ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮಘಟ್ಟ; ಪ್ರತ್ಯೇಕ ಪ್ರವಾಸೋದ್ಯಮ ನೀತಿ: ಸಿ.ಟಿ.ರವಿ

‘ವಿಷನ್‌–2023’– ಸಾರ್ವಜನಿಕರಿಂದ ಸಲಹೆಸೂಚನೆ ಆಹ್ವಾನ ಸಭೆ
Last Updated 13 ಸೆಪ್ಟೆಂಬರ್ 2019, 10:34 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನವ ಪ್ರವಾಸೋದ್ಯಮ ನೀತಿಯಲ್ಲಿ ಪ್ರತ್ಯೇಕವಾಗಿ ಪಶ್ಚಿಮಘಟ್ಟ ಪ್ರವಾಸೋದ್ಯಮ ನೀತಿ ರೂಪಿಸುವ ನಿಲುವು ತಳೆಯಲಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ‘ವಿಷನ್‌–2023’ ಸಾರ್ವಜನಿಕರಿಂದ ಸಲಹೆಸೂಚನೆ ಆಹ್ವಾನ ಸಭೆಯಲ್ಲಿ ಮಾತನಾಡಿದರು. ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ. ಪರಿಸರ ತಜ್ಞರು, ಪ್ರವಾಸೋದ್ಯಮ ಇಲಾಖೆಯವರೊಂದಿಗೆ ಸಮಾಲೋಚನೆ ಮಾಡುತ್ತೇವೆ. ಪಶ್ಚಿಮಘಟ್ಟಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಘೋಷಣೆ ಮಾಡಲು ಗಮನ ಹರಿಸುತ್ತೇವೆ. ಪರಂಪರೆಗೆ ಸಂಬಂಧಪಟ್ಟಂತೆಯೂ ಪ್ರತ್ಯೇಕ ನೀತಿಯನ್ನು ರೂಪಿಸುತ್ತೇವೆ ಎಂದು ಹೇಳಿದರು.

ಸಭೆಯಲ್ಲಿ ವ್ಯಕ್ತವಾಗಿರುವ ಸಲಹೆಗಳನ್ನು ಆಧರಿಸಿ ಸಂಬಂಧಪಟ್ಟ ಇಲಾಖೆಯವರು ವಿಸ್ತೃತ ಯೋಜನಾ ವರದಿ(ಡಿಪಿಆರ್‌) ಸಿದ್ಧಪಡಿಸಬೇಕು. ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಗೆ ವಿಂಗಡಣೆ ಮಾಡಬೇಕು. ಆದ್ಯತೆ ಮೇರೆಗೆ ಕಾರ್ಯಗತಕ್ಕೆ ಗಮನ ಹರಿಸಲಾಗುವುದು. ಕೆಲವನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಚಿಕ್ಕಮಗಳೂರು– ಹಾಸನ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ರೈಲ್ವೆ ಖಾತೆ ರಾಜ್ಯ ಸಚಿವರೊಂದಿಗೆ ಚರ್ಚಿಸಲಾಗಿದೆ. ಅದು ಕಾರ್ಯಗತವಾಗಲಿದೆ. ಕೈಗಾರಿಕಾ ಪಾರ್ಕ್‌ ಯೋಜನೆಗೆ ದೇವನೂರು ಬಳಿ 35 ಎಕರೆ ಜಾಗ ಪರಿಶೀಲಿಸಲಾಗಿದೆ. ಗಿರಿಶ್ರೇಣಿಗೆ ತಾಣಗಳಿಗೆ ಖಾಸಗಿ ವಾಹನಗಳಿಗೆ ನಿರ್ಬಂಧ, ಕೆಎಸ್‌ಟಿಡಿಸಿ ಬಸ್ಸುಗಳ ವ್ಯವಸ್ಥೆ ಮಾಡಲು ನಿಟ್ಟಿನಲ್ಲಿಯೂ ಗಮನ ಹರಿಸಲಾಗುವುದು. ಯಾವುದೇ ಸಲಹೆಯನ್ನು ಕಡೆಗಣಿಸುವುದಿಲ್ಲ. ಹಂತಹಂತವಾಗಿ ಕಾರ್ಯಗತಕ್ಕೆ ಪ್ರಯತ್ನಿಸಲಾಗುವುದು ಎಂದರು.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಗೃಹಕಚೇರಿಯಲ್ಲಿ ಆಗಸ್ಟ್‌ 30ರಂದು ನಡೆದ ಸಭೆಯಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಬಹಳಷ್ಟು ವಿಷಯಗಳ ಕುರಿತು ಚರ್ಚಿಸಲಾಗಿದೆ. ವೈದ್ಯಕೀಯ ಕಾಲೇಜು ಸ್ಥಾಪನೆ, ಜಿಲ್ಲಾಸ್ಪತ್ರೆಯನ್ನು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಾಗಿಸುವುದು, ಇಎಸ್‌ಐ ಆಸ್ಪತ್ರೆ ಪ್ರಸ್ತಾವ ನಿಟ್ಟಿನಲ್ಲಿ ಕಾರ್ಮಿಕರ ನೋಂದಣಿ, ಕಿರುವಿಮಾನ ನಿಲ್ದಾಣ, ಗೋಂದಿಯಿಂದ ಕಡೂರು, ತರೀಕೆರೆ, ಚಿಕ್ಕಮಗಳೂರು ಬಯಲು ಭಾಗದ ಕೆರೆಗಳಿಗೆ ನೀರು, ಜಲಧಾರೆ ಯೋಜನೆಯಡಿ ತರೀಕೆರೆ ತಾಲ್ಲೂಕಿನ 150, ಕಡೂರಿನ 451, ಚಿಕ್ಕಮಗಳೂರಿನ 75 ಗ್ರಾಮಗಳಿಗೆ ನೀರು ಪೂರೈಸುವ 650 ಕೋಟಿ ವೆಚ್ಚದ ಯೋಜನೆ ಕುರಿತು ಚರ್ಚಿಸಲಾಗಿದೆ. ಆದೇಶ ಮಾಡಿಸಿ ಕಾರ್ಯಗತಕ್ಕೆ ಕ್ರಮ ವಹಿಸಲಾಗುವುದು ಎಂದರು.

*
ಸಲಹೆಗಳು

* ವೊಕೆಷನಲ್‌ ಟೈನಿಂಗ್‌ ಕಾರ್ಯಕ್ರಮ ಶುರು ಮಾಡಬೇಕು

* ರಾಜಕಾಲುವೆಗಳ ಒತ್ತುವರಿ ತೆರವಿಗೆ ಕ್ರಮ ವಹಿಸಬೇಕು

* ಹಿರೇಕೊಳಲೆ, ಬಸವನಹಳ್ಳಿ, ಕೋಟೆ, ರಾಮೇಶ್ವರ ಕೆರೆ ಅಭಿವೃದ್ಧಿಪಡಿಸಬೇಕು

* ಕೆರೆಗಳಿಗೆ ಚರಂಡಿ ಕೊಳಕು ಹರಿಯುವುದನ್ನು ತಪ್ಪಿಸಬೇಕು

* ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ಸವಲತ್ತುಗಳಿಗೆ ಫಲಾನುಭವಿ ಆಯ್ಕೆಯಲ್ಲಿ ಅಕ್ರಮ ತಪ್ಪಿಸಬೇಕು

* ಜಿಲ್ಲೆಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಬೇಕು

* ಪಶ್ಚಿಮಘಟ್ಟ ತಾಳಿಕೆ ಸಾಮರ್ಥ್ಯ ಅಧ್ಯಯನ ಕೈಗೊಳ್ಳಬೇಕು

* ಬಸವನಹಳ್ಳಿ ಕೆರೆಯೊಗಿನ ದಿಬ್ಬದ ಸ್ವಾಮಿವಿವೇಕಾನಂದರ ಪ್ರತಿಮೆ ತೆರವುಗೊಳಿಸಬೇಕು

* ನದಿಗಳ ನೈಸರ್ಗಿಕ ಹರಿವಿನ ಜಾಡು ಬದಲಾವಣೆ ಮಾಡದಂತೆ ನಿಗಾ ವಹಿಸಬೇಕು

* ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು

* ಫುಡ್‌ ಕೋರ್ಟ್‌ ಆರಂಭಿಸಬೇಕು

* ಕಾಫಿನಾಡಿನಲ್ಲಿ ವಿಶ್ವ ಜಾನಪದ ಸಮ್ಮೇಳನ ಆಯೋಜಿಸಬೇಕು

* ನಗರದ ರಸ್ತೆಗಳು ಗುಂಡಿಮಯವಾಗಿದ್ದು ದುರಸ್ತಿಗೆ ಕ್ರಮ ವಹಿಸಬೇಕು

* ಜಾನಪದ ಸಾಹಿತ್ಯ ಉಳಿಸಿ ಬೆಳೆಸಲು ಒತ್ತು ನೀಡಬೇಕು

* ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕಾಲೇಜು ಸ್ಥಾಪಿಸಬೇಕು

* ಗಿರಿ ಶ್ರೇಣಿಗೆ ಪ್ರವಾಸಿ ವಾಹನಗಳಿಗೆ ನಿರ್ಬಂಧ ವಿಧಿಸಬೇಕು

* ಜಲಪಾತಗಳ ಅಭಿವೃದ್ಧಿಗೆ ಒತ್ತು ನೀಡಬೇಕು

* ನಗರದ ಸೌಂದರ್ಯಕ್ಕೆ ಒತ್ತು ನೀಡಬೇಕು

* ಪ್ರವಾಸಿ ಮಾಹಿತಿ ಕೇಂದ್ರ ಶುರು ಮಾಡಬೇಕು

* ಕಸ ನಿರ್ವಹಣೆಗೆ ಕ್ರಮ ವಹಿಸಬೇಕು

* ಕೆಮ್ಮಣ್ಣುಗುಂಡಿ ತಾಣ ಅಭಿವೃದ್ಧಿಗೆ ಗಮನ ಹರಿಸಬೇಕು

* ರತ್ನಗಿರಿ ಬೋರೆಯಲ್ಲಿ ರಾಕ್‌ ಗಾರ್ಡನ್‌ ನಿರ್ಮಿಸಬೇಕು

* ಎಂಜಿ, ಐಜಿ, ಮಾರುಕಟ್ಟೆ ರಸ್ತೆಗಳಲ್ಲಿ ಪಾರ್ಕಿಂಗ್‌ ಲಾಟ್‌ ನಿರ್ಮಿಸಬೇಕು

* ನಗರಸಭೆ, ತಾಲ್ಲೂಕು ಕಚೇರಿಗಳಲ್ಲಿ ‘ಜನದ್ರೋಹಿ’ ವಾತಾವರಣ ಇದ್ದು, ಜನಸ್ನೇಹಿಯಾಗಿಸಬೇಕು

* ಚೈತ್ರಶ್ರೀ ಜಿಲ್ಲಾ ಉತ್ಸವವನ್ನು ಮತ್ತೆ ಆರಂಭಿಸಬೇಕು

* ಫಲಕಗಳಲ್ಲಿ ಕನ್ನಡದಲ್ಲಿ ದೊಡ್ಡದಾಗಿ, ಕೆಳಗೆ ಇಂಗ್ಲಿಷ್‌ನಲ್ಲಿ ಬರೆಸಲು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು

* ಶೈತ್ಯಾಗಾರ (ಕೋಲ್ಡ್‌ ಸ್ಸೋರೇಜ್‌) ಘಟಕ ನಿರ್ಮಿಸಬೇಕು

* 100 ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಯೋಜನೆ ರೂಪಿಸಬೇಕು

* ಪರಿಸರಕ್ಕೆ ಧಕ್ಕೆಯಾಗದಂತೆ ಗಮನ ಹರಿಸಬೇಕು

* ವರ್ತುಲ ರಸ್ತೆ ನಿರ್ಮಿಸಬೇಕು

* 15 ಎಕರೆ ವಿಸ್ತೀರ್ಣದ ಮೈದಾನ ಕಲ್ಪಿಸಬೇಕು

* ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ಸಂಶೋಧನಾ ಅಧ್ಯಯನಕ್ಕೆ ವ್ಯವಸ್ಥೆ ಮಾಡಬೇಕು

* ಸಂತೆ ಮಾಳ ಅಭವೃದ್ಧಿ ಪಡಿಸಬೇಕು

* ಹೋಂ ಸ್ಟೆ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು

* ಜಿಲ್ಲೆಯ ಕಲಾವಿದರ ಪಟ್ಟಿ ಸಿದ್ಧಪಡಿಸಬೇಕು

ಸಲಹೆ ನೀಡಿದವರು: ನಟರಾಜ್‌, ಕೆ.ಟಿ.ರಾಧಾಕೃಷ್ಣ, ಸ.ಗಿರಿಜಾಶಂಕರ್‌, ಬಿ.ಎಂ.ಕುಮಾರ್‌, ಡಾ.ಜೆ.ಪಿ.ಕೃಷ್ಣೇಗೌಡ, ಚೂಡಾನಾಥ್‌ ಅಯ್ಯರ್‌, ರಾಜೇಗೌಡ, ಕಾಂತಿಲಾಲ್‌ ಜೈನ್‌, ಡಾ.ಮೋಹನ್‌, ಡಿ.ವಿ.ಗಿರೀಶ್‌, ವೆಂಕಟೇಶ್, ನಾರಾಯಣ್‌, ಆನಂದಕುಮಾರ ಶೆಟ್ಟಿ, ಪ್ರಭುಲಿಂಗಶಾಸ್ತ್ರಿ, ದೀಪಕ್ ದೊಡ್ಡಯ್ಯ, ವಾಣಿ ಚಂದ್ರಯ್ಯನಾಯ್ಡು, ಶ್ರೀದೇವ್‌ಹುಲಿಕೆರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT