ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಬಿಂಬ ಟ್ರಸ್ಟ್ ಸಹಕಾರ; ಗ್ರಾಮೀಣ ಶಾಲೆಗಳ ಉನ್ನತೀಕರಣಕ್ಕೆ ಪಣ

ಮಾದರಿಯಾದ ಇಡಕಿಣಿ, ಸಂಸೆ ಶಾಲೆಗಳು
Last Updated 20 ಮಾರ್ಚ್ 2022, 4:52 IST
ಅಕ್ಷರ ಗಾತ್ರ

ಕಳಸ: ಇಡಕಿಣಿ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಸಂಸೆಯ ಸರ್ಕಾರಿ ಪ್ರೌಢಶಾಲೆಗಳು ತಾಲ್ಲೂಕಿನಲ್ಲೇ ಮಾದರಿ ಶಾಲೆಗಳಾಗಿವೆ. ಈ ಹೆಗ್ಗಳಿಕೆಗೆ ಕಾರಣ ಅಲ್ಲಿನ ಶಿಕ್ಷಕರ ಮನಃಪೂರ್ವಕ ಕೆಲಸದ ಜೊತೆಗೆ ಬೆಂಗಳೂರಿನ ಪ್ರತಿಬಿಂಬ ಟ್ರಸ್ಟ್ ಸಹಕಾರ. ಇವೆರಡೂ ಶಾಲೆಗಳನ್ನು ದತ್ತು ಪಡೆದಿರುವ ಪ್ರತಿಬಿಂಬ ಟ್ರಸ್ಟ್ ಗ್ರಾಮೀಣ ಶಾಲೆಗಳ ಉನ್ನತೀಕರಣಕ್ಕೆ ಹೊಸ ಭಾಷ್ಯವನ್ನೇ ಬರೆಯುತ್ತಿದೆ.

2020ರಲ್ಲಿ ಜಿಲ್ಲೆಯ ಏಳು ಶಾಲೆಗಳನ್ನು ಶಿಕ್ಷಣ ಇಲಾಖೆಯ ಜೊತೆಗಿನ ಒಪ್ಪಂದದ ಮೇರೆಗೆ ಈ ಟ್ರಸ್ಟ್ ದತ್ತು ಪಡೆದುಕೊಂಡಿದ್ದು, ಎಲ್ಲ ಶಾಲೆಗಳು ಕೂಡ ಈ ಎರಡು ವರ್ಷಗಳ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಹೊಂದಿವೆ. ಈ ಶಾಲೆಗಳಿಗೆ ಸ್ಮಾರ್ಟ್ ಟಿವಿ, ಧ್ವನಿವರ್ಧಕ, ಕಂಪ್ಯೂಟರ್, ವೆಬ್ ಕ್ಯಾಮೆರಾ, ನಲಿ ಕಲಿ ಕೊಠಡಿಗೆ ಟೇಬಲ್-ಕುರ್ಚಿ, ಇನ್ವರ್ಟರ್-ಬ್ಯಾಟರಿ, ಪ್ರಥಮ ಚಿಕಿತ್ಸೆ ಕಿಟ್‍ಗಳು, ಹೆಣ್ಣು ಮಕ್ಕಳಿಗೆ ಶುಚಿತ್ವದ ಸಾಧನಗಳು, ಎಲ್ಲ ಮಕ್ಕಳಿಗೆ ಬ್ಯಾಗ್, ಪುಸ್ತಕ, ಛತ್ರಿಗಳನ್ನು ಟ್ರಸ್ಟ್ ವಿತರಿಸಿದೆ.

ವಸ್ತುಗಳನ್ನು ಮಾತ್ರ ದೇಣಿಗೆ ನೀಡಿದ್ದಲ್ಲ, ಬದಲಿಗೆ ಪ್ರತಿನಿತ್ಯವೂ ಈ ಶಾಲೆಗಳ ಬೇಕು, ಬೇಡಗಳ ಬಗ್ಗೆ ವಿಶೇಷ ನಿಗಾವಹಿಸಿದೆ. ಗೂಗಲ್ ಮೀಟ್ ಮೂಲಕ ಶಿಕ್ಷಕರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಂಸ್ಥೆ ಯತ್ನಿಸುತ್ತಿದೆ. ದತ್ತು ಪಡೆದ ಶಾಲೆಗಳ ಶಿಕ್ಷಕರು ಕೂಡ ಟ್ರಸ್ಟ್‌ನ ಆಶಯಕ್ಕೆ ತಕ್ಕಂತೆ ಸ್ಪಂದಿಸುತ್ತಿದ್ದು ಈ ಶಾಲೆಗಳಲ್ಲಿ ಶಿಕ್ಷಣ ಕ್ರಾಂತಿ ನಡೆಯುತ್ತಿದೆ.

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಿಶೇಷ ಆನ್‍ಲೈನ್ ಕಾರ್ಯಾಗಾರಗಳು, ಎಲ್ಲ ಮಕ್ಕಳಿಗೂ ವರ್ಷವಿಡೀ ವಿವಿಧ ತರಬೇತಿ, ಸ್ಪರ್ಧೆ ಆಯೋಜಿಸಿ ಮಕ್ಕಳಲ್ಲಿ ಸ್ಪರ್ಧಾತ್ಮಕತೆ ತುಂಬುತ್ತಿದೆ. ಗ್ರಾಮಾಂತರ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಬೇಕು, ಮಕ್ಕಳು ತಮ್ಮ ಮನೆಗೆ ಸಮೀಪದ ಶಾಲೆಗಳಲ್ಲೇ ಓದ ಬೇಕು ಎಂಬ ಟ್ರಸ್ಟ್ ಆಶಯ ಈ ದತ್ತು ಶಾಲೆಗಳ ವಿಚಾರದಲ್ಲಿ ಈಡೇರುತ್ತಿದೆ.

‘ಪ್ರತಿಬಿಂಬ ಟ್ರಸ್ಟ್‌ನವರು ಶಾಲೆಗೆ ಏನೇ ವಸ್ತು ಬೇಕಿದ್ದರೂ ಕೂಡಲೇ ಸ್ಪಂದಿಸಿ ಪೂರೈಸುತ್ತಾರೆ. ಶಾಲೆಯ ವಾತಾವರಣವೇ ಬದಲಾಗಿದ್ದು ಏಕೋಪಾ ಧ್ಯಾಯ ಶಾಲೆಯಲ್ಲಿ ಸ್ಮಾರ್ಟ್ ಟಿವಿಗಳ ಮೂಲಕ ವಿದ್ಯೆ ಕಲಿಸಲು ಅನು ಕೂಲ ಆಗುತ್ತಿದೆ. ಗುಣಮಟ್ಟದ ಶೈಕ್ಷಣಿಕ ಪರಿಕರಗಳ ಪೂರೈಕೆ ಕಾರಣಕ್ಕೆ ಶಾಲೆಯ ಚಿತ್ರಣವೇ ಬದಲಾಗಿದೆ’ ಎಂದು ಇಡಕಿಣಿ ಶಾಲೆಯ ಶಿಕ್ಷಕ ಮಧುಸೂದನ್‌ ಸಂತಸದಿಂದ ಹೇಳುತ್ತಾರೆ.

ಪ್ರತಿಬಿಂಬ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಮುರುಳಿ ವಿ.ರಾವ್ ‘ಪ್ರಜಾವಾಣಿ’ ಜೊತೆ ಮಾತನಾಡಿ, ನಮ್ಮ ಟ್ರಸ್ಟ್‌ನಲ್ಲಿ 100 ಸದಸ್ಯರು ಇದ್ದು, ಮಹೇಂದ್ರ, ಜಯಶ್ರೀ, ನಾಗೇಶ್, ರೇವತಿ, ವಲ್ಲಿಶಾ, ನಾಗೇಂದ್ರ ಕೋರ್ ಕಮಿಟಿಯಲ್ಲಿ ಇದ್ದಾರೆ. ಬೆಂಗಳೂರು ಸುತ್ತಮುತ್ತಲಿನ ಶಾಲೆಗಳಿಗೆ ಕಾರ್ಪೊರೇಟ್ ಸಂಸ್ಥೆಗಳ ಅನುದಾನ ಸಿಗುತ್ತದೆ. ಆದರೆ ದೂರದ ಕಳಸ ತಾಲ್ಲೂಕಿನಂತಹ ಶಾಲೆಗಳಿಗೆ ಸೌಲಭ್ಯ ನೀಡಲು ನಾವು ಕೆಲಸ ಮಾಡುತ್ತಿದ್ದೇವೆ. ನಮ್ಮ ಟ್ರಸ್ಟ್‌ ಸದಸ್ಯರ ಸ್ವಂತ ಹಣ ಮತ್ತು ಕಾರ್ಪೊರೇಟ್ ಸಂಸ್ಥೆ ನೆರವಿನಿಂದ ದತ್ತು ಯೋಜನೆ ನಡೆಸುತ್ತಿದ್ದೇವೆ’ ಎಂದರು.

‘ಕಳೆದ ವರ್ಷ ಡಿಯಾಜಿಯೋ ಸಂಸ್ಥೆ ನಮಗೆ ಹೆಚ್ಚಿನ ಸಹಕಾರ ನೀಡಿದೆ. 15 ಶಾಲೆಗಳ ಅಭಿವೃದ್ಧಿಗೆ ಎಲ್ಲ ಅಗತ್ಯ ಪರಿಕರ ನೀಡಿದ್ದೇವೆ. ಈ ವರ್ಷ 40 ಶಾಲೆಗಳಿಂದ ಬೇಡಿಕೆ ಬಂದಿದೆ. ಮನೆಯಲ್ಲೇ ಶಿಕ್ಷಣ ಪಡೆಯುವ 220 ಮಕ್ಕಳಿಗೆ ₹ 4.5 ಲಕ್ಷ ವೆಚ್ಚದ ನೈರ್ಮಲ್ಯ ಮತ್ತು ಶೈಕ್ಷಣಿಕ ಕಿಟ್ ವಿತರಿಸಿದ್ದೇವೆ’ ಎಂದು ಹೇಳುತ್ತಾರೆ.

‘ತಂತ್ರಜ್ಞಾನದ ಬಳಕೆಯಿಂದ ಬಡ, ಸೌಲಭ್ಯ ವಂಚಿತ ವಿದ್ಯಾರ್ಥಿಗಳಲ್ಲಿ ಕಲಿಯುವ ಹುಮ್ಮಸ್ಸು ಮತ್ತು ಶಿಕ್ಷಕರಲ್ಲಿ ಕಲಿಸುವ ಉತ್ಸಾಹ ಕೂಡ ಹೆಚ್ಚುತ್ತಿದೆ. ಶಾಲೆ ದತ್ತು ಪಡೆದ ಸಂಸ್ಥೆಯ ಯಶಸ್ಸಿಗೆ ಇದಕ್ಕಿಂತ ಯಾವ ಮಾನದಂಡ ಬೇಕಿದೆ’ ಎಂದು ಸಂಸೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಲೋಕೇಶ್ ಸತೀಶ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT