ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಿಂದ ‘ಅರೆಕಾಸಿನ ಪ್ಯಾಕೇಜ್’: ಸಿದ್ದರಾಮಯ್ಯ ಟೀಕೆ

Last Updated 5 ಅಕ್ಟೋಬರ್ 2019, 10:49 IST
ಅಕ್ಷರ ಗಾತ್ರ

ಕಳಸ: ‘ರೈತ ಆತ್ಮಹತ್ಯೆ ಮಾಡಿಕೊಂಡರೆ ಆತನ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ತುರ್ತಾಗಿ ನೀಡಬೇಕು. ಜೊತೆಗೆ ಆತನ ಪತ್ನಿಗೆ ₹ 2000 ಮಾಸಾಶನ ನೀಡಬೇಕು ಎಂಬ ಕಾನೂನನ್ನು ನಾನೇ ಜಾರಿಗೆ ತಂದಿದ್ದೆ. ಆದರೆ, ಕಾರಗದ್ದೆಯಲ್ಲಿ ರೈತ ಮೃತಪಟ್ಟು 20 ದಿನ ಕಳೆದರೂ ಪರಿಹಾರ ನೀಡದಿರುವುದು ಸರ್ಕಾರದ ತಪ್ಪು’ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.

ಅತಿವೃಷ್ಟಿ ಪರಿಹಾರ ಸಿಗದೆ ಆತ್ಮಹತ್ಯೆ ಮಾಡಿಕೊಂಡ ಹೋಬಳಿಯ ಎಸ್.ಕೆ.ಮೇಗಲ್ ಗ್ರಾಮದ ಚಂದ್ರೇಗೌಡ, ಕಾರಗದ್ದೆಯ ಚನ್ನಪ್ಪಗೌಡ ಅವರ ಮನೆಗಳಿಗೆ ಅವರು ಶನಿವಾರ ಭೇಟಿ ನೀಡಿ, ಬಳಿಕ ಮಾತನಾಡಿದರು.

ಎರಡೂ ಮನೆಗಳಲ್ಲಿ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಸಿದ್ಧರಾಮಯ್ಯ, ಧೈರ್ಯವಾಗಿ ಬದುಕನ್ನು ಎದುರಿಸುವಂತೆ ಸಲಹೆ ನೀಡಿದರು. ಎರಡೂ ಕುಟುಂಬಗಳಿಗೆ ವೈಯಕ್ತಿಕವಾಗಿ ತಲಾ ₹ 50 ಸಾವಿರ ನೀಡಿದರು. ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡರೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಯಾಕೆ ಸ್ಥಳಕ್ಕೆ ಭೇಟಿ ನೀಡಿಲ್ಲ. ಇದಕ್ಕಿಂತ ಒಳ್ಳೆ ಕೆಲಸ ಇನ್ನೇನು ಇದೆ ಎಂದು ಪ್ರಶ್ನಿಸಿದರು.

ಕಳಸ ತಾಲ್ಲೂಕಿನಲ್ಲಿ ಅನೇಕ ಮನೆಗಳಿಗೆ ಮತ್ತು ನೂರಾರು ಎಕರೆ ಜಮೀನಿಗೆ ಹಾನಿ ಆಗಿದೆ. ಆದರೆ, ಕಂದಾಯ ಇಲಾಖೆ ಈವರೆಗೂ ಸೂಕ್ತ ಪರಿಹಾರವನ್ನೇ ನೀಡಿಲ್ಲ ಎಂದು ಸ್ಥಳೀಯರು ದೂರಿದರು. ಆಗ ಜಿಲ್ಲಾಧಿಕಾರಿಯನ್ನು ಸಂಪರ್ಕಿಸುವ ಯತ್ನವನ್ನು ಸಿದ್ದರಾಮಯ್ಯ ಮಾಡಿದರು. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ.

ರಾಜ್ಯ ಸರ್ಕಾರ ₹ 38,000 ಕೋಟಿ ಪರಿಹಾರದ ಬೇಡಿಕೆ ಇರಿಸಿದರೆ ಕೇಂದ್ರ ₹ 1,200 ಕೋಟಿ ಅರೆಕಾಸಿನ ಪ್ಯಾಕೇಜ್ ನೀಡಿದೆ ಎಂದು ಟೀಕಿಸಿದರು.

ರಾಜ್ಯದ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ₹ 5000 ಕೋಟಿ ಮಧ್ಯಂತರ ಪರಿಹಾರ ನೀಡಬೇಕಿತ್ತು. 2 ತಿಂಗಳು ಕಳೆದ ಮೇಲೂ ಕನಿಷ್ಟ ಪರಿಹಾರ ನೀಡಿರುವುದು ತಪ್ಪು ಎಂದರು.

ಇದೀಗ 2 ದಿನ ಮಾತ್ರ ಅಧಿವೇಶನ ಕರೆದಿದ್ದಾರೆ. ಸರ್ಕಾರ ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ. ಇವರನ್ನು ಜನವಿರೋಧಿ ಎಂದರೆ ದೇಶದ್ರೋಹಿ ಎಂದು ಮೊಕದ್ದಮೆ ಹಾಕುತ್ತಾರೆ. ಐಟಿ, ಇಡಿ, ಸಿಬಿಐ ಎಂದು ಎಲ್ಲರನ್ನೂ ಹೆದರಿಸುತ್ತಾರೆ. ಆದರೆ, ನನಗೇನೂ ಭಯವಿಲ್ಲ ಎಂದು ಹೇಳಿದರು.

ಶಾಸಕರಾದ ಟಿ.ಡಿ. ರಾಜೇಗೌಡ, ಯು.ಟಿ.ಖಾದರ್, ಐವನ್ ಡಿಸೋಜ, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಮೋಟಮ್ಮ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಕುಮಾರ್, ಮುಖಂಡರಾದ ಗಾಯತ್ರಿ ಶಾಂತೇಗೌಡ, ಎ.ಎನ್. ಮಹೇಶ್, ಶಿವಾನಂದ ಸ್ವಾಮಿ, ಕೆ.ಆರ್.ಪ್ರಭಾಕರ್, ರಾಜೇಂದ್ರ ಹಿತ್ತಲಮಕ್ಕಿ, ಹರ್ಷ, ಶ್ರೀನಿವಾಸ ಹೆಬ್ಬಾರ್, ವಿಶ್ವನಾಥ್, ಶ್ರೇಣಿಕ, ವೀರೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT