ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮೂಲಸೌಕರ್ಯ ನಿಧಿ ಬಳಕೆಗೆ ಶೋಭಾ ಕರಂದ್ಲಾಜೆ ಸೂಚನೆ

ಜಿಲ್ಲಾ ಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ
Last Updated 7 ಮೇ 2022, 3:01 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕೃಷಿ ಮೂಲಸೌಕರ್ಯ ನಿಧಿ, ಜಿಲ್ಲಾ ಕೃಷಿ ಯೋಜನೆ (ಡಿಎಪಿ) ಬಳಸಿಕೊಂಡು ರೈತರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು ಎಂದು ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಶುಕ್ರವಾರ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಜಿಲ್ಲಾ ಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ (ದಿಶಾ) ಮಾತನಾಡಿದರು. ಈ ನಿಧಿಯಡಿ ಎರಡು ಕೋಟಿ ಅನುದಾನ ಲಭ್ಯವಾಗುತ್ತದೆ. ಈ ಅನುದಾನವನ್ನು ಉಗ್ರಾಣ, ಶೈತ್ಯಾಗಾರ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು. ತರೀಕೆರೆ, ಅಜ್ಜಂಪುರ ಭಾಗದಲ್ಲಿ ಈರುಳ್ಳಿ ಸಂಗ್ರಹಗಾರ ನಿರ್ಮಾಣಕ್ಕೆ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದರು.

ಜಿಲ್ಲಾ ಕೃಷಿ ಯೋಜನೆ ತಯಾರಿಸಬೇಕು. ರಾಜ್ಯ ಕೃಷಿ ವಿಕಾಸ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಕ್ರಮ ವಹಿಸಬೇಕು. ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳಿಸಿಕೊಟ್ಟರೆ, ಕಾರ್ಯಗತ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಸಾವಯವ ಹಾಗೂ ಸಿರಿಧಾನ್ಯ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಜಿಲ್ಲೆಯಲ್ಲಿ ರಸಗೊಬ್ಬರ, ಕೀಟನಾಶಕ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೊಬೈಲ್ ಟವರ್‌ಗಳಿಗೆ ವಿದ್ಯುತ್ ಸರಬರಾಜು ವ್ಯತ್ಯಯದಿಂದ ಮೊಬೈಲ್ ಫೋನ್‌ ಸಂಪರ್ಕಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದೆ. ಜಿಲ್ಲೆಯಲ್ಲಿನಎಲ್ಲ ಬಿಎಸ್‌ಎನ್‌ಎಲ್‌ ಟವರ್‌ಗಳಿಗೆ ದಿನದ 24 ಅನಿಯಮಿತವಾಗಿ ವಿದ್ಯುತ್ ಪೂರೈಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆ.15ರಂದು ‘4ಜಿ’ ಇಂಟರ್‌ನೆಟ್: ಬಿಎಸ್‌ಎನ್‌ಎಲ್‌ ಅಂತರ್ಜಾಲ ಸೌಲಭ್ಯವನ್ನು ‘4ಜಿ’ಗೆ ವೃದ್ಧಿಸುವ ಪ್ರಕ್ರಿಯೆ ನಡೆಯುತ್ತಿದೆ. ಆಗಸ್ಟ್ 15 ರಂದು 4ಜಿ ಸಂಪರ್ಕಕ್ಕೆ ಚಾಲನೆ ನೀಡಲಾಗುವುದು ಎಂದು ಬಿಎಸ್‌ಎನ್‌ಎಲ್ ಅಧಿಕಾರಿ ಸಭೆಗೆ ತಿಳಿಸಿದರು.

ವಿವಿಧ ಇಲಾಖೆ ಕಾಮಗಾರಿಗಳಿಗೆ ರಸ್ತೆ ಅಗೆಯುವ ಸಂದರ್ಭದಲ್ಲಿ ದೂರವಾಣಿ ಕೇಬಲ್‌ಗಳಿಗೆ ಹಾನಿಯಾಗಿ, ಇಂಟರ್‌ನೆಟ್ ಸಂಪರ್ಕ ವ್ಯತ್ಯಯವಾಗುತ್ತಿದ್ದು, ಇನ್ನು ಮುಂದೆ ಸಂಬಂಧಿಸಿದ ಇಲಾಖೆಯವರು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವೆ ಶೋಭಾ ಸೂಚನೆ ನೀಡಿದರು.

ಚಿಕ್ಕಮಗಳೂರು- ಬೇಲೂರು ರೈಲ್ವೆ ಮಾರ್ಗ ಕಾಮಗಾರಿ 22 ಕಿ.ಮೀ. ಇದ್ದು, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪೂರ್ಣಗೊಂಡಿದೆ. ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಇನ್ನೂ ಪೂರ್ಣಗೊಂಡಿಲ್ಲ ಎಂದು ರೈಲ್ವೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಶೌಚಾಲಯ (ಬಳಕೆಯಲ್ಲಿರುವ, ಬಳಕೆಯಲ್ಲಿಲ್ಲದ) ಸಮೀಕ್ಷೆ ನಡೆಸಬೇಕು. ಶಿಥಿಲಾವಸ್ಥೆಯಲ್ಲಿರು ಗ್ರಾಮ ಪಂಚಾಯಿತಿ ಕಟ್ಟಡಗಳ ಸಮೀಕ್ಷೆ ನಡೆಸಿ ವರದಿ ನೀಡಬೇಕು. ಶಾಲೆಗಳಿಗೆ ಹಾಗೂ ಎಲ್ಲಾ ವಿದ್ಯಾರ್ಥಿನಿಲಯಗಳಿಗೆ ಕಾಂಪೌಂಡ್ ನಿರ್ಮಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಸಾಮಾಜಿಕ ಅರಣ್ಯ ಯೋಜನೆಯಡಿ ಈವರೆಗೆ ನೆಟ್ಟಿರುವ ಗಿಡಗಳ ಸ್ಥಿತಿಗತಿ ಸಮೀಕ್ಷೆ ನಡೆಸಬೇಕು. ಪ್ರತಿವರ್ಷ ಹಳೆಯ ಗುಂಡಿಗೆ ಹೊಸ ಗಿಡ ನೆಡುವಂತಾಗಬಾರದು ಎಂದರು.

ಅಮೃತ್‌ ಕಾಮಗಾರಿ– ಮೇ ಅಂತ್ಯಕ್ಕೆ ಮುಗಿಸಲು ಗಡುವು: ಕೆಯುಡಿಡಬ್ಲುಎಸ್‌ ಮುಖ್ಯ ಎಂಜಿನಿಯರ್‌ಗೆ ನೋಟಿಸ್‌ ನೀಡಿ, ಕಾಮಗಾರಿ ಮುಗಿಸಲು ಖಡಕ್‌ ಸೂಚನೆ ನೀಡಬೇಕು. ಅಮೃತ್‌ ಯೋಜನೆ ಕಾಮಗಾರಿ ಈ ತಿಂಗಳೊಳಗೆ ಮುಗಿಸಬೇಕು ಎಂದು ಶೋಭಾ ತಿಳಿಸಿದರು.

ಜಿಲ್ಲೆಯಲ್ಲಿ ಪ್ರಸವ ಸಂದರ್ಭದಲ್ಲಿ ಬಾಣಂತಿ ಸಾವು, ಶಿಶು ಮರಣ ಪ್ರಕರಣಗಳು ನಡೆದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಈ ಬಗ್ಗೆ ಅಧ್ಯಯನ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.

ಪ್ರಧಾನ ಮಂತ್ರಿ ಉದ್ಯೋಗ ಸೃಜನೆ ಯೋಜನೆಯಡಿ ಉತ್ತಮ ಸಾಧನೆ ಮಾಡಿದ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.

ಸಾಲ ನೀಡಲು ಅಸಹಕಾರ ತೋರು ಬ್ಯಾಂಕ್‌ಗಳ ವಿರುದ್ಧ ಕ್ರಮ: ಎಚ್ಚರಿಕೆ

ವಸತಿ ಸೇರಿದಂತೆ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಸಾಲ ನೀಡಲು ಅಸಹಕಾರ ತೋರುವ ಬ್ಯಾಂಕ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆಯುವುದಾಗಿ ಸಚಿವೆ ಶೋಭಾ ಎಚ್ಚರಿಸಿದರು. ಅಂತಹ ಬ್ಯಾಂಕುಗಳಿಂದ ಸರ್ಕಾರದ ವಿವಿಧ ಠೇವಣಿಗಳನ್ನು ಹಿಂತೆಗೆದುಕೊಳ್ಳಲು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗೆ ತಿಳಿಸಿದರು.

ಸಂಸದ ಪ್ರಜ್ವಲ್‌ ರೇವಣ್ಣ ಗೈರು

ಈ ಬಾರಿಯೂ ದಿಶಾ ಸಭೆಗೆ ಸಂಸದ ಪ್ರಜ್ವಲ್‌ ರೇವಣ್ಣ ಅವರು ಗೈರು ಹಾಜರಾಗಿದ್ದರು. ಹಿಂದಿನ ಸಭೆಗಳಿಗೂ ಅವರು ಗೈರು ಹಾಜರಾಗಿದ್ದರು.

‘ಜಿಲ್ಲೆಯ 75 ಕೆರೆ ಅಭಿವೃದ್ಧಿ’

ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರನೆ ಅಂಗವಾಗಿ ಪ್ರತಿ ಜಿಲ್ಲೆಯ 75 ಕೆರೆಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲಿ ರೂಪರೇಷೆ ಸಿದ್ಧವಾಗಲಿದೆ’ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT