ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒತ್ತಡ ನಿರ್ವಹಣೆಗೆ ಸದೃಢ ದೇಹ, ಮನಸ್ಸು ಸಹಕಾರಿ’

ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ
Last Updated 3 ಜನವರಿ 2019, 14:17 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಿದ್ದಾಗ ಒತ್ತಡ ನಿರ್ವಹಿಸಬಹುದು ಎಂದು ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶರಾದ ಉಮೇಶ ಎಂ.ಅಡಿಗ ಅಭಿಪ್ರಾಯಪಟ್ಟರು.

ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.ಸವಲತ್ತು –ಸಿಬ್ಬಂದಿ ಕೊರತೆ, ಅನಾನೂಲಗಳಿಂದಾಗಿ ಪೊಲೀಸರು ಒತ್ತಡದಲ್ಲಿ ಕಾರ್ಯನಿರ್ವಹಿಸುವ ಸ್ಥಿತಿ ಇದೆ. ಸಮಾಜದಲ್ಲಿ ಅಪರಾಧಗಳು ಹೆಚ್ಚುತ್ತಿವೆ. ಇಲಾಖೆಯಲ್ಲಿ ಒತ್ತಡವು ಹೆಚ್ಚುತ್ತಿದೆ ಎಂದು ಹೇಳಿದರು.

ಪೊಲೀಸ್‌ ಮತ್ತು ನ್ಯಾಯಾಂಗಕ್ಕೂ ಸಹೋದರ ಬಾಂಧವ್ಯ. ಸಮಾಜಕ್ಕೆ ನ್ಯಾಯ ನೀಡುವ ನಿಟ್ಟಿನಲ್ಲಿ ಎರಡೂ ಇಲಾಖೆಗಳ ಸಮನ್ವಯ ಕಾರ್ಯನಿರ್ವಹಣೆ ಬಹಳ ಮುಖ್ಯ ಎಂದು ಹೇಳಿದರು.

ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ರೋಮಾಂಚನ ಉಂಟುಮಾಡುತ್ತದೆ. ಮನಸ್ಸು ಉಲ್ಲಸಿತವಾಗಿರುತ್ತದೆ. ದೇಶ ಬಲಿಷ್ಠವಾಗಿಸುವ ನಿಟ್ಟಿನಲ್ಲಿ ಅಲ್ಲಿನ ಜನರು ದೈಹಿಕವಾಗಿ ಬಲಿಷ್ಠವಾಗಿರಬೇಕು. ದೈಹಿಕವಾಗಿ ಸದೃಢರಾಗಿದ್ದಾಗ ಆತ್ಮವಿಶ್ವಾಸ ಹೆಚ್ಚುತ್ತದೆ. ಆಶಕ್ತರಾಗಿದ್ದರೆ ಆತ್ಮವಿಶ್ವಾಸ ಕುಂದುತ್ತದೆ ಎಂದು ಹೇಳಿದರು.

ದೈಹಿಕ ದಾರ್ಢ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆಟೋಟಗಳು ಸಹಕಾರಿ. ಇಲಾಖೆ ವತಿಯಿಂದ ಟೂರ್ನಿ ಏರ್ಪಡಿಸಿರುವುದು ಒಳ್ಳೆಯದು. ಸಿಬ್ಬಂದಿ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆ ಮೆರೆಯಬೇಕು. ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ ಮಾತನಾಡಿ, ಮೂರು ದಿನ ಟೂರ್ನಿ ನಡೆಯಲಿದೆ. ಸುಮಾರು 35 ವಿವಿಧ ಆಟೋಟಗಳನ್ನು ಅಯೋಜಿಸಲಾಗಿದೆ. ಸ್ಪರ್ಧಾಮನೋಭಾವ ಮತ್ತು ಉತ್ಸಾಹದಿಂದ ಆಟೋಟಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಪಾರಿವಾಳಗಳು ಮತ್ತು ಬಲೂನು ಹಾರಿ ಬಿಟ್ಟು ಉದ್ಘಾಟನೆ ನೆರವೇರಿಸಲಾಯಿತು ಐದು ತುಕಡಿಗಳವರು ಆಕರ್ಷಕ ಕವಾಯತು ಪ್ರದರ್ಶಿಸಿದರು. ಆಟಗಾರರಿಗೆ ಕ್ರೀಡಾ ಪ್ರಮಾಣವಚನ ಬೋಧಿಸಲಾಯಿತು.

ಲಿಂಗದಹಳ್ಳಿ ಠಾಣೆಯ ಬಿ.ಡಿ.ಉಮೇಶ್‌ ಅವರು ಕ್ರೀಡಾಜ್ಯೋತಿ ತಂದರು. ಕ್ರೀಡಾಪಟುಗಳು ಉಲ್ಲಾಸದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್‌ ಚೇಂಗಟಿ, ಪ್ರಭಾರ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT