ಆ.9ರಂದು ವಿಶ್ವ ಆದಿವಾಸಿ ದಿನಾಚರಣೆ, ಕಲಾಮೇಳ

7

ಆ.9ರಂದು ವಿಶ್ವ ಆದಿವಾಸಿ ದಿನಾಚರಣೆ, ಕಲಾಮೇಳ

Published:
Updated:
Deccan Herald

ಚಿಕ್ಕಮಗಳೂರು: ರಾಜ್ಯ ಆದಿವಾಸಿ ರಕ್ಷಣಾ ಪರಿಷತ್, ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ, ಕಲಬುರ್ಗಿ ವಿಭಾಗದ ಕಾಗಿನೆಲೆ ಕನಕ ಗುರುಪೀಠದ ಸಹಯೋಗದಲ್ಲಿ ಇದೇ 9ರಂದು ಬೆಂಗಳೂರಿನಲ್ಲಿ 24ನೇ ವಿಶ್ವ ಆದಿವಾಸಿ ದಿನಾಚರಣೆ ಆಯೋಜಿಸಲಾಗಿದೆ ಎಂದು ಆದಿವಾಸಿ ಪರಿಷತ್ತಿನ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ಶ್ರೀನಿವಾಸಗೌಡಲು ಇಲ್ಲಿ ಗುರುವಾರ ತಿಳಿಸಿದರು.

ಬೆಂಗಳೂರಿನ ವಸಂತನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 10ಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮರೂಢಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ಆದಿವಾಸಿಗಳ ಕಲಾಮೇಳಕ್ಕೆ ಚಾಲನೆ ನೀಡುವರು. ಸಚಿವ ಬಂಡೆಪ್ಪ ಕಾಶೆಂಪುರ್, ಸಮಾಜ ಕಲ್ಯಾಣ ಇಲಾಖೆ ಸಲಹೆಗಾರ ವೆಂಕಟಯ್ಯ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದರು.

ವಿಶ್ವ ಸಂಸ್ಥೆಯು 1995ರಿಂದ ವಿಶ್ವ ಆದಿವಾಸಿ ದಿನ ಆಚರಿಸುತ್ತಿದೆ. 2011ರಿಂದ ರಾಜ್ಯದಲ್ಲಿ ಆದಿವಾಸಿ ರಕ್ಷಣಾ ಪರಿಷತ್ತಿನ ವತಿಯಿಂದ ಆದಿವಾಸಿ ದಿನ ಆಚರಿಸಲಾಗುತ್ತಿದೆ. ರಾಜ್ಯ ಸರ್ಕಾರದ ವತಿಯಿಂದ ಆದಿವಾಸಿ ದಿನ ಆಚರಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಸಂಘದ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ಮುತ್ತಪ್ಪ ಮಾತನಾಡಿ, ಆದಿವಾಸಿ ಸಹಕಾರ ಸಂಘದಲ್ಲಿನ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ಕ್ರಮವಹಿಸಬೇಕು. ಆದಿವಾಸಿಗಳಿಗೆ ಶೇ 7.5ರಷ್ಟು ಮೀಸಲಾತಿ ನೀಡಬೇಕು. ಸಮುದಾಯದ ನಿವೇಶನ ರಹಿತರಿಗೆ ನಿವೇಶನ, ವಸತಿ ಹಂಚಿಕೆ ಮಾಡಬೇಕು ಎಂದರು.

ಆಂಧ್ರಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲಿಯೂ ಬುಡಕಟ್ಟು ಪ್ರದೇಶ ಘೋಷಣೆ ಮಾಡಬೇಕು. ವಿಶೇಷ ಸವಲತ್ತು ಒದಗಿಸಬೇಕು. ಅರಣ್ಯ ಹಕ್ಕು ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಆದಿವಾಸಿ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಪಿ.ರಾಜೇಶ್ ಮಾತನಾಡಿ, ಆದಿವಾಸಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ, ಆದಿವಾಸಿ ದಿನಾಚರಣೆ ಆಯೋಜಿಸಲಾಗಿದೆ. ಸರ್ಕಾರದ ಸೌಲಭ್ಯಗಳ ಕುರಿತು ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಸಂಘದ ಮೂಡಿಗೆರೆ ತಾಲ್ಲೂಕು ಘಟಕದ ಅಧ್ಯಕ್ಷ ಸುಂದರ್ ಕುಮಾರ್, ಸದಸ್ಯ ರಮೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !