ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಾಮರ್ಥ್ಯ ಪ್ರದರ್ಶನಕ್ಕೆ ಅಡ್ಡಿ

ಮಲೆನಾಡು ಭಾಗದಲ್ಲಿ ಮಳೆಗಾಲದಲ್ಲಿ ಕ್ರೀಡಾಕೂಟ
Last Updated 15 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಮಲೆನಾಡಿನ ಭಾಗದಲ್ಲಿ ನಡೆಯುವ ಶಾಲಾ ಮತ್ತು ಕಾಲೇಜು ಕ್ರೀಡಾಕೂಟಗಳು ವಿದ್ಯಾರ್ಥಿಗಳ ಕ್ರೀಡಾ ಸಾಮರ್ಥ್ಯ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿದೆ ಎಂಬ ಮಾತು ಪೋಷಕರು ಹಾಗೂ ಕ್ರೀಡಾಪಟುಗಳಿಂದ ಕೇಳಿ ಬರುತ್ತಿದೆ.

ಬಹುತೇಕ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಮಳೆಯಿರುವ ಸಂದರ್ಭದಲ್ಲಿಯೇ ಆಯೋಜಿಸುವುದರಿಂದ ಅಥ್ಲೆಟಿಕ್ ಸೇರಿದಂತೆ ಯಾವುದೇ ಕ್ರೀಡೆಯಲ್ಲೂ ಸಂಪೂರ್ಣ ಸಾಮರ್ಥ್ಯ ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲಾ ಕೇಂದ್ರ ಹೊರತುಪಡಿಸಿ ಬಹುತೇಕ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿರುವ ಕ್ರೀಡಾಂಗಣಗಳು ಸುಸಜ್ಜಿತವಾಗಿಲ್ಲ. ಕ್ರೀಡಾಕೂಟ ನಡೆಯುವುದು ಮಳೆಗಾಲದ ಸಂದರ್ಭವಾಗಿರುವುದರಿಂದ ಕ್ರೀಡಾಂಗಣಕ್ಕೂ ಕೆಸರು ಗದ್ದೆಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಇಂತಹ ಕೆಸರುಗದ್ದೆ ಯಂತಾಗಿರುವ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು ಓಡುವಾಗ ಜಾರಿ ಬೀಳುವ ಸಾಧ್ಯತೆಗಳೇ ಹೆಚ್ಚಾಗುತ್ತಿದೆ. ಹೆಸರಿಗೆ ಮಾತ್ರ ಕ್ರೀಡಾಕೂಟಗಳು ನಡೆಯುತ್ತಿದೆ. ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಆಯೋಜಿಸಿದರೆ ಅನುಕೂಲ ಎಂಬುದು ಬಹುತೇಕರ ಅಭಿಪ್ರಾಯ.

ಇಡೀ ರಾಷ್ಟ್ರಕ್ಕೆ ಅನ್ವಯವಾಗುವ ಕ್ರೀಡಾ ವೇಳಾಪಟ್ಟಿಯನ್ನು ಸ್ಕೂಲ್ ಗೇಮ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಜಿಎಫ್ ಐ) ನಿರ್ಧಾರ ಮಾಡುತ್ತದೆ. ಅದು ನಿರ್ಧಾರ ಮಾಡುವ ವೇಳಾಪಟ್ಟಿಯಂತೆ ಜನವರಿ ತಿಂಗಳಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟಗಳು ನಿಗದಿಯಾಗಿರುತ್ತದೆ. ಹಾಗಾಗಿ, ನವೆಂಬರ್, ಡಿಸೆಂಬರ್ ತಿಂಗಳೊಳಗೆ ಎಲ್ಲಾ ರಾಜ್ಯಗಳಲ್ಲೂ ರಾಜ್ಯಮಟ್ಟದ ಕ್ರೀಡಾಕೂಟ ಮುಗಿದಿರುತ್ತದೆ. ಅಲ್ಲದೆ, ಸಾಮಾನ್ಯವಾಗಿ ವಲಯಮಟ್ಟದ ಕ್ರೀಡಾಕೂಟಗಳು ಅಕ್ಟೋಬರ್‌ನಲ್ಲಿ ನಿಗದಿಯಾಗಿರುತ್ತದೆ. ಈ ಅವಧಿಯ ಒಳಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟ ಮುಗಿಸಬೇಕಾಗಿರುವುದರಿಂದ ಈ ಕ್ರೀಡಾಕೂಟಗಳನ್ನು ಮಳೆಗಾಲದಲ್ಲಿ ನಡೆಸುವುದು ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಇದನ್ನು ಮುಂದೂಡಿದರೆ ಈ ಭಾಗದ ವಿದ್ಯಾರ್ಥಿಗಳು ವಂಚಿತರಾಗಬೇಕಾಗುತ್ತದೆ ಎಂಬುದಾಗಿ ಇಲಾಖೆಯ ಮೂಲಗಳು ತಿಳಿಸುತ್ತವೆ.

ಮಲೆನಾಡು ಭಾಗದಲ್ಲಿ ಮಳೆಗಾಲದಲ್ಲಿ ಕ್ರೀಡಾಕೂಟ ಆಯೋಜಿಸುವುದರಿಂದಾಗುವ ಸಮಸ್ಯೆ ಬಗ್ಗೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಹಲವು ಬಾರಿ ಪ್ರಸ್ತಾಪಿಸಲಾಗಿದೆ. ರಾಷ್ಟ್ರಮಟ್ಟದ ಕ್ರೀಡಾಕೂಟ ಪೂರ್ವ ನಿಗದಿಯಾಗಿರುವುದರಿಂದ ಅದರೊಳಗೆ ತಾಲ್ಲೂಕು, ಜಿಲ್ಲಾ, ರಾಜ್ಯಮಟ್ಟದ ಕ್ರೀಡಾಕೂಟ ಮುಗಿಸಬೇಕೆಂಬ ಉತ್ತರ ಇಲಾಖೆಯವರು ನೀಡುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್.ಸದಾಶಿವ ತಿಳಿಸಿದರು.

ಮಲೆನಾಡು ಭಾಗವಾದ ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರಕನ್ನಡ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ಕ್ರೀಡಾಕೂಟಕ್ಕೆ ಸಮಸ್ಯೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಸಮಸ್ಯೆಯಾಗದಿರುವುದರಿಂದ ಮಳೆಗಾಲದಲ್ಲಿ ಕ್ರೀಡಾಕೂಟ ಆಯೋಜಿಸಲಾಗುತ್ತದೆ. ಮಲೆನಾಡಿನ ಭಾಗದಲ್ಲಿ ಮಳೆಗಾಲದಲ್ಲಿ ಕ್ರೀಡಾಕೂಟ ಆಯೋಜಿಸುವುದರಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್.

ಮಳೆ ಇಲ್ಲದ ಸಂದರ್ಭದಲ್ಲಿ ಕ್ರೀಡಾಕೂಟ ಆಯೋಜಿಸಲು ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ. ಅಲ್ಲದೆ, ಒಂದು ಸೆಮಿಸ್ಟರ್‌ನಲ್ಲಿ ಕ್ರೀಡಾಕೂಟ ಹಾಗೂ ಇನ್ನೊಂದು ಸೆಮಿಸ್ಟರ್‌ನಲ್ಲಿ ಪ್ರತಿಭಾ ಕಾರಂಜಿ ಆಯೋಜಿಸಿದರೆ ಬೋಧನಾ ಕಾರ್ಯಕ್ಕೆ ತೊಂದರೆಯಾಗದ ರೀತಿ ಕಾರ್ಯಕ್ರಮ ಸಂಘಟಿಸಲು ಅನುಕೂಲವಾಗುತ್ತದೆ ಎಂಬ ವಿಚಾರವನ್ನು ಇಲಾಖೆಯ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ.

ಮಲೆನಾಡು ಭಾಗದ ಕ್ರೀಡಾಪಟುಗಳ ಸಮಸ್ಯೆ ಬಗ್ಗೆ ಸಂಬಂಧಪಟ್ಟವರು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಹಾಗೂ ಅನುದಾನ ಹೆಚ್ಚಿಸಲು ಕ್ರಮಕೈಗೊಳ್ಳಬೇಕೆಂಬುದು ಕ್ರೀಡಾಭಿಮಾನಿಗಳ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT