ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ವಿ.ವಿ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಗೋರುಚ ಸಲಹೆ

ಚಿಕ್ಕಮಗಳೂರು ಹಬ್ಬದಲ್ಲಿ ಹೇಳಿಕೆ
Last Updated 2 ಮಾರ್ಚ್ 2020, 13:21 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರವೊಂದನ್ನು ಸ್ಥಾಪಿಸಬೇಕು ಎಂದು ಜಾನಪದ ತಜ್ಞ ಗೊ.ರು.ಚನ್ನಬಸಪ್ಪ ಸಲಹೆ ನೀಡಿದರು.

ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ನಡೆದ ಚಿಕ್ಕಮಗಳೂರು ಹಬ್ಬದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 10 ಎಕರೆ ಸ್ಥಳ ಒದಗಿಸಿ, ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸಲು ಕ್ರಮ ವಹಿಸಬೇಕು. ಪಶುಪಾಲನಾ ಇಲಾಖೆಯ ಫಾರಂಗಳಲ್ಲಿ ಪಶು ಸಂರಕ್ಷಣೆ, ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.

‘ಜಿಲ್ಲೆಯ ನಿಸರ್ಗ ಸಂಪನ್ಮೂಲದ ಸಮಿಕ್ಷೆ ನಡೆಸಿ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ವಹಿಸಬೇಕು. ಜಿಲ್ಲೆಯ ಪ್ರವಾಸಿ ಕೇಂದ್ರಗಳನ್ನು ಗುರುತಿಸಿ ವ್ಯವಸ್ಥಿತವಾಗಿ ಸಜ್ಜುಗೊಳಿಸಬೇಕು. ಗ್ರಾಮೀಣ ಕೆರೆಗಳ ಪುನುರುಜ್ಜೀವನ ಮಾಡಬೇಕು ಎಂದು ಸಲಹೆ ನೀಡಿದರು.

‘ಈ ಜಿಲ್ಲೆಯಲ್ಲಿ ಸಾಧಕರ ದೊಡ್ಡ ಪರಂಪರೆ ಇದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದಿದ್ದಾರೆ. ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಒಳ್ಳೆಯದು’ ಎಂದರು.

ಸನ್ಮಾನ ಸ್ವೀಕರಿಸಿದ ಪ್ರೊ.ಬಿ.ಎಂ.ಪುಟ್ಟಯ್ಯ ಮಾತನಾಡಿ, ‘ಪ್ರಪಂಚದಲ್ಲಿ ಪ್ರಜಾಪ್ರಭುತ್ವ ಕುಸಿಯುತ್ತಿದೆ, ಕುಗ್ಗುತ್ತಿದೆ, ಅಸಹಾಯಕತೆಯಲ್ಲಿ ಒದ್ದಾಡುತ್ತಿದೆ. ಪ್ರಜಾಪ್ರಭುತ್ವ ಅಭಿವೃದ್ಧಿಪಡಿಸಲು, ಆಶಯಗಳನ್ನು ಜನರ ಬಳಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಇಂಥ ಉತ್ಸವಗಳು ಪೂರಕ. ಕಲೆ, ಸಾಹಿತ್ಯ, ಸಂಗೀತ ಇವು ಸಾಮಾಜಿಕ ಬೆಳವಣಿಗೆಯ, ಪರಿವರ್ತನೆಯ ಶಕ್ತಿಶಾಲಿ ಮಾಧ್ಯಮಗಳಾಗಿ ಕೆಲಸ ಮಾಡಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯಣ್ಣ, ಜಿಲ್ಲಾ ಪಂಚಾಯಿತಿ ಸಿಇಒ ಎಸ್‌.ಪೂವಿತಾ, ಎಸ್ಪಿ ಹರೀಶ್‌ಪಾಂಡೆ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ಇದ್ದರು.

ಆನೆಬಲ ತಂದುಕೊಟ್ಟಿದೆ

ಚಿಕ್ಕಮಗಳೂರು ಹಬ್ಬದ ಯಶಸ್ವಿ ಆಯೋಜನೆ ಆನೆಬಲ ತಂದುಕೊಟ್ಟಿದೆ. ನಾಡಿನ ಉದ್ದಗಲಕ್ಕೂ ಈ ಹಬ್ಬವನ್ನು ವಿಸ್ತರಿಸುವ ಶಕ್ತಿ ಬಂದಿದೆ. ಹಬ್ಬದ ಮೂಲಕ ರಾಜ್ಯದಲ್ಲಿ ಸಾಂಸ್ಕೃತಿಕ ಸಾಹಸಿ ತಂಡ ಕಟ್ಟುವ ಹಂಬಲ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರದ ಸಾಧಕರಾದ ಪ್ರೇಮಾಕೋದಂಡರಾಮ ಶ್ರೇಷ್ಠಿ (ಅಧ್ಯಾತ್ಮ–ಸಂಗೀತ), ಗೊ.ರು.ಚನ್ನಬಸಪ್ಪ (ಜಾನಪದ), ಬಿ.ಕೆ.ಸುಮಿತ್ರಾ (ಗಾಯನ), ಡಾ.ಬಿ.ಟಿ.ರುದ್ರೇಶ್‌ (ಹೋಮಿಯೊಪತಿ), ಬಿ.ವಿ.ರಾಜಾರಾಂ( ರಂಗಭೂಮಿ), ಕಾಶಿನಾಥ ಗಿರಿಯಾಪುರ (ಕೃಷಿ), ಪ್ರೊ.ಬಿ.ಎಂ.ಪುಟ್ಟಯ್ಯ (ಸಾಹಿತ್ಯ), ಹಳೆಕೋಟೆ ವಿಶ್ವಾಮಿತ್ರ (ಪಶುವೈದ್ಯಕೀಯ), ಅಕ್ಕಿಕಾಳು ವೆಂಕಟೇಶ್‌ (ಕಲಾ), ಗುರುಸಿದ್ದಪ್ಪ (ಕುಸ್ತಿ), ಜೆ.ಎನ್‌.ಚವಾಡ್‌ (ಕ್ರೀಡೆ), ರಕ್ಷಿತಾ ರಾಜು (ಕ್ರೀಡೆ), ವೇದಾ ಕೃಷ್ಣಮೂರ್ತಿ (ಕ್ರಿಕೆಟ್‌) ಅವರನ್ನು ಸನ್ಮಾನಿಸಲಾಯಿತು. ವೇದಾ ಅವರ ಪರವಾಗಿ ತಂದೆ ಕೃಷ್ಣಮೂರ್ತಿ ಅವರು ಸನ್ಮಾನ ಸ್ವೀಕರಿಸಿದರು.

‘ಸಾಂಸ್ಕೃತಿಕ ಸಂಪತ್ತಿನ ಉಳಿವು ಸರ್ಕಾರದ ಜವಾಬ್ದಾರಿ’

‘ಅಪಾರ ಸಾಂಸ್ಕೃತಿಕ ಸಂಪತ್ತನ್ನು ನಮ್ಮ ಪೂರ್ವಜರು ನೀಡಿದ್ದಾರೆ. ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ ಗಮನಹರಿಸಬೇಕು’ ಎಂದು ಆಳ್ವಾಸ್‌ ಸಂಸ್ಥೆಯ ಡಾ.ಮೋಹನ್‌ ಆಳ್ವ ಹೇಳಿದರು.

‘ಮಕ್ಕಳಿಗೆ ಶಿಕ್ಷಣ ನೀಡುವುದರ ಜತೆ ಕಲೆಗಳನ್ನು ಕಲಿಸಬೇಕು. ಸಾಂಸ್ಕೃತಿಕ ಬದುಕಿಗೆ ಎಲ್ಲರೂ ಒತ್ತು ನೀಡಬೇಕು. ಸಂಸ್ಕೃತಿ ಮತ್ತು ಮನರಂಜನೆಗೆ ಇರುವ ವ್ಯತ್ಯಾಸ ಗೊತ್ತಿರಬೇಕು. ನಮ್ಮ ಕಣ್ಣು, ಮನಸ್ಸು, ಹೃದಯಗಳು ಒಂದು ರೀತಿಯಲ್ಲಿ ಭ್ರಷ್ಟವಾಗುತ್ತಿದೆ. ಸಹೃದಯ, ಮನಸ್ಸುಗಳನ್ನು ಕಟ್ಟಿಕೊಳ್ಳಬೇಕಾಗಿರುವುದು ಎಲ್ಲರ ಕರ್ತವ್ಯ’ ಎಂದರು.

‘ಸೌಂದರ್ಯ ಪ್ರಜ್ಞೆ ಇರುವವರು ದೇಶ, ಕಲೆ, ಕಲಾವಿದ, ಪರಿಸರ, ದೇಸಿ ಜೀವನ ಪದ್ಧತಿಯನ್ನು ಪ್ರೀತಿಸುತ್ತಾರೆ. ಸೌಂದರ್ಯ ಪ್ರಜ್ಞೆ ಇಲ್ಲದವರು ದೇಶ, ಸಾಮರಸ್ಯ, ಸಾಂಸ್ಕೃತಿಕ ಬದುಕನ್ನು ಪ್ರೀತಿಸಲ್ಲ. ಅಂಥವರು ದೇಶಕ್ಕೆ ಅಪಾಯಕಾರಿ’ ಎಂದರು.

‘ನಾಡಿನಲ್ಲಿ ಕನ್ನಡ ಭಾಷೆ ಸೋಲದಂತೆ ನೋಡಿಕೊಳ್ಳಬೇಕಾದ ಅನಿವಾರ್ಯ ಇದೆ.ಚಿಕ್ಕಮಗಳೂರು ಹಬ್ಬ (ಜಿಲ್ಲಾ ಉತ್ಸವ) ಅಚ್ಚುಕಟ್ಟಾಗಿ ಜರುಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT