ಗುರುವಾರ , ಅಕ್ಟೋಬರ್ 17, 2019
22 °C
ಚಿಕ್ಕಮಗಳೂರಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಮದ್ಯಪಾನ ನಿಷೇಧಿಸಲು ಒತ್ತಾಯ

Published:
Updated:
Prajavani

ಚಿಕ್ಕಮಗಳೂರು: ರಾಜ್ಯದಲ್ಲಿ ಮದ್ಯಪಾನ ನಿಷೇಧಿಸುವಂತೆ ದಲಿತ ಸಂಘರ್ಷ ಸಮಿತಿ, ಮದ್ಯ ನಿಷೇಧ ಆಂದೋಲನ ಸಂಸ್ಥೆ, ಕರ್ನಾಟಕ ರಕ್ಷಣಾವೇದಿಕೆ, ಸಿಪಿಐ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಮದ್ಯಪಾನ ಮುಕ್ತ ರಾಜ್ಯವನ್ನಾಗಿಸುವಂತೆ ಘೋಷಣೆ ಕೂಗಿದರು.

ಸಂವಿಧಾನದ 73 ನೇ ತಿದ್ದುಪಡಿ ಹಾಗೂ ಅನುಚ್ಛೇದ 47ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಗ್ರಾಮೀಣ ಭಾಗದಲ್ಲಿನ ಕಿರಾಣಿ, ಬೀಡಾ, ಹೋಟೇಲ್, ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ತಡೆಯಬೇಕು. ಪ್ರತಿ ಗ್ರಾಮಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿ ರಚಿಸಬೇಕು. ಅಕ್ರಮವಾಗಿ ಮದ್ಯಮಾರಾಟ ಮಾಡುವವರಿಗೆ ದಂಡ ವಿದಿಸುವ ಅಧಿಕಾರವನ್ನು ಸಮಿತಿಗೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಮಾತನಾಡಿ, ಮದ್ಯಮಾರಟದಿಂದ ಸರ್ಕಾರಕ್ಕೆ ವಾರ್ಷಿಕ ₹20 ಸಾವಿರ ಕೋಟಿ ಆದಾಯ ಬರುತ್ತದೆ ಎಂದು ಸರ್ಕಾರ ಹೇಳುತ್ತದೆ. ಆದರೆ ಮದ್ಯಪಾನ ಮಾಡುವವರ ಚಿಕಿತ್ಸೆಗೆ ವಾರ್ಷಿಕ ₹44 ಸಾವಿರ ಕೋಟಿ ವ್ಯಯವಾಗುತ್ತಿದೆ. ಮದ್ಯಮಾರಾಟದಿಂದ ಬರುವ ಪಾಪದ ಹಣವನ್ನು ಅನ್ನಭಾಗ್ಯ ಯೋಜನೆಗೆ ಬಳಸಬಾರದು. ಮದ್ಯಪಾನ ಮುಕ್ತ ರಾಷ್ಟ್ರವಾಗಿಸುವುದು ಮಹಾತ್ಮ ಗಾಂಧೀಜಿ ಗುರಿಯಾಗಿತ್ತು. ಅವರ ಆದರ್ಶವನ್ನು ಸರ್ಕಾರ ಮತ್ತು ಅಧಿಕಾರಿಗಳು ಪಾಲನೆ ಮಾಡಬೇಕು ಎಂದರು.

ಸಿಪಿಐ ಮುಖಂಡ ಬಿ.ಅಮ್ಜದ್ ಮಾತನಾಡಿ, ದೇಶದಲ್ಲಿ 18ರಿಂದ 35 ವಯೋಮಾನದ ಶೇ 45ರಷ್ಟು ಮಂದಿ ಮದ್ಯವ್ಯಸನಿಗಳಾಗಿದ್ದಾರೆ. ದೈಹಿಕ ಮತ್ತು ಮಾನಸಿಕ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ. ಮದ್ಯವ್ಯಸನಿಗಳ ಕುಟುಂಬ ಬೀದಿಗೆ ಬರುತ್ತಿದೆ. ರಾಜ್ಯದಲ್ಲಿ ಮದ್ಯ ನಿಷೇಧಿಸುವ ನಿಮಿತ್ತ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನೇತೃತ್ವದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುತ್ತಿದೆ ಎಂದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾಸಂಚಾಲಕ ಕೆ.ಪಿ.ರಾಜರತ್ನಂ, ಸದಸ್ಯ ಲಕ್ಷ್ಮಣ್, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ವಕ್ತಾರ ಎಂ.ಬಿ.ಅಶೋಕ್‌ಕುಮಾರ್, ಮುಖಂಡರಾದ ಡಾ.ಕೆ.ಸುಂದರಗೌಡ, ಗುರುಶಾಂತಪ್ಪ, ರಾಧಸುಂದರೇಶ್ ಇದ್ದರು.

Post Comments (+)