು ಸಸಿ ಮಡಿಗಳಿಗೆ ಇಳಿದ ಶಿಕ್ಷಕರು ಹಾಗೂ ಮಕ್ಕಳು ಸಸಿ ಕಿತ್ತು ಕಂತೆ ಕಟ್ಟಿದರೆ, ಕೆಲವು ಮಕ್ಕಳು ಕಟ್ಟಿದ ಕಂತೆಗಳನ್ನು ನಾಟಿ ಗದ್ದೆಗೆ ಸಾಗಿಸಿದರು. ಮತ್ತೊಂದಷ್ಟು ಮಕ್ಕಳು ನಾಟಿಗಾಗಿ ಸಿದ್ಧವಾಗಿದ್ದ ಭತ್ತದ ಗದ್ದೆಗೆ ಇಳಿದು ಸಸಿಗಳನ್ನು ನೆಟ್ಟು ಮಂದಹಾಸ ಬೀರಿದರು.

ವಿದ್ಯಾರ್ಥಿಗಳು ನಾಟಿ ಕಾರ್ಯದಲ್ಲಿ ತೊಡಗಿರುವ ಸುದ್ದಿ ಹರಡುತ್ತಿದ್ದಂತೆ ಅಕ್ಕ ಪಕ್ಕದ ಗದ್ದೆಯಲ್ಲಿದ್ದ ಕೃಷಿ ಕಾರ್ಮಿಕರು, ದಾರಿ ಹೋಕರು ಕುತೂಹಲದಿಂದ ಬಂದು ವೀಕ್ಷಿಸಿದರು.

ಮಕ್ಕಳು ಗದ್ದೆನಾಟಿಯಲ್ಲಿ ಭಾಗಿಯಾಗಿರುವ ಕುರಿತು ಶಿಕ್ಷಕ ಪ್ರೇಮ್‌ಕುಮಾರ್‌ ಅವರನ್ನು ‘ಪ್ರಜಾವಾಣಿ’ ಮಾತಿಗೆಳೆದಾಗ ‘ಮಕ್ಕಳಿಗೆ ಶಾಲೆಯೊಳಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ. ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳು, ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಶಿಕ್ಷಣಕ್ಕೆ ಸಹಕಾರಿ ಯಾಗುತ್ತವೆ. ಆದರೆ ಅವರಿಗೆ ಕೃಷಿಯ ಅನುಭವವನ್ನು ಒದಗಿಸಬೇಕು ಎಂಬ ಹಿನ್ನೆಲೆಯಲ್ಲಿ ನಾಟಿಕಾರ್ಯದ ಯೋಜನೆ ರೂಪಿಸಿದ್ದು, ಮಕ್ಕಳೆಲ್ಲರೂ ಸ್ವ ಪ್ರೇರಣೆಯಿಂದ ಬಂದು ಕ್ರೀಯಾಶೀಲರಾಗಿ ಭಾಗವಹಿಸಿದ್ದು ಕೃಷಿ ಬದುಕನ್ನು ಪರಿಚಯಿಸಲು ಸುಲಭ ವಾಯಿತು’ ಎಂದರು.

‘ನನಗೆ ಕೃಷಿ ವಿಜ್ಞಾನಿಯಾಗಬೇಕು ಎಂಬ ಆಸೆಯಿದೆ. ಎಲ್ಲರೂ ಸರ್ಕಾರಿ ಕೆಲಸಗಳಿಗೆ ಹೋದರೆ ಕೃಷಿ ಚಟುವಟಿಕೆ ನಡೆಯುವುದಾದರೂ ಹೇಗೆ? ನಾನು ರಜೆ ದಿನಗಳಲ್ಲಿ ಪೋಷಕರೊಂದಿಗೆ ನಮ್ಮ ಗದ್ದೆ ನಾಟಿ ನೋಡಲು ಹೋಗು ತ್ತಿದ್ದೆ, ಇಂದು ಗದ್ದೆಗಿಳಿದು ನಾಟಿ ಮಾಡಿದ್ದು ಬಹಳ ಖುಷಿ ನೀಡಿತು’ ಎಂದು ಕೈಯಲ್ಲಿ ಸಸಿ ಹಿಡಿದೇ ಕೃಷಿ ಕಾರ್ಯದ ಅನುಭವವನ್ನು ಶಾಲಾ ವಿದ್ಯಾರ್ಥಿ ಮಂಡಳಿಯ ಮುಖ್ಯಮಂತ್ರಿ ಯಾಗಿರುವ ಖುಷಿ ಎಂಬ ವಿದ್ಯಾರ್ಥಿನಿ ಸಂಭ್ರಮದಿಂದ ಹಂಚಿಕೊಂಡಳು.

ಮಲೆನಾಡಿನಲ್ಲಿ ಭತ್ತದ ಕೃಷಿ ಪ್ರಮಾಣ ಇಳಿಕೆಯತ್ತ ಸಾಗುತ್ತಿದ್ದು, ಭತ್ತದ ಬೆಳೆಯನ್ನು ಕೈ ಬಿಡುವವರ ಪ್ರಮಾಣವೇ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಗದ್ದೆಗಿ ಳಿದು ನಾಟಿ ಕಾರ್ಯದ ಅನುಭವ ಪಡೆ ದದ್ದು ಪೋಷಕರಲ್ಲೂ ಮೆಚ್ಚುಗೆಗೆ ಪಾತ್ರವಾಯಿತು. ತಾವು ನೆಟ್ಟಿರುವ ಭತ್ತದ ಸಸಿಗಳು ಹೇಗೆ ಫಲ ನೀಡುತ್ತವೆ ಎಂಬ ಕಾತುರ ನಾಟಿಕಾರ್ಯ ಮುಗಿಸಿ ಹಿಂತಿರುಗುತ್ತಿದ್ದ ವಿದ್ಯಾರ್ಥಿಗಳ ಕಂಗಳಲ್ಲಿ ಎದ್ದು ಕಾಣುತ್ತಿತ್ತು.

ನಾಟಿ ಕಾರ್ಯದಲ್ಲಿ ಮುಖ್ಯ ಶಿಕ್ಷಕ ವಿಟ್ಯಾನಾಯಕ್‌, ಶಿಕ್ಷಕರಾದ ತಿಪ್ಪೇಸ್ವಾಮಿ, ರಮ್ಲಾಂಬೇಗಂ, ಸುರೇಖಾ ಮಲ್ಲಿಕಾ, ಅಶೋಕ್‌, ಗದ್ದೆ ಮಾಲೀಕ ನಾಗೇಶ್‌ ಮುಂತಾದವರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !