ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಕುಬುಕು ಸ್ಕೂಲು, ಓಡೋದಿಲ್ಲ ಎಲ್ಲೂ!

ಲಾಕ್‌ಡೌನ್ ಅವಧಿಯಲ್ಲಿ ಸಂಸೆ ಸರ್ಕಾರಿ ಶಾಲೆಯ ಸ್ವರೂಪವೇ ಬದಲು!
Last Updated 1 ಜೂನ್ 2020, 2:00 IST
ಅಕ್ಷರ ಗಾತ್ರ

ಕಳಸ: ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚಿನ ವರು ಮನೆಯ ಒಳಗೆ ಉಳಿ ದರೆ; ಸಂಸೆಯ ಶಿಕ್ಷಕರ ತಂಡವೊಂದು ಈ ಅವಧಿಯಲ್ಲಿ ಶಾಲೆಯ ಹೊರ ನೋಟವನ್ನೇ ಸಂಪೂರ್ಣವಾಗಿ ಬದಲಿಸಿದ ಹೆಚ್ಚುಗಾರಿಕೆ ಸಾಧಿಸಿದೆ.

ಅನೇಕ ವರ್ಷಗಳಿಂದ ಸುಣ್ಣ–ಬಣ್ಣ ಕಾಣದೆ ಮಂಕಾಗಿದ್ದ ಸಂಸೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಇದೀಗ ನವೀನ ವಿನ್ಯಾಸದ ಬಣ್ಣಗಳಿಂದ ಕಣ್ಮನ ಸೆಳೆಯುತ್ತಿದೆ. ಸೃಜನಶೀಲ ಚಿತ್ರಕಾರರ ಕೈಚಳಕದಿಂದಾಗಿ ಎಲ್ಲರ ಗಮನ ಇತ್ತ ಹರಿಯುತ್ತಿದೆ.

ಮಾರ್ಚ್ ಅಂತ್ಯದ ವೇಳೆಗೆ ಆರಂಭಿಸಿದ ಬಣ್ಣದ ಕೆಲಸ 2 ತಿಂಗಳ ಸತತ ಶ್ರಮದ ನಂತರ ಬುಧವಾರ ಮುಗಿದಿದೆ. ಶಾಲೆಯ ಎಲ್ಲ ಕೊಠಡಿಗಳ ಹೊರ ಗೋಡೆಯನ್ನು ರೈಲು ಬೋಗಿಗಳ ವಿನ್ಯಾಸದಲ್ಲಿ ಚಿತ್ರಿಸಲಾಗಿದೆ. ಒಳಗೋಡೆಗಳ ಮೇಲೂ ಶೈಕ್ಷಣಿಕ ಭಾವ ಹೆಚ್ಚಿಸುವಂತಹ ಚಿತ್ರಗಳನ್ನು ಬರೆಯಲಾಗಿದೆ. ರೈಲು ಬೋಗಿಯ ಬಣ್ಣಕ್ಕೆ ಒಪ್ಪುವಂತೆ ಹೊರಗಿನ ಕಂಬಗಳು ಮತ್ತು ವರಾಂಡಕ್ಕೂ ಬಣ್ಣ ಬಳಿಯಲಾಗಿದೆ.

ಸಂಸೆ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಸಲೀಮ್ ಜಾವೇದ್ ಸ್ವತಃ ವಿನ್ಯಾಸ ಮಾಡಿ ಬಣ್ಣ ಬಳಿಯುವ ಕೆಲಸದಲ್ಲೂ ಅವಿರತವಾಗಿ ತೊಡಗಿಕೊಂಡಿದ್ದರು. ಅದೇ ಶಾಲೆಯ ಶಿಕ್ಷಕ ಜಾಬೀರ್ ಶಾಲೆಗೆ ಬಣ್ಣ ಖರೀದಿಸಲು ₹ 90 ಸಾವಿರ ಮಾತ್ರ ಹಣ ಪಡೆದುಕೊಂಡು, ಉಳಿದ ಎಲ್ಲ ಕೆಲಸವನ್ನು ಶಿಕ್ಷಕರ ತಂಡದ ಮೂಲಕ ನೆರವೇರಿಸಿದ್ದಾರೆ.

ಶಿಕ್ಷಕರಾದ ಕೊಟ್ಟಿಗೆಹಾರ ಶಾಲೆಯ ಕಿರಣ್, ಗಾಳಿಗಂಡಿ ಶಾಲೆಯ ಮಧುಸೂದನ್, ಸಂಸೆಯ ಶ್ರೀಕಾಂತ್, ಎಚ್.ಎಂ.ಶಶಿಕುಮಾರ್, ಲೋಕೇಶ್, ಸತೀಶ್ ಕೂಡ ಶಾಲೆಯ ನವೀನ ವಿನ್ಯಾಸದ ಬಣ್ಣ ಬಳಿಯುವ ಕೆಲಸದಲ್ಲಿ ಮನಪೂರ್ವಕವಾಗಿ ತೊಡಗಿಸಿಕೊಂಡಿದ್ದರು.

ಎರಡು ತಿಂಗಳ ಲಾಕ್‌ಡೌನ್ ಅವಧಿಯಲ್ಲೂ ಈ ತಂಡ ಸತತವಾಗಿ ಶಾಲೆಗೆ ತೆರಳಿ ಬಣ್ಣ ಬಳಿಯುವ ಕೆಲಸವನ್ನು ಒಂದು ರೂಪಾಯಿ ಸಂಭಾವನೆ ಕೂಡ ಪಡೆಯದೆ ಅತ್ಯಂತ ಕರಾರುವಾಕ್‌ ಆಗಿ ಮಾಡಿದೆ. ಆಸುಪಾಸಿನ ಊರುಗಳಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.

ಸಂಸೆ ಗ್ರಾಮದ ಈ ಶಾಲೆಯಲ್ಲಿ ಕೇವಲ ಇಬ್ಬರು ಕಾಯಂ ಶಿಕ್ಷಕರು ಇದ್ದು, ಉಳಿದವರು ಅತಿಥಿ ಶಿಕ್ಷಕರೇ ಆಗಿದ್ದಾರೆ. ಇನ್ನಷ್ಟು ಕಾಯಂ ಶಿಕ್ಷಕರನ್ನು ಇಲ್ಲಿಗೆ ನೇಮಿಸಿದರೆ ಶಾಲೆಯ ಗುಣಮಟ್ಟ ಹೆಚ್ಚಿಸಬಹುದು ಎಂದು ಸ್ಥಳೀಯರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT