ಶೃಂಗೇರಿ: ಮರ ಕಡಿತಲೆ ಮಾಡಲು ಅರಣ್ಯ ಇಲಾಖೆ ಒಪ್ಪಿಗೆ

ಶೃಂಗೇರಿ: ‘ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-169ರಲ್ಲಿ ಚತುಷ್ಪಥ ನಿರ್ಮಾಣ ಕಾಮಗಾರಿಗೆ ಅಡಚಣೆಯಾಗಿರುವ 218 ಮರಗಳ ಕಡಿತಲೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ ತಿಳಿಸಿದರು.
ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಅಡಚಣೆಯಾಗಿರುವ ಮರಗಳನ್ನು ಕಡಿತಲೆ ಮಾಡುವ ಕುರಿತು ಕೊಪ್ಪ ಡಿಎಫ್ಒ ಕಚೇರಿಯಲ್ಲಿ ನಡೆದ ಅಧಿಕಾರಿಗಳ, ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು.
‘ಶೃಂಗೇರಿಯ ರಾಷ್ಟ್ರೀಯ ಹೆದ್ದಾರಿ ಆನೆಗುಂದ ಸಮೀಪದ ಕಡೆಮನೆಯಿಂದ ಉಳುವಳ್ಳಿಯ ರೈತಭವನದ ತನಕ 5 ಕಿ.ಮೀ, ಚತುಷ್ಪಥ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ ಅನುದಾನ ಬಿಡುಗಡೆಗೊಳಿಸಿದೆ. ಸಾರ್ವಜನಿಕರು ಮರಗಳ ಕಡಿತಲೆ ಮಾಡುವುದಕ್ಕೆ ಸಂಪೂರ್ಣ ಒಪ್ಪಿಗೆಯನ್ನು ಸಭೆಯಲ್ಲಿ ನೀಡಿದ್ದಾರೆ' ಎಂದರು.
ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಂಬ್ಲೂರು ರಾಮಕೃಷ್ಣ ಮಾತನಾಡಿ, ‘ರಸ್ತೆ ಪಕ್ಕದಲ್ಲಿರುವ ಮರಗಳನ್ನು ಕಡಿತಲೆ ಮಾಡಲು ಅರಣ್ಯ ಇಲಾಖೆ ನಿಗದಿಪಡಿಸಿದ ಬೆಲೆಯನ್ನು ನೀಡುವ ವ್ಯವಸ್ಥೆ ಇದ್ದು, ಅದರ ಬಾಬ್ತನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಭರಿಸಲು ಅವಕಾಶವಿದೆ. ಆದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೇ ಅರಣ್ಯ ಇಲಾಖೆಗೆ ಹಣ ಪಾವತಿಸಿ, ಕೂಡಲೇ ಮರ ತೆರೆವುಗೊಳಿಸಲು ಕ್ರಮ ತೆಗೆದುಕೋಳ್ಳಬೇಕು’ ಎಂದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ನಾಗರಾಜ್ ನಾಯ್ಕ್, ಶೃಂಗೇರಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹರೀಶ್ ಶೆಟ್ಟಿ, ಸದಸ್ಯರಾದ ರತ್ನಾಕರ್, ಎಚ್.ಎಸ್. ವೇಣುಗೋಪಾಲ್, ಬಿಜೆಪಿ ಮುಖಂಡ ಕೆ.ಎಂ ಶ್ರೀನಿವಾಸ್, ಎ.ಎಸ್ ನಯನ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬ್ಲೂರು ರಾಮಕೃಷ್ಣ, ಕಾಂಗ್ರೆಸ್ ಮುಖಂಡರಾದ ಕುರಾದಮನೆ ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನೂತನ್ ಕುಮಾರ್, ಕೃಷಿಕರಾದ ರಾಜೇಶ್, ಎಚ್.ಕೆ ನವೀನ್ ಹಾಗೂ ಹೆಚ್.ಎಸ್.ಸುಬ್ರಹ್ಮಣ್ಯ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.