ಶುಕ್ರವಾರ, ಆಗಸ್ಟ್ 12, 2022
23 °C
ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಕೋಡಿನ ಪ್ರಾಥಮಿಕ ಶಾಲೆಯ ದುಸ್ಥಿತಿ

ಶಿಥಿಲಗೊಂಡ ಶಾಲಾ ಕಟ್ಟಡ: ಅಪಾಯದಲ್ಲಿ ಮಕ್ಕಳು

ರವಿ ಕೆಳಂಗಡಿ Updated:

ಅಕ್ಷರ ಗಾತ್ರ : | |

Prajavani

ಕಳಸ: ಈ ಶಾಲೆಗೆ ಕಾಯಂ ಶಿಕ್ಷಕರು ಇಲ್ಲ. ಮೂಲಸೌಕರ್ಯ ಸಮರ್ಪಕವಾಗಿಲ್ಲ. ಶಾಲಾ ಕಟ್ಟಡ ಶಿಥಿಲಗೊಂಡಿದ್ದು ಕುಸಿಯುವ ಸ್ಥಿತಿಯಲ್ಲಿದೆ. ಹೆಂಚು ಮಕ್ಕಳ ತಲೆಯ ಮೇಲೆ ಉದುರಿ ಬೀಳುವಂತಿದೆ. ಇದು ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಕೋಡಿನ ಪ್ರಾಥಮಿಕ ಶಾಲೆಯ ದುಸ್ಥಿತಿ.

ತಾಲ್ಲೂಕಿನ ಹದಗೆಟ್ಟ ಶಾಲೆಗಳ ಪಟ್ಟಿಗೆ ಈಗಾಗಲೇ ಈ ಶಾಲೆಯನ್ನು ಸೇರ್ಪಡೆ ಮಾಡಲಾಗಿದೆ. ಶಾಲೆಯಲ್ಲಿ 18 ಮಕ್ಕಳು ಇದ್ದರೂ ಒಬ್ಬರೂ ಕಾಯಂ ಶಿಕ್ಷಕರು ಇಲ್ಲ. ಒಬ್ಬರು ಅತಿಥಿ ಶಿಕ್ಷಕಿ ಮಾತ್ರ ಇದ್ದು, ಅವರು ರಜೆ ಮಾಡಿದರೆ, ಆ ದಿನ ಶಾಲೆಯನ್ನೇ ಮುಚ್ಚಬೇಕಾದ ಸ್ಥಿತಿ ಇದೆ.

ಶಾಲೆಯ ಚಾವಣಿಯನ್ನು ಗೆದ್ದಲು ತಿಂದಿದ್ದು ಹೆಂಚುಗಳು ಆಗಲೋ, ಈಗಲೋ ಬೀಳುವಂತಿದೆ. ಶಾಲೆಯ ಕೋಣೆಯೊಳಗೆ ಸದಾ ನೇತಾಡುವ ಬಾವಲಿಗಳು ಕಟ್ಟಡದ ದುಸ್ಥಿತಿಗೆ ಸಾಕ್ಷಿ ಹೇಳುವಂತಿದೆ. ವಿದ್ಯುತ್ ಮೀಟರ್‌ ಮೇಲೆ ಮಳೆನೀರು ಬೀಳುತ್ತಿದ್ದು, ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. 

ಕೊಠಡಿಯೊಳಗೆ ನೀರು ಸೋರುತ್ತಿರುವುದರಿಂದ ಕಂಪ್ಯೂಟರ್‌ಗಳು ಗೋದಾಮಿನ ಪಾಲಾಗಿವೆ. ಶಾಲೆಯ ಅಡುಗೆ ಮನೆಯಲ್ಲಿ ನೈರ್ಮಲ್ಯದ ಕೊರತೆ ಇದ್ದು, ಆರೋಗ್ಯಕರ ಊಟ ಮಕ್ಕಳ ಪಾಲಿಗೆ ಕನಸಿನ ಮಾತಾಗಿದೆ.

'ಹೆಂಚು ಯಾವಾಗ ಬೇಕಾದರೂ ನಮ್ಮ ಮೇಲೆ ಬೀಳಬಹುದು. ಹೀಗಾಗಿ ಕೋಣೆಯ ಒಳಗೆ ಕೂರಲು ಭಯ ಆಗುತ್ತದೆ. ಮಳೆ ಬಂದಾಗ ಮಳೆನೀರು ಮೈಮೇಲೆ ಬೀಳುತ್ತದೆ. ಶಾಲೆಯ ಕೋಣೆಯ ಒಳಗೆ ಬಾವಲಿಗಳು ಇರುತ್ತವೆ’ ಎಂದು ಶಾಲೆಯ ವಿದ್ಯಾರ್ಥಿಗಳು ಬೇಸರದಿಂದ ಹೇಳಿದರು. 

‘ಕಳೆದ ಬೇಸಿಗೆಯಲ್ಲಿ ಶಾಲೆಯ ಚಾವಣಿ ದುರಸ್ತಿ ಮಾಡಬೇಕಿತ್ತು. ಆದರೆ, ಮಾಡಿಲ್ಲ. ಹೀಗಾಗಿ ಈ ಮಳೆಗಾಲದಲ್ಲಿ ಚಾವಣಿ ಕುಸಿಯುವ ಸಾಧ್ಯತೆ ಇದೆ.  ವಿದ್ಯುತ್‌ ಸಂಪರ್ಕ ಇದೆ, ಆದರೆ, ಮಳೆ ನೀರು ಸೋರುತ್ತಿರುವುದರಿಂದ ಸ್ವಿಚ್‌ ಮುಟ್ಟಿದವರಿಗೆ ಶಾಕ್ ಹೊಡೆಯುತ್ತದೆ. ಶಾಲೆಗೆ ಒಬ್ಬ ಅತಿಥಿ ಶಿಕ್ಷಕರನ್ನು ಮಾತ್ರ ಕೊಟ್ಟಿದ್ದಾರೆ. ಆದರೆ, ಶಾಲೆಗೆ ಹೆಚ್ಚುವರಿ ಶಿಕ್ಷಕರು ಬೇಕು' ಎಂದು ಪೋಷಕ ಕೇಶವ ಆಚಾರ್ ಶಾಲೆಯ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು