ಸೋಮವಾರ, ಸೆಪ್ಟೆಂಬರ್ 27, 2021
23 °C
‘ಇನಾಫ್‌’: ಹಾಲು ಉತ್ಪಾದಕ ಜಾನುವಾರು ನೋಂದಣಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ 68 ಸಾವಿರ ರಾಸುಗಳಿಗೆ ಟ್ಯಾಗ್‌ ಅಳವಡಿಕೆ

ಬಿ.ಜೆ.ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹಾಲು ಉತ್ಪಾದಕ ಜಾನುವಾರು (ಹಸು,ಎಮ್ಮೆ) ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಈವರೆಗೆ 68,436 ಜಾನುವಾರುಗಳಿಗೆ ‘ಬಾರ್‌ಕೋಡ್‌ ಟ್ಯಾಗ್‌’ ಅಳವಡಿಸಲಾಗಿದೆ.

ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ(ಎನ್‌ಡಿಡಿಬಿ) ಇನ್ಫಾರ್ಮೆಷನ್‌ ನೆಟ್‌ವರ್ಕ್‌ ಫಾರ್‌ ಅನಿಮಲ್‌ ಪ್ರೊಡಕ್ಟಿವಿಟಿ ಅಂಡ್ ಹೆಲ್ತ್‌ (ಐಎನ್‌ಎಪಿಎಚ್‌– ಇನಾಫ್‌) ಕಾರ್ಯಕ್ರಮದಡಿ ನೋಂದಣಿ ಕೈಗೆತ್ತಿಕೊಳ್ಳಲಾಗಿದೆ. ಪಶುಪಾಲನೆ ಇಲಾಖೆಯು ನೋಂದಣಿ ಪ್ರಕ್ರಿಯೆ ನಡೆಸುತ್ತಿದೆ.

ಜಿಲ್ಲೆಯಲ್ಲಿ 1,56,450 ಜಾನುವಾರುಗಳಿಗೆ ಟ್ಯಾಗ್‌ ಅಳವಡಿಸುವ ಗುರಿ ನಿಗದಿಪಡಿಸಲಾಗಿದೆ. 2017ರ ಆಗಸ್ಟ್‌ 1ರಿಂದ 2019ರ ಏಪ್ರಿಲ್‌ ಅಂತ್ಯದ ಹೊತ್ತಿಗೆ 68,436 ಜಾನುವಾರುಗಳಿಗೆ ಅಳವಡಿಸಲಾಗಿದ್ದು, ಶೇ 43.72 ಗುರಿ ಸಾಧನೆಯಾಗಿದೆ.

ಟ್ಯಾಗ್‌ನಲ್ಲಿ ಬಾರ್‌ಕೋಡ್‌, ವಿಶಿಷ್ಟ ಸಂಖ್ಯೆ ಇರುತ್ತದೆ. ಸಂಖ್ಯೆ ಮತ್ತು ಬಾರ್‌ಕೋಡ್‌ ಮೂಲಕ ರಾಸುವಿನ ವಯಸ್ಸು, ಕರುಗಳ ಸಂಖ್ಯೆ, ಗರ್ಭಧಾರಣೆ ಅವಧಿ, ಹಾಲಿನ ಪ್ರಮಾಣ, ಮಾಲೀಕನ ಹೆಸರು, ವಿಳಾಸ ಮೊದಲಾದ ದತ್ತಾಂಶವನ್ನು ಆನ್‌ಲೈನ್‌ನಲ್ಲಿ ದಾಖಲಿಸಲಾಗುತ್ತದೆ.

‘ಈ ಟ್ಯಾಗ್‌ ರಾಸುವಿನ ಗುರುತಿನ ಚೀಟಿ, ನಮಗೆ ಆಧಾರ್‌ ಕಾರ್ಡ್‌ ಇದ್ದಂತೆ. ಗಣಕೀಕೃತ ವ್ಯವಸ್ಥೆಯಲ್ಲಿ ರಾಸುಗಳ ಸ್ಥಿತಿಗತಿ ದಾಖಲಾಗುತ್ತದೆ. ಕಾಲಕಾಲಕ್ಕೆ ದತ್ತಾಂಶ ‘ಅಪ್ಡೇಟ್‌’ ಮಾಡಲಾಗುತ್ತದೆ. ನೋಂದಣಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ’ ಎಂದು ಪಶುಪಾಲನೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ.ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಸುವಿನ ಕಿವಿಗೆ ಟ್ಯಾಗ್‌ ಅಳವಡಿಸಲಾಗುತ್ತದೆ. ಟ್ಯಾಗ್‌ ಹಾಕುವುದು ಸವಾಲಿನ ಕೆಲಸ. ಕಿವಿ ಹರಿಯದಂತೆ, ಗಾಯವಾಗದಂತೆ ಎಚ್ಚರಿಕೆಯಿಂದ ಅಳವಡಿಸಬೇಕು’ ಎಂದು ತಿಳಿಸಿದರು.

ರಾಸುವಿನ ಟ್ರಾಕ್‌ ರೆಕಾರ್ಡ್‌ ನಿರ್ವಹಣೆ ನಿಟ್ಟಿನಲ್ಲಿ ಈ ಟ್ಯಾಗ್‌ ಸಹಕಾರಿಯಾಗಿದೆ. ಲಸಿಕೆ, ಮೊದಲಾದ ಆರೋಗ್ಯ ಸಂಬಂಧಿ ಮಾಹಿತಿಗಳ ಕುರಿತು ರಾಸುವಿನ ಮಾಲೀಕನಿಗೆ ಸಂದೇಶ ರವಾನಿಸಬಹುದು. ನೋಂದಣಿ ಪ್ರಕ್ರಿಯೆ ಈಗ ಆರಂಭಿಕ ಹಂತದಲ್ಲಿದೆ. 

‘ರಾಸು ಗರ್ಭಧಾರಣೆ ಸಾಮರ್ಥ್ಯ ಗುರುತಿಸುವುದು.ಅನುವಂಶೀಯವಾಗಿ ಅಧಿಕ ಹಾಲು ನೀಡುವ ತಲೆಮಾರುಗಳನ್ನು ಗುರುತಿಸುವುದು. ಅವುಗಳನ್ನು ಹೆಚ್ಚು ಪ್ರಚುರಪಡಿಸುವುದು ಮೊದಲಾದವು ‘ಇನಾಫ್‌’ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದು ಡಾ.ಸಿ.ರಮೇಶ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.