ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಪಟ್ಟು

ನೂರು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸಲು ಆಗ್ರಹ: ಶೃಂಗೇರಿ ಬಂದ್‌ ಯಶಸ್ವಿ
Last Updated 22 ಅಕ್ಟೋಬರ್ 2021, 14:16 IST
ಅಕ್ಷರ ಗಾತ್ರ

ಶೃಂಗೇರಿ: ತಾಲ್ಲೂಕಿನಲ್ಲಿ 100 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಿಸುವಂತೆ ಒತ್ತಾಯಿಸಿ ಸ್ವಯಂಪ್ರೇರಿತ ಶೃಂಗೇರಿ ಬಂದ್ ಯಶಸ್ವಿಯಾಗಿ ನಡೆಯಿತು.

ಬಂದ್‌ಗೆ ವಿವಿಧ ಪಕ್ಷಗಳು, ಸಂಘಟನೆಗಳು, ವ್ಯಾಪಾರಸ್ಥರು ಸಾಥ್‌ ನೀಡಿದರು. ಸ್ವಯಂಪ್ರೇರಿತ ಬಂದ್‍ನಿಂದಾಗಿ ತಾಲ್ಲೂಕಿನಲ್ಲಿ ಮೆಡಿಕಲ್, ಆಸ್ಪತ್ರೆ ಮತ್ತು ದಿನನಿತ್ಯ ಬಳಕೆಯ ವಸ್ತುಗಳ ಅಂಗಡಿಗಳು ಹೊರತುಪಡಿಸಿ, ಉಳಿದೆಲ್ಲಾ ಲಾಡ್ಜ್, ರೆಸಾರ್ಟ್, ಹೋಂ ಸ್ಟೇ, ಹೋಟೆಲ್, ಜವಳಿ, ಅಂಗಡಿಗಳನ್ನು ಮುಚ್ಚಲಾಗಿತ್ತು.

ಕೆಎಸ್‍ಆರ್‌ಟಿಸಿ ಬಸ್, ಖಾಸಗಿ ಬಸ್, ಆಟೊ, ಟ್ಯಾಕ್ಸಿ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಹಳ್ಳಿ ಹಳ್ಳಿಗಳಲ್ಲಿ ಅಂಗಡಿಗಳನ್ನು ಬಂದು ಮಾಡಿ ಬೆಂಬಲ ಸೂಚಿಸಲಾಗಿತ್ತು. ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಶೃಂಗೇರಿ ಪಟ್ಟಣ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಬಂದ್‍ನಿಂದಾಗಿ ಬಸ್ ಇಲ್ಲದೆ ಶೃಂಗೇರಿ ಶಾರದಾ ಪೀಠಕ್ಕೆ ಬಂದ ಪ್ರವಾಸಿಗರು ತಮ್ಮ ತಮ್ಮ ಊರುಗಳಿಗೆ ತೆರಳಲು ಪರದಾಡಿದರು.

ಪ್ರತಿಭಟನಾ ಸಭೆಯಲ್ಲಿ ‘ಶೃಂಗೇರಿ ತಾಲ್ಲೂಕಿನಲ್ಲಿ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ’ ಸದಸ್ಯ ರಂಜಿತ್ ಮಾತನಾಡಿ, ‘ಶೃಂಗೇರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಸ್ತುತ 30 ಹಾಸಿಗೆ ಸೌಲಭ್ಯ ಮಾತ್ರ ಇದೆ. 2007ರಲ್ಲೇ 100 ಹಾಸಿಗೆಯ ಆಸ್ಪತ್ರೆಯಾಗಿ ದಾಖಲೆಯಲ್ಲಿ ಮಾತ್ರ ಮಂಜೂರಾತಿ ಆಗಿ, ಸಮುದಾಯ ಆರೋಗ್ಯ ಕೇಂದ್ರವಾಗಿಯೇ ಉಳಿದಿದೆ’ ಎಂದು ದೂರಿದರು.

‘ತಾಲ್ಲೂಕು ಆಸ್ಪತ್ರೆಯಾಗಿ ಮಂಜೂರಾತಿ ಆಗಿದ್ದರೂ 14 ವರ್ಷದಿಂದ ಆಡಳಿತಕ್ಕೆ ಬಂದ ಎಲ್ಲಾ ಸರ್ಕಾರವು ಸಾರ್ವಜನಿಕರ ಬೇಡಿಕೆಗಳನ್ನು ಒಂದು ಕೈನಿಂದ ಕೊಟ್ಟಂತೆ ಮಾಡಿ, ಇನ್ನೊಂದು ಕೈನಿಂದ ಅದು ಉಪಯೋಗಕ್ಕೆ ಬಾರದಂತೆ ಮಾಡಿದೆ. ಮಲೆನಾಡಿನಲ್ಲಿ ಹೆಚ್ಚಾಗಿ ಕೂಲಿಕಾರ್ಮಿಕರು ಹಾಗೂ ಸಣ್ಣ ಹಿಡುವಳಿದಾರರು ವಾಸವಾಗಿದ್ದು, ಅನಾರೋಗ್ಯ ಕಾಡಿದಾಗ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ತೆಗೆದುಕೊಳ್ಳುವ ಅನಿವಾರ್ಯತೆ ಇದೆ. ಪ್ರಸ್ತುತ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದೆ. ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿ ಸಮಸ್ಯೆ ನೀಗಿಸುವಲ್ಲಿ ಸರ್ಕಾರವು ಕೂಡಲೇ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಹೋರಾಟ ಸಮಿತಿ ಸದಸ್ಯ ಅಭಿಲಾಷ್ ಹೆಗ್ಡೆ ಮಾತನಾಡಿ, ‘ಇಲ್ಲಿ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್, ಸ್ತ್ರೀರೋಗ ಮಹಿಳಾ ತಜ್ಞರು, ಮಕ್ಕಳ ತಜ್ಞರು, ನೇತ್ರ ತಜ್ಞರು, ಕೀಲು ಮೂಳೆ ತಜ್ಞರು, ಕಿವಿ-ಮೂಗು-ಗಂಟಲು ತಜ್ಞರು, ಚರ್ಮರೋಗ ತಜ್ಞರು, ರೇಡಿಯೋಲಜಿ ತಜ್ಞರ ಹುದ್ದೆಗಳು ಸುದೀರ್ಘ ಕಾಲದಿಂದ ಖಾಲಿ ಇದೆ. ತುರ್ತು ಚಿಕಿತ್ಸೆಗಾಗಿ ಮಣಿಪಾಲ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರಿಗೆ ಹೋಗಬೇಕಾಗುವ ಪರಿಸ್ಥಿತಿ ಬಂದಿದೆ. ಕೂಡಲೇ ಸರ್ಕಾರ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

ಹೋರಾಟ ಸಮಿತಿ ಸದಸ್ಯ ಅಭಿಲಾಷ್ ಮೇಗೂರು ಮಾತನಾಡಿ, ‘ಹೇಳಿಕೊಳ್ಳುವುದಕ್ಕೆ 30 ಹಾಸಿಗೆಯ ಆಸ್ಪತ್ರೆ ಕಟ್ಟಡ ಇದಾಗಿದ್ದರೂ ಇಲ್ಲಿಯೂ ಕೊರತೆಗಳ ಸಾಮ್ರಾಜ್ಯವೇ ಮೆರೆಯುತ್ತಿದೆ. ನಿತ್ಯ ಸಾವಿರಾರು ಜನರು ಚಿಕಿತ್ಸೆಯನ್ನು ಅರಸಿ ಪಟ್ಟಣಕ್ಕೆ ಬಂದರೆ, ಮೂಲಸೌಲಭ್ಯದ ಕೊರತೆಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಇಲ್ಲಿನ ಆಸ್ಪತ್ರೆಯ ದುಸ್ಥಿತಿ ಬಗ್ಗೆ ಸರ್ಕಾರ, ಸಚಿವರು ಮತ್ತು ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಖಂಡರು, ರೈತ ಸಂಘ, ಮಲೆನಾಡು ಜನಪರ ಒಕ್ಕೂಟ, ಅಂಗನವಾಡಿ ಕಾರ್ಯಕರ್ತರ ಸಂಘ, ಸರ್ಕಾರಿ ನೌಕರರ ಸಂಘ, ಬಿಎಸ್‍ಪಿ, ವರ್ತಕರ ಸಂಘ, ಆಟೊ ಮತ್ತು ಟ್ಯಾಕ್ಸಿ ಚಾಲಕರ ಮತ್ತು ಮಾಲೀಕರ ಸಂಘ, ಬಜರಂಗದಳ, ಕರುನಾಡ ಸೇವಕರ ಸಂಘ, ಜನಜಾಗೃತಿ ವೇದಿಕೆ, ಎನ್‍ಎಸ್‍ಯುಐ, ಯುತ್ ಕಾಂಗ್ರೆಸ್, ಯುವ ಒಕ್ಕಲಿಗರ ವೇದಿಕೆ, ಯುವ ವಿಪ್ರ ವೇದಿಕೆ, ಬ್ರಾಹ್ಮಣ ಮಹಾಸಭಾ, ಜನಶಕ್ತಿ, ಯುವ ರೈತ ಸೇನೆ, ಭಾರತೀತೀರ್ಥ ಯೂತ್ ಅಂಡ್ ಸ್ಪೋರ್ಟ್ಸ್‌ ಕ್ಲಬ್, ಸವಿತಾ ಸಮಾಜ, ಆರ್ಯ ಈಡಿಗರ ಸಂಘ, ಶ್ರೀರಾಮಸೇನೆ ಮುಂತಾದ ಸಂಘಟನೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು.

ಸೋಮವಾರ ಜಿಲ್ಲಾಧಿಕಾರಿ ಭೇಟಿ

‘ಜಿಲ್ಲಾಧಿಕಾರಿ ಸೋಮವಾರ ಶೃಂಗೇರಿಗೆ ಭೇಟಿ ನೀಡುವರು. ತಹಶೀಲ್ದಾರ್ ಸರ್ವೆ ಮಾಡಿ ನಿಗದಿಪಡಿಸಿದ ಮೂರು ಜಾಗವನ್ನು ಪರಿಶೀಲಿಸುವರು. 15 ದಿನಗಳಲ್ಲಿ 100 ಹಾಸಿಗೆ ಸಾಮರ್ಥ್ಯದ ಸರ್ಕಾರಿ ಆಸ್ಪತ್ರೆ ಕಟ್ಟಡಕ್ಕೆ ಜಾಗ ಗುರುತು ಮಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ಶಾಸಕರ ಸಮ್ಮುಖದಲ್ಲಿ ಜಾಗ ಮಂಜೂರು ಮಾಡಲು ಜಿಲ್ಲಾಧಿಕಾರಿ ಒಪ್ಪಿಗೆ ನೀಡಿರುತ್ತಾರೆ. ಶೃಂಗೇರಿ ತಾಲ್ಲೂಕಿಗೆ ಒಂದು ಮೆಡಿಕಲ್ ಕಾಲೇಜು ನಿರ್ಮಿಸಲು ಸರ್ಕಾರದ ಗಮನಕ್ಕೆ ತರುತ್ತೇವೆ’ ಎಂದು ಉಪ ವಿಭಾಗಾಧಿಕಾರಿ ಡಾ.ಎಚ್.ಎಲ್ ನಾಗರಾಜ್ ಪ್ರತಿಭಟನಕಾರರಿಗೆ ಭರವಸೆ ನೀಡಿದರು.

‘ಜೀವನ ಪೂರ್ತಿ ಕಾಡುವ ನೋವು’

ಶೃಂಗೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಸೌಲಭ್ಯಗಳ ಕೊರತೆಯ ಕಾರಣಕ್ಕಾಗಿ ಈ ಭಾಗದಲ್ಲಿ ಅಪಘಾತವಾದ ವ್ಯಕ್ತಿಗಳನ್ನು ಮಣಿಪಾಲಕ್ಕೆ ಕರೆದುಕೊಂಡು ಹೋದರೆ, ಅಲ್ಲಿನ ವೈದ್ಯರು ಸ್ವಲ್ಪ ಹೊತ್ತು ಮುಂಚೆ ಕರೆದುಕೊಂಡು ಬಂದಿದ್ದರೆ ಪ್ರಾಣ ಉಳಿಸಬಹುದಿತ್ತು ಎಂದು ಹೇಳುವಾಗ ಆಗೋ ನೋವು ಜೀವನ ಪೂರ್ತಿ ಕಾಡುತ್ತದೆ ಎಂದು ಹೋರಾಟ ಸಮಿತಿ ಸದಸ್ಯ ಚೇತನ್ ಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT