ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ವಾಹನ ಒದಗಿಸುವ ಸಂಕಷ್ಟ!

ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಬೇಕಿದೆ ಸಾವಿರಕ್ಕೂ ಅಧಿಕ ವಾಹನಗಳು
Last Updated 10 ಮೇ 2018, 10:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇದೇ 12ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ಮತದಾನ ಹಾಗೂ ಅದಕ್ಕೂ ಮುನ್ನ ಭದ್ರತಾ ಸಿಬ್ಬಂದಿ, ವಿವಿಧ ಬಗೆಯ ವಿಚಕ್ಷಣಾ ದಳದ ಸಿಬ್ಬಂದಿಯ ಓಡಾಟಕ್ಕೆ ಒದಗಿಸಲು ಅಗತ್ಯವಿರುವ ವಾಹನಗಳನ್ನು ಹೊಂದಿಸಲು ಜಿಲ್ಲಾಡಳಿತ ತೀವ್ರ ಹರಸಾಹಸ ಪಡುತ್ತಿದೆ.

ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ವಿಶೇಷ ಭದ್ರತಾ ಪಡೆ (ಎಸ್‌ಪಿಜಿ)ಯ ರಕ್ಷಣೆ ಹೊಂದಿರುವ ನಾಯಕರು ಬಂದರಂತೂ ಹೆಚ್ಚಿನ ವಾಹನಗಳನ್ನು ಜಿಲ್ಲಾಡಳಿತ ಒದಗಿಸಬೇಕಿದ್ದು, ಖಾಸಗಿಯವರಿಂದಲೂ ಬಾಡಿಗೆಗೆ ಪಡೆದು ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ. ಒಮ್ಮೊಮ್ಮೆ ವಾಹನ ಮಾಲೀಕರ ಮನವೊಲಿಸಿ, ಕೆಲವೊಮ್ಮೆ ಒತ್ತಾಯಪೂರ್ವಕವಾಗಿ ವಾಹನಗಳನ್ನು ಪಡೆಯಲಾಗುತ್ತಿದೆ.

ಜಿಲ್ಲೆಯಲ್ಲಿ ವಿವಿಧ ಅಧಿಕಾರಿಗಳು ಬಳಸುವ ಅಂದಾಜು 160 ಸರ್ಕಾರಿ ವಾಹನಗಳಿದ್ದು, ಉಳಿದವುಗಳನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ ಬಳಸಿಕೊಳ್ಳಲಾಗುತ್ತಿದೆ. ಆದಾಗ್ಯೂ, ಜಿಲ್ಲೆಗೆ ಚುನಾವಣಾ ಕೆಲಸಕ್ಕಾಗಿ ನಿಯೋಜನೆಗೊಂಡಿರುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ಭದ್ರತಾ ಉಸ್ತುವಾರಿ ನೋಡಿಕೊಳ್ಳುವ ಅರೆ ಸೇನಾ ಪಡೆ ಸಿಬ್ಬಂದಿಗೆ ನೂರಾರು ಸಂಖ್ಯೆಯಲ್ಲಿ ವಾಹನಗಳನ್ನು ಒದಗಿಸಬೇಕಿದೆ. ಈ ಹೊಣೆಯನ್ನು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ಅವರು, ಧಾರವಾಡ ಹಾಗೂ ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ)ಗಳಿಗೆ ವಹಿಸಿದ್ದಾರೆ.

ಇದೇ 6ರಂದು ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಎಸ್‌ಪಿಜಿ ಸಿಬ್ಬಂದಿ ಈಗಾಗಲೇ ನಗರದಲ್ಲಿ ಬೀಡು ಬಿಟ್ಟಿದ್ದಾರೆ. ಭದ್ರತಾ ಪಡೆಯ ಓಡಾಟಕ್ಕಾಗಿ 26 ಇನೋವಾ ಹಾಗೂ 15 ಬೊಲೆರೊ ವಾಹನಗಳನ್ನು ಒದಗಿಸುವಂತೆ ಸೂಚನೆ ಬಂದಿದ್ದು, ನಿ‌ರ್ದಿಷ್ಟ ಮಾಡೆಲ್‌ನ ವಾಹನಗಳನ್ನು ಒದಗಿಸುವಷ್ಟರಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸುಸ್ತು ಹೊಡೆದಿದ್ದಾರೆ.

‘ಲೆಕ್ಕ ಪತ್ರ ವೀಕ್ಷಕರು, ಚುನಾವಣಾ ವೀಕ್ಷಕರು, ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಸೆಕ್ಟರ್‌ ಅಧಿಕಾರಿಗಳು, ಫ್ಲೈಯಿಂಗ್‌ ಸ್ಕ್ವಾಡ್‌ ಸಿಬ್ಬಂದಿಗೆ ಈಗಾಗಲೇ ವಿವಿಧ ಇಲಾಖೆಗಳಿಗೆ ನಿಯೋಜನೆಗೊಂಡಿರುವ ವಾಹನಗಳನ್ನು ಒದಗಿಸಲಾಗಿದೆ. ಆದಾಗ್ಯೂ, ಅನಿರೀಕ್ಷಿತವಾಗಿ ತಕ್ಷಣ ವಾಹನಗಳನ್ನು ಒದಗಿಸಬೇಕಾದ ಸವಾಲು ಎದುರಾಗುತ್ತಿದೆ’ ಎನ್ನುತ್ತಾರೆ ಸಾರಿಗೆ ಅಧಿಕಾರಿಯೊಬ್ಬರು.

‘ಮೇ 12ರಂದು ನಡೆಯಲಿರುವ ಮತದಾನಕ್ಕೆ 832 ಬಸ್‌ಗಳ ಬೇಡಿಕೆ ಇದ್ದು, ಸಾರಿಗೆ ಸಂಸ್ಥೆಯ ಬಸ್ಸುಗಳು, ಖಾಸಗಿ ಶಾಲಾ ವಾಹನಗಳು, ಟ್ರಾವೆಲ್‌ ಏಜೆನ್ಸಿಯ ಬಸ್‌ಗಳನ್ನು ಪಡೆಯಲಾಗುತ್ತಿದೆ. ಖಾಸಗಿಯವರಿಂದಲೂ ವಾಹನಗಳನ್ನು ತೆಗೆದುಕೊಳ್ಳಲಾಗಿದೆ. ನಿರೀಕ್ಷಿತ ಮಟ್ಟದಲ್ಲಿ ವಾಹನಗಳು ಲಭ್ಯವಾಗುತ್ತಿಲ್ಲ’ ಎಂದು ಆ ಅಧಿಕಾರಿ ತಿಳಿಸಿದರು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯಸ್ವಾಮಿ ನಾಲತವಾಡಮಠ, ‘ಎಷ್ಟು ವಾಹನಗಳು ಬೇಕು ಎಂಬುದನ್ನು ಜಿಲ್ಲಾ ಚುನಾವಣಾಧಿಕಾರಿ ಅವರು ತಿಳಿಸಿದ್ದಾರೆ. ಅದರಂತೆ ಸರ್ಕಾರಿ ಇಲಾಖೆಗಳ ವಾಹನಗಳು, ಮಾಸಿಕ ಬಾಡಿಗೆ ಆಧಾರ ಮೇಲೆ ಪಡೆದುಕೊಂಡಿರುವ ವಾಹನಗಳನ್ನು ಒದಗಿಸಿದ್ದೇವೆ. ಚುನಾವಣಾ ಕಾರ್ಯಕ್ಕೆ ಖಾಸಗಿಯವರೂ ತಮ್ಮ ವಾಹನಗಳನ್ನು ನೀಡಿ ಸಹಕರಿಸುತ್ತಿದ್ದಾರೆ’ ಎಂದರು.
*
ಕುಲಪತಿಗಳ ಕಾರು ಚುನಾವಣಾ ಕೆಲಸಕ್ಕೆ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ಕಿಮ್ಸ್‌ ನಿರ್ದೇಶಕರು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ರುಗಳಲ್ಲದೇ, ಅತಿ ಗಣ್ಯ ವ್ಯಕ್ತಿಗಳು ಜಿಲ್ಲೆಗೆ ಭೇಟಿ ನೀಡಿದಾಗ ಬಳಸುವ ಸರ್ಕಾರಿ ಕಾರುಗಳನ್ನೂ ಚುನಾವಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳಿಗೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT