ತನಿಖೆಗೆ ಎಸ್‌ಐಟಿ ರಚನೆಗೆ ಒತ್ತಾಯ

7
ರಾಸಾಯನಿಕ ಬೆರೆಸಿ ಹಾಲು ಪೂರೈಕೆ; ದೂರು

ತನಿಖೆಗೆ ಎಸ್‌ಐಟಿ ರಚನೆಗೆ ಒತ್ತಾಯ

Published:
Updated:
Deccan Herald

ಚಿಕ್ಕಮಗಳೂರು: ಹಾಲಿಗೆ ರಾಸಾಯನಿಕ ಬೆರೆಸಿ ಹಾಸನ ಹಾಲು ಒಕ್ಕೂಟಕ್ಕೆ ಪೂರೈಕೆ ಮಾಡಿರುವ ಬಗ್ಗೆ ದೂರು ಸಲ್ಲಿಕೆಯಾಗಿದೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂದು ಶಾಸಕ ಸಿ.ಟಿ.ರವಿ ಒತ್ತಾಯಿಸಿದರು.

‘ನಕಲಿ ಹಾಲು ಉತ್ಪಾದನೆ ಹಿಂದೆ ವ್ಯವಸ್ಥಿತ ಜಾಲದ ಕೈವಾಡ ಇರುವ ಶಂಕೆ ಇದೆ. ಕೆಲ ವರ್ಷಗಳಿಂದ ₹ 16 ಕೋಟಿಗೂ ಹೆಚ್ಚಿನ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಒಕ್ಕೂಟ ವರದಿ ನೀಡಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲೆಯಲ್ಲಿ ಕೆ.ಬಿ.ಹಾಳ್‌, ಬೆಳವಾಡಿ, ಮಾಚೇನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಕಲಿ ಹಾಲು ಉತ್ಪಾದನೆ ಮಾಡಲಾಗಿದೆ ಎಂಬ ಮಾಹಿತಿ ಇದೆ. ಮಾಚೇನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕುರುಬರಹಳ್ಳಿಯ ಇಬ್ಬರ (ತಾಯಿ ಮತ್ತು ಮಗ) ವಿರುದ್ಧ ಎಫ್‌ಐಆರ್‌ ದಾಖಲಾಗಿದೆ’ ಎಂದರು

‘ಈ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆ 20 ಕ್ಯಾನು ಇದ್ದರೆ, ಅದಕ್ಕೆ ರಾಸಾಯನಿಕ ಬೆರೆಸಿ 50 ಕ್ಯಾನು ಮಾಡಿ ಪೂರೈಸಲಾಗಿದೆ. ಹಾಲಿಗೆ ಅಪಾಯಕಾರಿ ರಾಸಾಯನಿಕ ಬೆರೆಸಲಾಗಿದೆ ಎಂದು ಪ್ರಯೋಗಾಲಯದ ವರದಿಯಿಂದ ಗೊತ್ತಾಗಿದೆ. ಮೂರು ತಿಂಗಳಿನಿಂದ ರೈತರಿಗೆ ಹಾಲಿನ ಹಣ ನೀಡಿಲ್ಲ. ರೈತರಿಗೆ ಹಾಲಿನ ಹಣ ಚುಕ್ತಾ ಮಾಡಿ, ಅಕ್ರಮ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

‘ಈ ನಕಲಿ ಹಾಲು ಕುಡಿದರೆ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಾರೆ. ರಾಜ್ಯದಲ್ಲಿ ಎಲ್ಲೆಲ್ಲಿ ಇಂಥ ಜಾಲ ವ್ಯಾಪಿಸಿದೆ ಎಂಬುದನ್ನು ಪತ್ತೆ ಹಚ್ಚಬೇಕು’ ಎಂದರು.

‘ಬಡವರಿಗೆ ‘94ಸಿ’, ‘94ಸಿಸಿ’ನಡಿ ಹಕ್ಕುಪತ್ರ ನೀಡುವುದಾಗಿ ಹಿಂದಿನ ಸರ್ಕಾರ ಹೇಳಿತ್ತು. ಆರು ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಸುತ್ತೋಲೆ ಹೊರಡಿಸಿತ್ತು. ಗೋಮಾಳ, ಕುಮ್ಕಿ, ಸಿಆರ್‌ಝಡ್‌, ಸಿ ಅಂಡ್‌ ಇ, ಡೀಮ್ಡ್‌ ಅರಣ್ಯದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಮನೆಗಳ ಸಕ್ರಮಕ್ಕೆ ಅವಕಾಶ ಇಲ್ಲ, ಅರ್ಜಿಗಳನ್ನು ಪರಿಶೀಲಿಸಿ ಹಿಂಬರಹ ನೀಡುವಂತೆ ಕಂದಾಯ ಇಲಾಖೆ ಈಚೆಗೆ ಸುತ್ತೋಲೆ ಹೊರಡಿಸಿದೆ. ಮೂರು ತಿಂಗಳಲ್ಲಿ ಅರ್ಜಿಗಳ ವಿಲೇವಾರಿಗೆ ಸೂಚಿಸಿದೆ. ಸಿಆರ್‌ಝಡ್‌, ಅರಣ್ಯ ಜಾಗಕ್ಕೆ ನಿರ್ಬಂಧ ಹೇರಲಿ ಆದರೆ, ಸಿ ಅಂಡ್‌ ಇ, ಗೋಮಾಳಕ್ಕೆ ಹೇರುವುದು ಸರಿಯಲ್ಲ. ಇದನ್ನು ಹಿಂಪಡೆದು ಪರಿಷ್ಕೃತ ಸುತ್ತೋಲೆ ಹೊರಡಿಸಬೇಕು’ ಎಂದು ಆಗ್ರಹಿಸಿದರು.

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !