ಸೋಮವಾರ, ಜನವರಿ 20, 2020
18 °C
ಸಿದ್ಧರಾಮೇಶ್ವರರ ಜಯಂತ್ಯುತ್ಸವಕ್ಕೆ ದಿನಗಣನೆ

ಸೊಲ್ಲಾಪುರದಲ್ಲಿ ಹಬ್ಬದ ಸಂಭ್ರಮ

ಜೆ.ಒ. ಉಮೇಶ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಅಜ್ಜಂಪುರ: ಸಮತೆಯ ಗಾರುಡಿಗ ‘ಶ್ರೀಗುರು ಸಿದ್ಧರಾಮ ಶಿವಯೋಗಿ’ ಅವರ 847ನೇ ಜಯಂತ್ಯುತ್ಸವಕ್ಕೆ ಪಟ್ಟಣ ಸಮೀಪದ ಸೊಲ್ಲಾಪುರ ಸಜ್ಜುಗೊಳ್ಳುತ್ತಿದೆ.

ಜಯಂತ್ಯುತ್ಸವ ನಡೆಯಲಿರುವ ಸ್ಥಳಕ್ಕೆ ಬರುವವರನ್ನು ಸೊನ್ನಾಲಿಗೆ ಮಹಾದ್ವಾರ ಸ್ವಾಗತಿಸುತ್ತಿದೆ. ಇನ್ನು ಕಾರ್ಯಕ್ರಮ ವೀಕ್ಷಿಸುವ ಜನರಿಗಾಗಿ ನುಲಿಯ ಚಂದಯ್ಯ ಮಂಟಪ ಸಿದ್ಧಗೊಂಡಿದೆ. ಕಾರ್ಯಕ್ರಮ ಜರುಗಲಿರುವ ಅಕ್ಕನಾಗಮ್ಮ ವೇದಿಕೆ ನಿರ್ಮಾಣ ಕಾರ್ಯ ಕೊನೆಯ ಹಂತದಲ್ಲಿದೆ.

ಕಾಯಕಯೋಗಿ, ಶಿವಯೋಗಿ, ಕರ್ಮಯೋಗಿಯೂ ಆದ ಸಿದ್ಧರಾಮೇಶ್ವರರ ಜಯಂತ್ಯುತ್ಸವದ ಪ್ರಯುಕ್ತ ಸೊಲ್ಲಾಪುರ ಕಸ, ತ್ಯಾಜ್ಯ ಮುಕ್ತವಾಗಿದೆ. ಗ್ರಾಮದ ರಸ್ತೆ, ಚರಂಡಿಗಳು ಸ್ವಚ್ಛಗೊಂಡಿವೆ. ದೇವಾಲಯ ಮುಂಭಾಗದಲ್ಲಿ ಬಣ್ಣದಿಂದ ರಂಗೋಲಿಯ ಚಿತ್ತಾರ ಮೂಡಿಸಲಾಗಿದೆ. ದೇವಾಲಯದ ಮುಂದಿನ ಕಂಬಗಳು ಕದಳಿ, ತೆಂಗಿನ ಗರಿಯ ಚಪ್ಪರದಿಂದ ಹಸಿರು ಮಯವಾಗಿವೆ.

ಜಯಂತ್ಯುತ್ಸವ ಗ್ರಾಮದಲ್ಲಿ ‘ಸಂಭ್ರಮ’ ತಂದಿದೆ. ಪ್ರತಿ ಮನೆಗಳೂ ಬಣ್ಣದ ಲೇಪನದಿಂದಾಗಿ ಹೊಸತನ ಕಂಡುಕೊಂಡಿವೆ. ಮಕ್ಕಳ ಕಲರವ ಕಾಣುತ್ತಿದೆ. ಹಬ್ಬದ ಸಡಗರ ಮನೆಮಾಡಿದೆ.‌ ಜಯಂತ್ಯುತ್ಸವದ ದಿನ ಅಂದರೆ ಸಂಕ್ರಾಂತಿಯಂದು, ಸೂರ್ಯ ‘ದಕ್ಷಿಣಾಯದಿಂದ ಉತ್ತರಾಯಣ’ದ ಕಡೆಗೆ ಪಥ ಬದಲಿಸುವನು. ಅಂದು ಗುರುವಿನ ದರ್ಶನ ಪಡೆದರೆ ಪುಣ್ಯ ಲಭಿಸುವುದೆಂಬ ನಂಬಿಕೆ ಹಿನ್ನೆಲೆಯಲ್ಲಿ, ಅಪಾರ ಪ್ರಮಾಣದ ಭಕ್ತರು ಸಿದ್ಧರಾಮೇಶ್ವರರ ದೇವಾಲಯಕ್ಕೆ ಭೇಟಿ ನೀಡುವ, ಹೂ-ಹಣ್ಣು ಸಮರ್ಪಿಸುವ, ಗುರುವಿನ ದರ್ಶನ ಪಡೆದು ಭಕ್ತಿ ಸಮರ್ಪಿಸುವ ಉತ್ಸಾಹದಲ್ಲಿದ್ದಾರೆ.

‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂಬ ನುಡಿಯಂತೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಜನಿಸಿ, ಆಂಧ್ರದ ಶ್ರೀಶೈಲದಲ್ಲಿ ಸಿದ್ಧಿ ಪಡೆದು, ಕರ್ನಾಟಕವನ್ನು ಕಾರ್ಯಕ್ಷೇತ್ರವಾಗಿ ಮಾಡಿಕೊಂಡ ಸಿದ್ಧರಾಮೇಶ್ವರರು ‘ಜಲ ಸಿದ್ಧಿ ಯೋಗಿ’ ಪರಿಣಿತರು ಆಗಿದ್ದರು.

ಮಳೆ ದೇವರು: ಭಕ್ತರ ದೃಷ್ಟಿಯಲ್ಲಿ ಇಂದಿಗೂ ಸಿದ್ಧರಾಮೇಶ್ವರರು ಮಳೆ ಕೊರತೆ ಆಗದಂತೆ ನೋಡಿಕೊಳ್ಳುವ ಶಕ್ತಿಯುಳ್ಳವರು. ಅವರು ಮಳೆ ಕರುಣಿಸುವ ‘ಮಳೆ ದೇವರು’ ಆಗಿದ್ದಾರೆ. ಇದೇ ಹಿನ್ನೆಲೆಯಲ್ಲಿ ಶ್ರೀಸ್ವಾಮಿಗೆ ಜಾತಿ, ಮತ, ಧರ್ಮ ಭೇದವಿಲ್ಲದೇ ಅನುಯಾಯಿಗಳಿದ್ದಾರೆ, ಭಕ್ತರಿದ್ದಾರೆ. ಅವರೆಲ್ಲರೂ ತಮ್ಮ ನೆಚ್ಚಿನ ಶರಣರ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳಲು ಸಿದ್ಧವಾಗಿದ್ದಾರೆ.

ಯಳನಾಡು ಸಂಸ್ಥಾನದ ಸಿದ್ಧರಾಮದೇಶೀಕೇಂದ್ರ ಸ್ವಾಮೀಜಿ, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಎಸ್.ಎಂ. ನಾಗರಾಜ್, ದೇವಾಲಯ ಸಮಿತಿ ಅಧ್ಯಕ್ಷ ರಾಜಣ್ಣ, ಸಿ.ಕೆ.ಸ್ವಾಮಿ, ಎಂ.ಕೃಷ್ಣಮೂರ್ತಿ, ಶಂಭೈನೂರು ಆನಂದಪ್ಪ ಭಾನುವಾರ ಸ್ಥಳದಲ್ಲಿದ್ದು, ಅಂತಿಮ ಹಂತದ ಸಿದ್ಧತೆಗಳಿಗೆ ಮಾರ್ಗದರ್ಶನ ನೀಡಿದರು. ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಜನ ವಿವಿಧ ಕಾರ್ಯಗಳಲ್ಲಿ ತೊಡಗಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು