ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಾಖೆಗಳ ಸ್ಥಿರಾಸ್ತಿ ವಿವರ ನೀಡಲು ಸೂಚನೆ

ಹಣಕಾಸು, ಲೆಕ್ಕ ಪರಿಶೋಧನೆ, ಯೋಜನಾ ಸ್ಥಾಯಿ ಸಮಿತಿ ಸಭೆ
Last Updated 16 ಅಕ್ಟೋಬರ್ 2018, 14:11 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಇಲಾಖೆಗಳ ಸ್ಥಿರಾಸ್ತಿ ವಿವರವನ್ನು ವಾರದೊಳಗೆ ನೀಡಬೇಕು, ಸಭೆಯಲ್ಲಿ ಮಾಹಿತಿ ನೀಡದಿದ್ದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾಕೃಷ್ಣಪ್ಪ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಇಲಾಖೆ ಕಾರ್ಯಕ್ರಮಗಳು, ಯೋಜನೆಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಬೇಕು. ಕೆಲ ಅಧಿಕಾರಿಗಳಿಗೆ ಇಲಾಖೆಯ ಕಾರ್ಯಕ್ರಮಗಳು ಬಗ್ಗೆ ಮಾಹಿತಿ ಇಲ್ಲ. ಸಭೆಯಲ್ಲಿ ಮಾಹಿತಿ ನೀಡದಿದ್ದರೆ ಅಂಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.

ಸುಜಾತಾ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಅರಣ್ಯ ಅಧಿಕಾರಿಗಳು ಅರೆಬರೆ ಮಾಹಿತಿ ನೀಡಿದರು. ಕಾರ್ಯಕ್ರಮಗಳ ಮಾಹಿತಿಯನ್ನು ಸರಿಯಾಗಿ ನೀಡಿಲ್ಲ’ ಎಂದರು.

‘ಅಕೇಶಿಯಾ, ನೀಲಗಿರಿ ಗಿಡಗಳನ್ನು ನೆಡಬಾರದು ಎಂದು ಆದೇಶ ಇದೆ. ಈ ಅರಣ್ಯ ಇಲಾಖೆಯವರು ಈ ಗಿಡಗಳನ್ನು ನೆಟ್ಟಿರುವ ಬಗ್ಗೆ ಮಾಹಿತಿ ಇದೆ. ಈ ಗಿಡಗಳನ್ನು ನೆಟ್ಟಿಲ್ಲ ಎಂದು ಇಲಾಖೆಯವರು ಮೌಖಿಕವಾಗಿ ಮಾಹಿತಿ ನೀಡಿದ್ದಾರೆಯೇ ಹೊರತು ಲಿಖಿತವಾಗಿ ಮಾಹಿತಿ ನೀಡಿಲ್ಲ’ ಎಂದರು.

‘ಜಿಲ್ಲೆಯಲ್ಲಿ ನಾಟಾ ಡಿಪೊಗಳು ಎಷ್ಟಿವೆ, ಒಂದು ಡಿಪೊಕ್ಕೆ ನಾಟಾ ಸಂಗ್ರಹ ಮಿತಿ ಎಷ್ಟು, ಮರ ಅಕ್ರಮ ಸಾಗಣೆಯಡಿ ಈವರೆಗೆ ಎಷ್ಟು ಟಿಂಬರ್‌ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ ಕೊಳ್ಳಲಾಗಿದೆ ಎಂಬ ಬಗ್ಗೆಯೂ ಮಾಹಿತಿ ನೀಡಿಲ್ಲ. ಅರಣ್ಯ ಇಲಾಖೆಯವರು ಸಮರ್ಪಕ ಮಾಹಿತಿ ನೀಡಿಲ್ಲ’ ಎಂದರು.

‘ರೇಷ್ಮೆ, ಕೃಷಿ, ಶಿಕ್ಷಣ, ತೋಟಗಾರಿಕೆ ಮೊದಲಾದ ಇಲಾಖೆಗಳ ಸ್ಥಿರಾಸ್ತಿ ವಿವರ ನೀಡುವಂತೆ ಹಿಂದಿನ ಸಭೆಯಲ್ಲಿ ತಿಳಿಸಲಾಗಿತ್ತು. ವಾರದೊಳಗೆ ಈ ವಿವರ ನೀಡುವಂತೆ ಸೂಚನೆ ನೀಡಿದ್ದೇವೆ. ಇಲಾಖೆಗಳ ಆಸ್ತಿ ಒತ್ತುವರಿಯಾಗಿದ್ದು, ವರದಿ ಆಧರಿಸಿ ತೆರವುಗೊಳಿಸಲು ಕ್ರಮ ವಹಿಸಲಾಗುವುದು’ ಎಂದರು.

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಮಾಹಿತಿ ನೀಡಲು ತಡಬಡಾಯಿಸಿದರು. ವಿವಿಧ ಇಲಾಖೆಗಳವರು ವಿಮೆ ಯೋಜನೆಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಿಲ್ಲ. ಅತಿವೃಷ್ಟಿಯಿಂದ ಮಲೆನಾಡಿನಲ್ಲಿ ಬಹಳಷ್ಟು ಹಾನಿಯಾಗಿದೆ. ಈ ಬಗ್ಗೆ ವಿಸ್ತೃತ ವರದಿ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆಯವರಿಗೆ ಸೂಚನೆ ನೀಡಲಾಗಿದೆ’ ಎಂದರು.

‘ಆರೋಗ್ಯ ಕರ್ನಾಟಕ ಯೋಜನೆ ಬಗ್ಗೆ ಜನರಿಗೆ ತಿಳಿಸಬೇಕು. ಯೋಜನೆಯ ಪ್ರಯೋಜನ ವ್ಯವಸ್ಥಿತವಾಗಿ ತಲುಪುವಂತೆ ಕ್ರಮ ವಹಿಸಬೇಕು. ಚಿಕಿತ್ಸೆಗೆ ಬೇರೆ ಜಿಲ್ಲಾ ಕೇಂದ್ರಕ್ಕೆ ಹೋದಾಗ ಇಲ್ಲಿನ ಆಸ್ಪತ್ರೆ ಪತ್ರ ತರಲು ತಾಕೀತು ಮಾಡದಂತೆ ಕ್ರಮವಹಿಸಬೇಕು’ ಎಂದು ಸೂಚಿಸಿದರು.

ಅರೆಬರೆ ಮಾಹಿತಿ, ವಿವರಣೆ ನೀಡಲು ತಡಬಡ, ಅಧಿಕಾರಿಗಳ ಗೈರು ಕಾರಣದಿಂದಾಗಿ ಮಂಗಳವಾರ ಸಭೆ ಅರ್ಧಕ್ಕೆ ಮೊಟಕುಗೊಂಡಿತು. ಬುಧವಾರಕ್ಕೆ ಸಭೆ ಮುಂದೂಡಲಾಗಿತ್ತು ಎಂದರು.

ಸದಸ್ಯರಾದ ಕೆ.ಆರ್‌.ಮಹೇಶ್ ಒಡೆಯರ್, ಬಣಕಲ್ ಶಾಮಣ್ಣ , ಚಂದ್ರಮ್ಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮಾ, ಉಪಕಾರ್ಯದರ್ಶಿ ರಾಜಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT