ಮಂಗಳವಾರ, ಸೆಪ್ಟೆಂಬರ್ 17, 2019
24 °C

ಶಿವನಿ ಪೊಲೀಸ್‌ ಠಾಣೆ ಪ್ರಸ್ತಾವ ಮೂಲೆಗುಂಪು

Published:
Updated:
Prajavani

ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಶಿವನಿ ಹೋಬಳಿ ಕೇಂದ್ರದಲ್ಲಿ ಪೊಲೀಸ್‌ ಠಾಣೆ ಸ್ಥಾಪನೆ ಪ್ರಸ್ತಾವ ಮೂಲೆಗುಂಪಾಗಿದೆ. ಈ ಭಾಗದ ವಾರ್ಷಿಕ ಸರಾಸರಿ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ ಎಂಬ ನೆಪವೊಡ್ಡಿ ಇಲಾಖೆಯೂ ಕೈಚೆಲ್ಲಿದೆ.

ಮೂರು ವರ್ಷ ವಾರ್ಷಿಕ ಸರಾಸರಿ 300 ಐಪಿಸಿ ಪ್ರಕರಣ ದಾಖಲಾಗಿದ್ದರೆ ಆ ಭಾಗದಲ್ಲಿ ಠಾಣೆ ಸ್ಥಾಪಿಸಲು ಅವಕಾಶ ಇದೆ. ಹೊಸ ಠಾಣೆಯು ಹಾಲಿ ವ್ಯಾಪ್ತಿಯ ಠಾಣೆಯಿಂದ 20 ಕಿ.ಮೀ ದೂರವಿರಬೇಕು ಎಂಬ ಕಟ್ಟಳೆ ಇದೆ. ಈ ಕಟ್ಟಳೆ ಸಡಿಲಕ್ಕೆ ಅವಕಾಶವೂ ಇದೆ.

ಅಜ್ಜಂಪುರ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿ ಮೂರು ವರ್ಷವಾಗಿದೆ. ಅಜ್ಜಂಪುರ ಠಾಣೆ ವ್ಯಾಪ್ತಿಯಲ್ಲಿ ಶಿವನಿ, ಅಂತರಘಟ್ಟೆ ಉಪಠಾಣೆಗಳು ಇವೆ. ಅಜ್ಜಂಪುರ ಠಾಣೆಯಲ್ಲಿ ಕಳೆದ ವರ್ಷ 386 ಪ್ರಕರಣಗಳು ದಾಖಲಾಗಿವೆ. ಈ ವರ್ಷ ಈವರೆಗೆ 201 ದಾಖಲಾಗಿವೆ.

ಅಜ್ಜಂಪುರದಿಂದ ಶಿವನಿ 14 ಕಿಲೋ ಮೀಟರ್‌ ದೂರದಲ್ಲಿದೆ. ಜಿಲ್ಲೆಯ ದೊಡ್ಡ ಹೋಬಳಿ ಕೇಂದ್ರಗಳ ಪೈಕಿ ಶಿವನಿಯೂ ಒಂದು. ಕಲ್ಲೇನಹಳ್ಳಿ, ಚೀರನಹಳ್ಳಿ, ಶಿವನಿ, ತ್ಯಾಗದಕಟ್ಟೆ, ಅನುವನಹಳ್ಳಿ, ನಾರಾಣಾಪುರ, ಜಾವೂರು, ಚಿಕ್ಕಾನವಂಗಲ, ಬುಕ್ಕಾಂಬುಧಿ ಗ್ರಾಮ ಪಂಚಾಯಿತಿಗಳು ಈ ಹೋಬಳಿ ವ್ಯಾಪ್ತಿಯಲ್ಲಿವೆ.

‘ಶಿವನಿಯಲ್ಲಿ ಠಾಣೆ ಸ್ಥಾಪಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಎರಡು ವರ್ಷಗಳ ಹಿಂದೆ ಪ‍್ರಸ್ತಾವ ಸದ್ದು ಮಾಡಿತ್ತು. ಜನಪ್ರತಿನಿಧಿಗಳು, ಅಧಿಕಾರಿಗಳ ಈ ಬಗ್ಗೆ ಆಸಕ್ತಿ ವಹಿಸದಿರುವುದರಿಂದ ಪ್ರಸ್ತಾವ ನನೆಗುದಿಗೆ ಬಿದ್ದಿದೆ’ ಎಂದು ಗ್ರಾಮಸ್ಥ ಗುರು ದೂರುತ್ತಾರೆ.

‘ಅಪಘಾತ, ಕಳವು, ಅಪರಾಧ ಕೃತ್ಯಗಳು ನಡೆಯುತ್ತವೆ. ಕೆಲವರುಇಂಥ ಸಂದರ್ಭಗಳಲ್ಲಿ ರಾಜಿ ಮಾಡಿಸಿ ‘ಕಮಾಯಿ’ ಮಾಡಿಕೊಳ್ಳುತ್ತಾರೆ. ಹೀಗಾಗಿ, ಬಹಳಷ್ಟು ಪ್ರಕರಣ ದಾಖಲಾಗುವುದೇ ಇಲ್ಲ. ಶಿವನಿಯಲ್ಲಿ ಠಾಣೆ ಸ್ಥಾಪಿಸಿದರೆ ಕಮಾಯಿಗೆ ಕಡಿವಾಣ ಬೀಳುತ್ತದೆ’ ಎಂದು ಗ್ರಾಮದ ಎಸ್‌.ವಿ.ಸದಾಶಿವ ಹೇಳುತ್ತಾರೆ.

---------

ತರೀಕೆರೆಯಲ್ಲಿ ಸಂಚಾರ ಪೊಲೀಸ್‌ ಠಾಣೆ, ಶಿವನಿಯಲ್ಲಿ ಪೊಲೀಸ್‌ ಠಾಣೆ ಪ್ರಸ್ತಾವ ಇವೆ. ಪ್ರಕರಣಗಳ ಸಂಖ್ಯೆ ಕಡಿಮೆ ಕಾರಣಕ್ಕೆ ಅನುಮೋದನೆಯಾಗಿಲ್ಲ.

–ಹರೀಶ್‌ ಪಾಂಡೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

****

ತರೀಕೆರೆಯಲ್ಲಿ ಸಂಚಾರ ಠಾಣೆ ಸ್ಥಾಪನೆ ಪ್ರಸ್ತಾವ ಕಾರ್ಯಗತಕ್ಕೆ ಗಮನಹರಿಸುತ್ತೇನೆ. ಶಿವನಿ ಠಾಣೆಯ ಪ್ರಸ್ತಾವವನ್ನು ಪರಿಶೀಲಿಸಿ ಕ್ರಮ ವಹಿಸುತ್ತೇನೆ.

ಡಿ.ಎಸ್‌.ಸುರೇಶ್‌, ಶಾಸಕ

Post Comments (+)