ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತ ಕಡೆಗಣನೆ; ಕನ್ನಡ ಅವನತಿಗೆ ಕಾರಣ: ಡಾ.ವಾಗೀಶ್ವರಿ ಶಿವರಾಮ್

ಶೃಂಗೇರಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ವಾಗೀಶ್ವರಿ ಶಿವರಾಮ್
Last Updated 5 ಮಾರ್ಚ್ 2023, 6:16 IST
ಅಕ್ಷರ ಗಾತ್ರ

ಶೃಂಗೇರಿ: ‘ಕನ್ನಡ ಭಾಷೆ ಎಂದರೆ ಸಂಬಂಧಗಳ ಬೆಸೆಯುವ ಮಾಧ್ಯಮ. ರಾಷ್ಟ್ರೀಯ ಭಾಷೆಯಾದ ಸಂಸ್ಕೃತ ಭಾಷೆಯನ್ನು ಕಡೆಗಣಿಸಿದರೆ ಕನ್ನಡ ಭಾಷೆಯ ಅವನತಿಗೆ ಕಾರಣವಾಗುತ್ತದೆ. ಭಾಷೆಯ ಬಗ್ಗೆ ಜ್ಞಾನ ಶಕ್ತಿ ಮತ್ತು ಇಚ್ಛಾಶಕ್ತಿ ಬೇಕು. 6.5 ಕೋಟಿಗಿಂತ ಹೆಚ್ಚಿನ ಕನ್ನಡಿಗರು ಕನ್ನಡ ಮಾತನಾಡುತ್ತಿದ್ದರೂ, 174ಕ್ಕಿಂತ ಹೆಚ್ಚಿನ ಇತರ ಭಾಷೆಗಳನ್ನು ಮಾತನಾಡುವರು ರಾಜ್ಯದಲ್ಲಿದ್ದಾರೆ’ ಎಂದು 5ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ವಾಗೀಶ್ವರಿ ಶಿವರಾಮ್ ಹೇಳಿದರು.

ಶೃಂಗೇರಿಯ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಜ್ಞಾನಭಾರತಿ ವಿದ್ಯಾಕೇಂದ್ರದಲ್ಲಿ ಆಯೋಜಿಸಿದ್ದ 5ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕನ್ನಡದ ಅಭಿಮಾನವನ್ನು ಮಕ್ಕಳಲ್ಲಿ ತುಂಬಿಸಿದಾಗ ನಮ್ಮ ಭಾಷೆ ಉಳಿಯಲು ಸಾಧ್ಯ. ಸಾಹಿತ್ಯದ ಆಳವನ್ನು ತಿಳಿಯಲು ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಗ್ರಂಥವನ್ನು ಓದಬೇಕು. ಕೃಷಿ ಮತ್ತು ಸಂಸ್ಕೃತಿ ಪರಂಪರೆಯನ್ನು ಹೊಂದಿದ ಈ ನಾಡಿನಲ್ಲಿ ಆಗಿರುವ ಮಹಾಭಾರತ, ರಾಮಾಯಣ ಮತ್ತು ಭಗವದ್ಗೀತೆಯ ಸಾಹಿತ್ಯಗಳು ಜನರ ಮನಸ್ಸಿನಲ್ಲಿ ಇಂದಿಗೂ ಸಮಾಜವನ್ನು ಒಗ್ಗೂಡಿಸುವ, ಭೇದಭಾವ ಸೃಷ್ಟಿ ಮಾಡದಂತೆ, ಮನಸ್ಸನ್ನು ಉದ್ರೇಕಗೊಳಿಸದಂತೆ ಇರುವ ಸಾಹಿತ್ಯಗಳು. ಉನ್ನತ ಸಾಹಿತ್ಯ ಸೃಷ್ಟಿಯಾದಾಗ ಕನ್ನಡಾಂಬೆಗೆ ಇನ್ನಷ್ಟು ಮೆರುಗು ಬರುತ್ತದೆ’ ಎಂದರು.

ಸಮ್ಮೇಳನ ಉದ್ಘಾಟಿಸಿದ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಜಿ.ರಾಜಗೋಪಾಲ ಜೋಷಿ ಮಾತನಾಡಿ, ‘ದೃಷ್ಟಿ ಮಾಧ್ಯಮ ಮತ್ತು ಅಕ್ಷರ ಮಾಧ್ಯಮದಲ್ಲಿ ಸಾಹಿತ್ಯ ಬೆಳೆಯುತ್ತದೆ. ಮನಸ್ಸುಗಳನ್ನು ನಿಗ್ರಹಿಸಿ ಆತ್ಮದೆಡೆಗೆ ನಾವು ಸಾಗುವುದೇ ಜೀವನದ ಮೌಲ್ಯ. ಪಂಚೇಂದ್ರಿಯಗಳನ್ನು ನಿಗ್ರಹಿಸಿಕೊಂಡು ಬಹಿರಂಗದಿಂದ ಅಂತರಂಗದ ಕಡೆ ಸಾಗಿದಾಗ ಮಾತ್ರ ಸಾಹಿತ್ಯದ ಉನ್ನತೀಕರಣ ಸಾಧ್ಯ. ಸಾಹಿತ್ಯ ಮನೋವಿಕಾಸವನ್ನು ವೃದ್ಧಿಸುವ, ಶುದ್ಧ ಆತ್ಮದಿಂದ ಒಳ್ಳೆಯ ಕಾರ್ಯದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದರು.
ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಘಟಕದ ಅಧ್ಯಕ್ಷ ಅಜ್ಜಂಪುರ ಸೂರಿ ಶ್ರೀನಿವಾಸ್‍ ಮಾತನಾಡಿ, ‘ಎಲ್ಲಿ ಭಾಷೆ ಅವನತಿ ಹೊಂದುತ್ತದೆಯೋ ಅಲ್ಲಿ ಸಂಸ್ಕೃತಿ ಅವನತಿ ಕಾಣುತ್ತದೆ. ಆದರಿಂದ ಮಾತೃಭಾಷೆ ಉಳಿಸಿದಾಗ ಮಾತ್ರ ಸಂಸ್ಕೃತಿ ಉಳಿಯುತ್ತದೆ’ ಎಂದರು.

ಶೋಭಾ ಅನಂತಯ್ಯ ಅವರ ಸಂಪಾದಕತ್ವದ ‘ಶೃಂಗ ಶಾರದೆ’ ಸ್ಮರಣ ಸಂಚಿಕೆಯನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ.ರಾಜಶೇಖರ್ ಬಿಡುಗಡೆಗೊಳಿಸಿದರು. ಹರಿಕಥಾ ಕೀರ್ತನಕಾರ ಜಾಲ್ಮರ ಸುಬ್ರಾವ್, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಿ.ಎಂ. ವೆಂಕಟೇಶ್, ದತ್ತಾತ್ರೇಯ ಯಾಜಿ, ಶೋಭಾ ಶ್ರೀನಿವಾಸ್ ಅವರನ್ನು ಗೌರವಿಸಲಾಯಿತು.

ಬೆಳಿಗ್ಗೆ 8 ಗಂಟೆಗೆ ಶಾರದಾ ಮಠದ ಆವರಣದಲ್ಲಿ ವಾಗೀಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸಿ ಸಮ್ಮೇಳಾನಧ್ಯಕ್ಷರ ಮೆರವಣಿಗೆಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವೀರಗಾಸೆ, ಕೋಲಾಟ ಮೆರಗು ನೀಡಿದವು. ದಿ.ಹೂವಮ್ಮ ಹೆಗ್ಗಡತಿ ಸ್ಮರಣಾರ್ಥ ಅವರ ಪುತ್ರ ಆಗುಂಬೆ ಗಣೇಶ್ ಹೆಗ್ಡೆರವರು ಮತ್ತು ದಿ.ಶ್ಯಾಮಾಚಾರ್ ಸ್ಮರಣಾರ್ಥ ಅವರ ಪುತ್ರ ತನಿಕೋಡು ವೆಂಕಪ್ಪಾಚಾರ್ ಕನ್ನಡ ಸಾಹಿತ್ಯ ಪರಿಷತ್‍ಗೆ ದತ್ತಿ ಕೊಡುಗೆ ನೀಡಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶೃಂಗೇರಿ ರಾಮಣ್ಣ, ಪ್ರಮುಖರಾದ ಎಚ್.ಎಸ್ ಸುಬ್ರಹ್ಮಣ್ಯ, ಎಚ್.ಎಲ್.ತ್ಯಾಗರಾಜ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಹರೀಶ್ ಶೆಟ್ಟಿ, ಪ್ರಕಾಶ್.ಎಂ.ಎಲ್, ಪುಷ್ಪಾ ಲಕ್ಷ್ಮೀನಾರಾಯಣ್, ಹೆಗ್ಗದ್ದೆ ಶಿವಾನಂದ ರಾವ್, ಸುನೀತಾ ನವೀನ್ ಗೌಡ, ಅಂಗುರ್ಡಿ ದಿನೇಶ್, ಕಿಗ್ಗಾ ಹೋಬಳಿ ಘಟಕ ಅಧ್ಯಕ್ಷ ಎಚ್.ಟಿ.ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT