ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಾಸಕ್ತರ ವಿರೋಧ; ಪ್ರಸ್ತಾಪ ಕೈಬಿಡಲು ಆಗ್ರಹ

ಕಳಸ ತಾಲ್ಲೂಕು ಕಚೇರಿಗೆ ಕುದುರೆಮುಖ ಟೌನ್‌ಶಿಪ್‌ ಬಳಕೆ ಪ್ರಸ್ತಾಪ
Last Updated 25 ಜೂನ್ 2019, 20:17 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಿತ್ಯಹರಿದ್ವರ್ಣ ಕಾಡುಗಳಿಂದ ಆವೃತ್ತವಾಗಿರುವ ಬೆಟ್ಟಶ್ರೇಣಿ, ಪರಿಸರ ಸೂಕ್ಷ್ಮ ಪ್ರದೇಶವಾದ ಕುದುರೆಮುಖದಲ್ಲಿ ಜನ, ವಾಹನ ದಾಂಗುಡಿಗೆ ಅವಕಾಶ ನೀಡಬಾರದು ಎಂದು ಪರಿಸರಾಸಕ್ತರು ಒತ್ತಾಯಿಸಿದ್ದಾರೆ.

ಬಜೆಟ್‌ನಲ್ಲಿ ಕಳಸವನ್ನು ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಲಾಗಿದೆ. ಕುದುರೆಮುಖದಲ್ಲಿ ಗಣಿಗಾರಿಕೆ ನಡೆಯುತ್ತಿದ್ದಾಗ ನಿರ್ಮಾಸಿರುವ ಪಟ್ಟಣ ಪ್ರದೇಶದಲ್ಲಿನ ಕಟ್ಟಡಗಳನ್ನು ಈ ಹೊಸ ತಾಲ್ಲೂಕುದ ಕೇಂದ್ರದ ಕಚೇರಿಗಳಿಗೆ ಬಳಸಿಕೊಳ್ಳಲು ಜಿಲ್ಲಾಡಳಿತ ಆಲೋಚನೆ ಮಾಡಿದೆ. ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಿ ಆ ಪ್ರದೇಶವನ್ನು ಪೂರ್ಣವಾಗಿ ಅರಣ್ಯವಾಗೇ ಉಳಿಸಬೇಕೆಂಬ ನಿಮಿತ್ತ ಹೋರಾಟ ನಡೆದ್ದಿದ್ದವು. ಸುಪ್ರೀಂ ಕೋರ್ಟ್‌ ಆದೇಶದಂತೆ ಗಣಿಗಾರಿಕೆ ಸ್ಥಗಿತಗೊಳಿಸಲಾಗಿದೆ. ಈಗ ಅಲ್ಲಿ ತಾಲ್ಲೂಕು ಕೇಂದ್ರದ ಆಡಳಿತ ಕಚೇರಿಗಳನ್ನು ತೆರೆಯುವ ಜನ, ವಾಹನ ಸಂದಣಿಗೆ ಅವಕಾಶ ನೀಡಬಾರದು ಎಂದು ಕೋರಿದ್ದಾರೆ.

ಕಳಸದಿಂದ 22 ಕಿಲೊ ಮೀಟರ್‌ ದೂರದಲ್ಲಿರುವ, ಬೆಟ್ಟದಿಂದ ಸುತ್ತುವರೆದ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುದುರೆಮುಖ ಪ್ರದೇಶದಲ್ಲಿ ಆಡಳಿತ ಕಚೇರಿಗಳನ್ನು ತೆರೆಯುವುದು ಸರಿಯಲ್ಲ. ಈ ಬೆಟ್ಟವು ವಾರ್ಷಿಕ 7 ಸಾವಿರ ಮಿ.ಮೀ. ಗೂ ಹೆಚ್ಚು ಮಳೆಯನ್ನು ಮುಂಗಾರಿನಲ್ಲಿ ಪಡೆಯುತ್ತದೆ. ಇಲ್ಲಿನ ಶೋಲಾ ಕಾಡುಗಳು ಅಮೂಲ್ಯ ಗಿಡಮರಗಳಿಂದ ಕೂಡಿದೆ. ವಿನಾಶದಂಚಿನಲ್ಲಿರುವ ಸಿಂಗಳೀಕ ಕಪಿಸಂತತಿ ಸಹಿತ ಹಲವು ಪ್ರಾಣಿ, ಪಕ್ಷಿಗಳಿಗೆ ಆಶ್ರಯ ಸ್ಥಾನವೂ ಆಗಿದೆ ಎಂದು ತಿಳಿಸಿದ್ದಾರೆ.

ಬೆಟ್ಟದಲ್ಲಿರುವ ಗಂಗಾಮೂಲದಲ್ಲಿ ಭದ್ರಾ, ತುಂಗಾ ಹಾಗೂ ನೇತ್ರಾವತಿ ನದಿಗಳು ಒಂದೇ ಗುಹೆಯಲ್ಲಿ ಉಗಮವಾಗಿ ಬೇರೆ ಬೇರೆ ದಿಕ್ಕುಗಳಲ್ಲಿ ಹರಿಯುತ್ತದೆ. ಲಕ್ಯಾ, ಸೀತಾನದಿ, ಕುದುರೆಮುಖ ಹೊಳೆ, ಕುಣಿಯೋ ಹೊಳೆ ಸಹಿತ ನೂರಾರು ಹಳ್ಳಗಳ ಹುಟ್ಟಿಗೂ ಕಾರಣ ಈ ಪ್ರದೇಶ. ಇಲ್ಲಿ ಅರಣ್ಯೇತರ ಚಟುವಟಿಕೆ ಪರಿಸರಕ್ಕೆ ಮಾರಕವಾಗುತ್ತದೆ ಎಂದು ವಿವರಿಸಿದ್ದಾರೆ.

1969 ರಲ್ಲಿ ಗಣಿಗಾರಿಕೆಗೆ ಕುದುರೆಮುಖದ 1,300 ಎಕರೆ ಪ್ರದೇಶವನ್ನು ಸರ್ಕಾರವು 30 ವರ್ಷಗಳ ಗುತ್ತಿಗೆ ಮೇಲೆ ನೀಡಿತು. ನಂತರ ಅಲ್ಲಿದ್ದ ಹಲವಾರು ಗ್ರಾಮ ಹಾಗೂ ಖಾಸಗಿ ಜಾಗವನ್ನು ಭೂಸ್ವಾಧೀನ ಕಾಯ್ದೆಯಡಿ ವಶಪಡಿಸಿಕೊಳ್ಳಲಾಗಿತ್ತು. ಜೊತೆಗೆ ಅಲ್ಲಿದ್ದ ಕಂದಾಯ, ಅರಣ್ಯ ಜಾಗವನ್ನು ಬೇರೆ ಬೇರೆ ಉದ್ದೇಶಗಳಿಗಾಗಿ ಗಣಿಗಾರಿಕೆಗೋಸ್ಕರ ತೆಗೆದುಕೊಳ್ಳಲಾಯಿತು. ಲಕ್ಯಾ ಅಣೆಕಟ್ಟೆ ನಿರ್ಮಿಸಲು ಮತ್ತು ನಂತರ ಅದನ್ನು ಎತ್ತರಿಸಿ ಅದಿರು ಪರಿಷ್ಕರಣೆ ನಂತರ ಹೊರಬರುವ ಮಣ್ಣನ್ನು ಸಂಗ್ರಹಿಸಲು 750 ಎಕರೆ ಜಾಗವನ್ನು ಪಡೆಯಲಾಯಿತು. ರಸ್ತೆ ನಿರ್ಮಾಣ ಹಾಗೂ ವಿದ್ಯಚ್ಛಕ್ತಿ ಮಾರ್ಗ ನಿರ್ಮಾಣಕ್ಕೂ ಅರಣ್ಯ ಭೂಮಿಯನ್ನು ಬಳಸಿಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್‌ ನೀಡಿರುವ ಗಣಿಗಾರಿಕೆ ಸ್ಥಗಿತಗೊಳಿಸುವ ಆದೇಶದಲ್ಲಿ ಈ ಪ್ರದೇಶವನ್ನು ಅರಣ್ಯೇತರ ಚಟುವಟಿಕೆಗೆ ಬಳಸಬಾರದುದು ಸೂಚಿಸಿದೆ ಎಂದು ತಿಳಿಸಿದ್ದಾರೆ.

ಪರಿಸರ ಪ್ರವಾಸೋದ್ಯಮ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾವ, ಖಾಸಗಿ ಸಂಸ್ಥೆಯೊಂದು ಪ್ರಕೃತಿ ಚಿಕಿತ್ಸಾ ಕೇಂದ್ರ ಸ್ಥಾಪಿಸಲು ಹೊರಟಾಗ ಅದಕ್ಕೆ ಕೋರ್ಟ್‌ ಅನುಮತಿ ನೀಡಲಿಲ್ಲ. ಅರಣ್ಯ ಸಂಶೋಧನಾ ಕೇಂದ್ರ, ಪೊಲೀಸ್ ತರಬೇತಿ ಕೇಂದ್ರ ಸ್ಥಾಪಿಸುವ ಪ್ರಯತ್ನಗಳಿಗೂ ಅವಕಾಶ ನೀಡಲಿಲ್ಲ ಎಂದು ತಿಳಿಸಿದ್ದಾರೆ.

ಸರ್ಕಾರವು ಅಲ್ಲಿ ಮತ್ತೆ ತಾಲ್ಲೂಕು ಆಡಳಿತ ಕಚೇರಿಗಳನ್ನು ತೆರೆಯಲು ಸರ್ಕಾರ ಆಲೋಚಿಸಬಾರದಾಗಿತ್ತು. ರಾಜ್ಯ ಸರ್ಕಾರವು ಕೋರ್ಟ್‌ ಆದೇಶವನ್ನು ಅನುಸರಿಸಿ ಇಲ್ಲಿರುವ ಕಟ್ಟಡಗಳನ್ನು ತೆಗೆದು ಆ ಪ್ರದೇಶವನ್ನು ಪೂರ್ಣವಾಗಿ ನೈಸರ್ಗಿಕ ಅರಣ್ಯದ ಬೆಳವಣಿಗೆಗೆ ಅವಕಾಶವಾಗುವಂತೆ ಪರಿಸ್ಥಿತಿ ನಿರ್ಮಾಣ ಮಾಡಬೇ ಎಂದು ಭದ್ರಾ ವೈಲ್ಡ್ ಲೈಫ್ ಕನ್ಸರ್ವೇಷನ್ ಟ್ರಸ್ಟ್‌ನ ಮುಖ್ಯಸ್ಥ ಡಿ.ವಿ.ಗಿರೀಶ್, ವೈಲ್ಡ್ ಕ್ಯಾಟ್-ಸಿ ಸಂಸ್ಥೆ ಮುಖ್ಯಸ್ಥ ಶ್ರೀದೇವ್ ಹುಲಿಕೆರೆ, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT