ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಎಸ್ಸೆಸ್ಸೆಲ್ಸಿ ಫಲಿತಾಂಶ ಜಿಲ್ಲೆಗೆ 14ನೇ ಸ್ಥಾನ

ಕಳೆದ ಬಾರಿಗಿಂತ 12 ಸ್ಥಾನ ಜಿಗಿತ; ಶೇ 82.76 ಫಲಿತಾಂಶ ದಾಖಲು
Last Updated 30 ಏಪ್ರಿಲ್ 2019, 15:38 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಜಿಲ್ಲೆ ಶೇ 82.76 ಫಲಿತಾಂಶ ದಾಖಲಿಸಿ 14ನೇ ಸ್ಥಾನ ಗಳಿಸಿದೆ. ಕಳೆದ ಬಾರಿಗಿಂತ 12 ಸ್ಥಾನ ಮೇಲಕ್ಕೇರಿದೆ. ನಗರದ ಸೇಂಟ್‌ ಮೇರಿಸ್‌ ಶಾಲೆಯ ಯುಕ್ತಾ ಜಿ.ಸ್ವಾಮಿ ಅವರು 625ಕ್ಕೆ 622 ಅಂಕ (ಶೇ 99.52) ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕಳೆದ ಬಾರಿ ಜಿಲ್ಲೆ ಶೇ 72.47 ಫಲಿತಾಂಶ ದಾಖಲಿಸಿ, ರಾಜ್ಯದಲ್ಲಿ 26ನೇ ಸ್ಥಾನ ಪಡೆದಿತ್ತು. ಈ ಬಾರಿ ಹೊಸ, ಖಾಸಗಿ, ಪುನಾರವರ್ತಿತರು ಸಹಿತ ಒಟ್ಟು 13,429 ಮಂದಿ ಪರೀಕ್ಷೆ ಬರೆದಿದ್ದರು. ಈ ಪೈಕಿ 10,595 ಮಂದಿ ಪಾಸಾಗಿದ್ದಾರೆ.

ಹೊಸಬರು 12,105 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 10,133 ಮಂದಿ ತೇರ್ಗಡೆಯಾಗಿದ್ದಾರೆ. 5,993 ಬಾಲಕರ ಪೈಕಿ 4,895 (ಶೇ 81.67) ಹಾಗೂ 6112 ವಿದ್ಯಾರ್ಥಿನಿಯರಲ್ಲಿ 5,238 (85.70) ಮಂದಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಜಿಲ್ಲೆಯಲ್ಲಿ ಶೃಂಗೇರಿ ವಲಯ ಶೇ 90.96ಫಲಿತಾಂಶ ದಾಖಲಿಸಿ ಪ್ರಥಮ, ಚಿಕ್ಕಮಗಳೂರು ವಲಯ ಶೇ74.06ಫಲಿತಾಂಶ ದಾಖಲಿಸಿ ಎಂಟನೇ ಸ್ಥಾನ ಪಡೆದಿದೆ.

ಜಿಲ್ಲೆಯ 61 ಶಾಲೆಗಳು ಶೇ 100 ಫಲಿತಾಂಶ ದಾಖಲಿಸಿವೆ. ಈ ಪೈಕಿ ಅನುದಾನ ರಹಿತ– 33, ಸರ್ಕಾರಿ–26, ಅನುದಾನಿತ–2 ಶಾಲೆಗಳು ಇವೆ. ಶೂನ್ಯ ಫಲಿತಾಂಶ ಪಡೆದ ಶಾಲೆಗಳು ಇಲ್ಲ.

ಅನುದಾನ ರಹಿತ ಶಾಲೆಗಳ2,782 ವಿದ್ಯಾರ್ಥಿಗಳಲ್ಲಿ 2,617(ಶೇ 94.07), ಸರ್ಕಾರಿ ಶಾಲೆಗಳ 5,471 ವಿದ್ಯಾರ್ಥಿಗಳಲ್ಲಿ 4,468 (ಶೇ 81.67), ಅನುದಾನಿತ ಶಾಲೆಗಳ 3,852 ವಿದ್ಯಾರ್ಥಿಗಳಲ್ಲಿ 3,048(ಶೇ 79.73) ಮಂದಿ ಉತ್ತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮದ6,579 ವಿದ್ಯಾರ್ಥಿಗಳಲ್ಲಿ 5,024(ಶೇ.76.36), ಆಂಗ್ಲ ಮಾಧ್ಯಮದ 5,466 ವಿದ್ಯಾರ್ಥಿಗಳಲ್ಲಿ 5,078( ಶೇ 92.90), ಉರ್ದು ಮಾಧ್ಯಮದ 60 ವಿದ್ಯಾರ್ಥಿಗಳಲ್ಲಿ 31(51.67) ಮಂದಿ ತೇರ್ಗಡೆಯಾಗಿದ್ದಾರೆ.

* ಎಸ್ಸೆಸ್ಸಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆಯೋಜಿಸಲಾಗಿತ್ತು. ಶಿಕ್ಷಕರು ಆದ್ಯ ಗಮನ ಹರಿಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಿದ್ದರು. ನಿರ್ದೇಶನಗಳನ್ನು ಚಾಚೂ ತಪ್ಪದೇ ಅನುಷ್ಠಾನಗೊಳಿಸಿದ್ದೆವು. ಇದರಿಂದ ಫಲಿತಾಂಶದಲ್ಲಿ ಸುಧಾರಣೆ ಸಾಧ್ಯವಾಯಿತು.

–ಶಿವನಂಜಯ್ಯ, ಡಿಡಿಪಿಐ, ಚಿಕ್ಕಮಗಳೂರು

****

ವಲಯವಾರು ಫಲಿತಾಂಶ(ಹೊಸ,ಖಾಸಗಿ,ಪುನಾರವರ್ತಿತರು) ಅಂಕಿಅಂಶ

ಬ್ಲಾಕ್ ಹಾಜರಾದವರು ಉತ್ತೀರ್ಣ ಫಲಿತಾಂಶ (ಶೇ)

ಶೃಂಗೇರಿ 575 523 90.96

ಕೊಪ್ಪ 1026 881 85.87

ಮೂಡಿಗೆರೆ 1317 1087 82.54

ನ.ರಾ.ಪುರ 1004 820 72.84

ಬೀರೂರು 1361 1104 81.12

ಕಡೂರು 2455 1917 78.09

ತರೀಕೆರೆ 1951 1493 76.52

ಚಿಕ್ಕಮಗಳೂರು 3740 2770 74.06

ಸಾಧಕರ ಮನದಾಳ

ಯುಕ್ತಾಗೆ ಕೆಮಿಕಲ್‌ ಎಂಜಿನಿಯರಿಂಗ್‌ ಗುರಿ

ನಗರದ ಸೇಂಟ್‌ ಮೇರಿಸ್‌ ಶಾಲೆಯ ಯುಕ್ತಾ ಜಿ.ಸ್ವಾಮಿ 622 (ಶೇ 99.52) ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಯುಕ್ತಾ ಅವರು ರಾಮನಹಳ್ಳಿ ನಿವಾಸಿ ಮೆಸ್ಕಾಂ ಎಂಜಿನಿಯರ್‌ ಗುರುಸ್ವಾಮಿ ಮತ್ತು ಶಿಕ್ಷಕಿ ಹೇಮಾವತಿ ದಂಪತಿ ಪುತ್ರಿ.

ಈ ವಿದ್ಯಾರ್ಥಿನಿ ಕನ್ನಡದಲ್ಲಿ 125ಕ್ಕೆ124, ಇಂಗ್ಲಿಷ್‌, ಹಿಂದಿ, ಗಣಿತ, ವಿಜ್ಞಾನದಲ್ಲಿ 100ಕ್ಕೆ 100 ಹಾಗೂ ಸಮಾಜವಿಜ್ಞಾನ ವಿಷಯದಲ್ಲಿ 100ಕ್ಕೆ 98 ಅಂಕ ಪಡೆದಿದ್ದಾರೆ.

ಯುಕ್ತಾ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ತರಗತಿಯಲ್ಲಿ ಪಾಠ ಚೆನ್ನಾಗಿ ಗ್ರಹಿಸುತ್ತಿದ್ದೆ. ಶಾಲೆಯಲ್ಲೇ ಸಂಜೆ ಕೋಚಿಂಗ್‌ ವ್ಯವಸ್ಥೆ ಇತ್ತು. ಅಂದಿನ ಪಾಠವನ್ನು ಅಂದೇ ಓದುತ್ತಿದ್ದೆ. ಅರ್ಥವಾಗದ ಅಂಶಗಳನ್ನು ಶಿಕ್ಷಕರನ್ನು ಕೇಳಿ ಮನದಟ್ಟು ಮಾಡಿಕೊಳ್ಳುತ್ತಿದ್ದೆ. ಪ್ರತಿದಿನ 7ರಿಂದ8 ಗಂಟೆ ಅಧ್ಯಯನ ಮಾಡುತ್ತಿದ್ದೆ. ಶೈಕ್ಷಣಿಕ ವರ್ಷದ ಆರಂಭದಲ್ಲಿ ತಯಾರಿ ಶುರು ಮಾಡಿದ್ದೆ’ ಎಂದು ಸಿದ್ಧತೆ ಪರಿ ತಿಳಿಸಿದರು.

‘ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದ್ದೆ. ಪರೀಕ್ಷೆ ಹೊತ್ತಿಗೆ ಎಲ್ಲ ವಿಷಯಗಳನ್ನು ಐದಾರು ಬಾರಿ ಪುನರಾವರ್ತನೆ ಅಭ್ಯಾಸ ಮಾಡಿದ್ದೆ. ಪಿಯುನಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುತ್ತೇನೆ. ನಂತರ ಬಿ.ಇ–ಕೆಮಿಕಲ್‌ ಎಂಜಿನಿಯರಿಂಗ್‌ ಮಾಡುವ ಗುರಿ ಇದೆ. ಐಎಎಸ್‌ ಅಧಿಕಾರಿಯಾಗಬೇಕು ಎಂಬ ಕನಸು ಇದೆ’ ಎಂದು ಮನದಾಳ ಬಿಚ್ಚಿಟ್ಟರು.

ಭೂಮಿಕಾಗೆ ಏರೋನಾಟಿಕಲ್‌ ಎಂಜಿನಿಯರಿಂಗ್‌ ಗುರಿ

ಸೇಂಟ್‌ ಮೇರಿಸ್‌ ಶಾಲೆಯ ಭೂಮಿಕಾ ನಾಯ್ಡು ಸಿ.ಆರ್‌ ಅವರು 621 (ಶೇ 99.36) ಅಂಕ ಪಡೆದು ಸಾಧನೆ ಮಾಡಿದ್ದಾರೆ. ಭೂಮಿಕಾ ಅವರು ಕೋಟೆ ನಿವಾಸಿ ವರ್ತಕ ರವೀಂದ್ರನಾಥ್‌ ಮತ್ತು ಗೃಹಿಣಿ ಶುಭಾ ದಂಪತಿಯ ಪುತ್ರಿ.

ಕನ್ನಡದಲ್ಲಿ 125, ಹಿಂದಿ, ಗಣಿತ, ವಿಜ್ಞಾನದಲ್ಲಿ 100 ಹಾಗೂ ಇಂಗ್ಲಿಷ್‌, ಸಮಾಜವಿಜ್ಞಾನದಲ್ಲಿ ತಲಾ 98 ಅಂಕ ಗಳಿಸಿದ್ದಾರೆ.

ಭೂಮಿಕಾ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಬರೆದು ಅಭ್ಯಾಸ ಮಾಡುವುದನ್ನು ರೂಢಿಸಿಕೊಂಡಿದ್ದೆ. ವಿಷಯ ಅರ್ಥವಾಗುವವರೆಗೆ ಬಿಡುತ್ತಿರಲಿಲ್ಲ. ಪಠ್ಯಪುಸ್ತಕ, ಶಾಲೆಯಲ್ಲಿ ಓದಗಿಸಿದ್ದ ಅಧ್ಯಯನ ಸಾಮಗ್ರಿ ಚೆನ್ನಾಗಿ ಮನನ ಮಾಡಿದ್ದೆ.

ಬೇರೆ ಜಿಲ್ಲೆಗಳ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆಗಳನ್ನು ತರಿಸಿಕಂಡು ಬಿಡಿಸಿದ್ದೆ. ಮೂರು ಗಂಟೆ ನಿಗದಿ ಮಾಡಿಕೊಂಡು ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ ಸಮಯ ನಿರ್ವಹಣೆ ಅಭ್ಯಾಸ ಮಾಡಿದ್ದೆ’ ಎಂದು ಅಭ್ಯಾಸದ ಬಗೆ ವಿವರಿಸಿದರು.

‘ನಿತ್ಯ 6ರಿಂದ 7 ಗಂಟೆ ಓದುತ್ತಿದ್ದೆ. ಪಿಯುನಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುತ್ತೇನೆ. ನಂತರ, ಬಿ.ಇ– ಏರೋನಾಟಿಕಲ್‌ ಮಾಡುವ ಗುರಿ ಇದೆ. ಐಎಎಸ್‌ ಅಧಿಕಾರಿಯಾಗಬೇಕು ಎಂಬ ಕನಸು ಇದೆ’ ಎಂದು ಮನದಾಳ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT