ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿನಾಡಿನಲ್ಲಿ ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ

ಅನಗತ್ಯ ಓಡಾಟ, ಮಾಸ್ಕ್‌ ಧರಿಸದವರಿಗೆ ದಂಡದ ಬಿಸಿ l ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಸ್ತಬ್ಧ
Last Updated 12 ಜುಲೈ 2020, 16:03 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಭಾನುವಾರದ ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು, ಜನರು ಮನೆಗಳಲ್ಲೇ ಇದ್ದರು. ಅಂಗಡಿ, ಮಳಿಗೆಗಳು ಮುಚ್ಚಿದ್ದವು, ಜನ–ವಾಹನ ಓಡಾಟ ತೀರಾ ವಿರಳವಾಗಿತ್ತು.

ಆಸ್ಪತ್ರೆ, ಔಷಧ ಮಳಿಗೆಗಳು ತೆರೆದಿದ್ದವು. ತರಕಾರಿ, ಹಣ್ಣು, ಮಾಂಸ, ಹಾಲು, ದಿನಸಿ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದವು. ಮಾಂಸದ ಅಂಗಡಿಗಳ ಮುಂದೆ ಸ್ವಲ್ಪ ಗ್ರಾಹಕರು ಇದ್ದದ್ದು ಕಂಡುಬಂತು. ಅಗತ್ಯ ವಸ್ತುಗಳ ವ್ಯಾಪಾರ ಬಿಟ್ಟು ಉಳಿದ ವಾಣಿಜ್ಯ ಚಟುವಟಿಕೆಗಳು ಸ್ತಬ್ಧವಾಗಿದ್ದವು.

ರಸ್ತೆಗಿಳಿಯದ ಬಸ್‌, ಆಟೊ, ಟ್ಯಾಕ್ಸಿ: ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು, ಆಟೊ, ಟ್ಯಾಕ್ಸಿ ಇತರ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಸದಾ ಜನ–ವಾಹನಗಳಿದ್ದ ಗಿಜಿಗುಡುತ್ತಿದ್ದ ಐಜಿ ರಸ್ತೆ, ಎಂಜಿ ರಸ್ತೆ, ಕೆಎಂ ರಸ್ತೆ, ಮಾರುಕಟ್ಟೆ ರಸ್ತೆ, ಆರ್‌ಜಿ ರಸ್ತೆ, ರಾಮನಹಳ್ಳಿ ಮುಖ್ಯರಸ್ತೆ ಸಹಿತ ಎಲ್ಲ ರಸ್ತೆಗಳು ಭಣಗುಟ್ಟಿದವು.

ಕೆಎಸ್‌ಆರ್‌ಟಿಸಿ, ಆಟೊ, ಟ್ಯಾಕ್ಸಿ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಕೆಲವೆಡೆ ಬೀದಿನಾಯಿಗಳು, ಜಾನವಾರು ಓಡಾಡುತ್ತಿದ್ದ, ಪವಡಿಸಿದ್ದು ಕಂಡುಬಂತು. ನಿರ್ಗತಿಕರು, ಭಿಕ್ಷುಕರು ಅಲ್ಲೊಬ್ಬರು, ಇಲ್ಲೊಬ್ಬರು ಕುಳಿತಿದ್ದರು.

ದಂಡದ ಬಿಸಿ: ಮಾರ್ಕೆಟ್‌ ರಸ್ತೆ, ಎಂ.ಜಿ ರಸ್ತೆ ಪ್ರವೇಶ ಭಾಗ, ಎನ್‌ಎಂಸಿ ವೃತ್ತ ಮೊದಲಾದ ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ವೃತ್ತ ಪ್ರಮುಖ ವೃತ್ತಗಳು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್‌ ಕಾವಲು ಇತ್ತು. ನಗರದಲ್ಲಿ ಪೊಲೀಸರು ವಾಹನಗಳಲ್ಲಿ ಗಸ್ತು ತಿರುಗಿದರು.

ಬೈಕು, ಕಾರು, ಇತರ ವಾಹನಗಳಲ್ಲಿ ಓಡಾಡುತ್ತಿದ್ದವರನ್ನು ಪೊಲೀಸರು ತಪಾಸಣೆ ಮಾಡಿದರು. ಮಾಸ್ಕ್‌, ಹೆಲ್ಮೆಟ್‌ ಧರಿಸದ ಬೈಕ್‌ ಧರಿಸದ ಬೈಕ್‌ ಸವಾರರಿಗೆ, ಅನಗತ್ಯವಾಗಿ ಅಡ್ಡಾಡುತ್ತಿದ್ದವರಿಗೆ ದಂಡ ವಿಧಿಸಿದರು. ಮನೆಗೆ ವಾಪಸ್‌ ಕಳಿಸಿದರು.

ಹೊರ ಬರದ ಜನ: ಇಡೀ ದಿನ ಜನರು ಮನೆಯಲ್ಲೇ ಇದ್ದು ಲಾಕ್‌ಡೌನ್‌ಗೆ ಸ್ಪಂದನೆ ನೀಡಿದರು. ಮನೆಗಳಲ್ಲೇ ಟಿ.ವಿ ವೀಕ್ಷಣೆ, ಆಟ ಮೊದಲಾದವುಗಳಲ್ಲಿ ತೊಡಗಿ ಕಾಲ ಕಳೆದರು.

‘ಕೋವಿಡ್‌ ತಲ್ಲಣವು ಎಲ್ಲರನ್ನು ಮಾನಸಿಕವಾಗಿ ಹೈರಾಣ ಮಾಡಿದೆ. ಈ ಮಹಾಮಾರಿ ತೊಲಗಿದರೆ ಸಾಕು ಅನಿಸಿದೆ. ಮನೆಯಲ್ಲೇ ಇರುವುದು ಪಾರಾಗಲು ಇರುವ ಮಾರ್ಗೋಪಾಯ. ಮನೆಕೆಲಸ, ಮಕ್ಕಳೊಂದಿಗೆ ಆಟ, ಪತ್ರಿಕೆ ಓದಿ ದಿನ ಕಳೆದೆವು’ ಎಂದು ರಾಮನ ಹಳ್ಳಿ ನಿವಾಸಿ ಶಿಕ್ಷಕಿ ಗೀತಾ ಹೇಳಿದರು.

‘ತಳ್ಳುಗಾಡಿಯಲ್ಲಿ ವಿವಿಧ ಬಡಾವಣೆಗಳಿಗೆ ತರಕಾರಿ ಒಯ್ದು ಮಾರುತ್ತೇನೆ. ಬೆಳಿಗ್ಗೆ ಮಧ್ಯಾಹ್ನದವರೆಗೆ ₹ 100 ತರಕಾರಿ ವ್ಯಾಪಾರ ಆಗಿದೆ. ಕೊರೊನಾ ಬಂದಾಗಿನಿಂದ ಜೀವನ ಬಹಳ ಕಷ್ಟವಾಗಿದೆ’ ಎಂದು ವ್ಯಾಪಾರಿ ಕೃಷ್ಣಪ್ಪ ಅಳಲು ತೋಡಿಕೊಂಡರು.

ಪೊಲೀಸರ ಎಚ್ಚರಿಕೆ

ಶೃಂಗೇರಿ ಪಟ್ಟಣ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮೆಡಿಕಲ್, ದಿನಸಿ, ತರಕಾರಿ ಅಂಗಡಿ ಹೊರತು ಪಡಿಸಿ, ಉಳಿದೆಲ್ಲಾ ಅಂಗಡಿ ಮುಂಗಟ್ಟು ಮುಚ್ಚಲಾಗಿತ್ತು. ಇನ್ನೊಂದೆಡೆ ಅನವಶ್ಯಕವಾಗಿ ಬೈಕ್ ತಿರುಗಾಡುವರಿಗೆ ಪೊಲೀಸರು ಬಂಧಿಸುವ ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದೇವಾಲಯ, ಚರ್ಚ್, ಮಸೀದಿಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ದೇವಾಲಯದ ಆವರಣದೊಳಗೆ ಸಂಬಂಧಪಟ್ಟವರು ನಿತ್ಯದ ಪೂಜಾ ಪ್ರಕ್ರಿಯೆ ನಡೆಸಲು ಮಾತ್ರ ಅವಕಾಶ ನೀಡಲಾಗಿದೆ. ಶಾರದಾ ಪೀಠದಲ್ಲಿ ಜನರ ಪ್ರವೇಶಕ್ಕೆ ತಡೆ ಹಾಕಿ, ದ್ವಾರಕ್ಕೆ ಬೀಗ ಹಾಕಲಾಗಿತ್ತು.

ಸಂಪೂರ್ಣ ಸ್ತಬ್ಧ

ನರಸಿಂಹರಾಜಪುರ ತಾಲ್ಲೂಕಿನಾದ್ಯಂತ ಭಾನುವಾರ ಸಂಪೂರ್ಣ ಲಾಕ್‌ಡೌನ್ ಆಗಿದ್ದು ಪಟ್ಟಣದ ವ್ಯಾಪ್ತಿಯ ವ್ಯಾಪಾರ, ವಹಿವಾಟು ಸಂಪೂರ್ಣ ಸ್ತಬ್ಧವಾಗಿತ್ತು.

ಅವಶ್ಯಕ ವಸ್ತುಗಳ ಮಾರಾಟಕ್ಕೆ ಅವಕಾಶವಿದ್ದರೂ ದಿನಸಿ, ತರಕಾರಿ, ಹಾಲು, ಮಾಂಸ ಮಾರಾಟಗಾರರು ಸ್ವಯಂ ಪ್ರೇರಿತವಾಗಿ ಅಂಗಡಿ ಬಂದ್ ಮಾಡುವುದರ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಮೆಡಿಕಲ್ ಶಾಪ್ ಮಧ್ಯಾಹ್ನದವರೆಗೆ ಬಾಗಿಲು ತೆರೆದಿತ್ತು. ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಉತ್ತಮ ಪ್ರತಿಕ್ರಿಯೆ

ಅಜ್ಜಂಪುರ ಲಾಕ್‌ಡೌನ್‌ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಹುತೇಕ ಮಂದಿ ಮನೆಯಲ್ಲಿಯೇ ಉಳಿದರು. ಮೆಡಿಕಲ್ ಸ್ಟೋರ್ ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು ಮುಚ್ಚಿದ್ದವು. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಬಸ್ ನಿಲ್ದಾಣ, ಟಿ.ಎಚ್. ರಸ್ತೆ, ಗಾಂಧಿ ವೃತ್ತ ಜನ-ವಾಹನ ಸಂಚಾರವಿಲ್ಲದೇ ಖಾಲಿಯಾಗಿದ್ದವು. ಲಾಕ್‌ಡೌನ್ ನಿಯಮ ಅನುಷ್ಠಾನಕ್ಕಾಗಿ ಪೊಲೀಸರು ಮುಖ್ಯಸ್ಥಳಗಳಲ್ಲಿ ಮೊಕ್ಕಾಂ ಹೂಡಿದ್ದರು ಮತ್ತು ಗಸ್ತು ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT