ಮಂಗಳವಾರ, ಮಾರ್ಚ್ 21, 2023
29 °C
ಕೊಪ್ಪ ಅಂದಗಾರಿನ ಲಕ್ಷ್ಮೀನಾರಾಯಣ, ಆಂಜನೇಯಸ್ವಾಮಿ ದೇಗುಲ

ಕೊಪ್ಪ: ಪ್ರಕೃತಿ ಮಡಿಲಿನಲ್ಲಿ ಉದ್ಭವ ದೇವರು

ರವಿಕುಮಾರ್ ಶೆಟ್ಟಿಹಡ್ಲು Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ಮಲೆನಾಡಿನ ಪ್ರಕೃತಿ ಸೌಂದರ್ಯದ ನಡುವೆ ತಾಲ್ಲೂಕಿನ ಮರಿತೊಟ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿ ಅಂದಗಾರು ಗ್ರಾಮದಲ್ಲಿ ಬೃಹತ್ ಬಂಡೆಯ ಮೇಲೆ ಉದ್ಭವ ಲಕ್ಷ್ಮೀನಾರಾಯಣ ಮತ್ತು ಉದ್ಭವ ಆಂಜನೇಯ ಸ್ವಾಮಿ ದೇಗುಲವಿದ್ದು, ಭಕ್ತರನ್ನು ಕೈಬೀಸಿ ಕರೆಯುತ್ತಿದೆ.

ಗ್ರಾಮದ ಈ ಪ್ರದೇಶ ವಾಲಕಿಲ್ಯ ಮುನಿಗಳ ತಪೋಭೂಮಿಯಾಗಿ ಅವರ ಆಶ್ರಮವಿತ್ತು ಎಂದು ಹೇಳಲಾಗಿದೆ. ಶತಮಾನಗಳ ಹಿಂದೆ ಬೆಟ್ಟ ಗುಡ್ಡದ ಮಧ್ಯೆ ಅಗೋಚರ ಶಕ್ತಿಯಾಗಿ ದಟ್ಟ ಕಾಡಿನಲ್ಲಿ ಇದು ಕಣ್ಮರೆಯಾಗಿತ್ತು. 7 ಶತಮಾನಗಳ ಹಿಂದೆ ಈ ಪ್ರದೇಶ ನಾಡಿನ ಜನರ ಗಮನಕ್ಕೆ ಬಂದಿತ್ತು.

ಈ ಪ್ರದೇಶದಲ್ಲಿ ಹಸುವೊಂದು ಕಣ್ಮರೆಯಾಗಿತ್ತು. ಅದನ್ನು ಹುಡುಕುತ್ತಾ ಹೋದ ಗೋಪಾಲಕನಿಗೆ ಕಲ್ಲು ಬಂಡೆ ಬಳಿ ಹಸು ಪತ್ತೆಯಾಗಿತ್ತು, ಸಮೀಪಕ್ಕೆ ತೆರಳಿ ಪರಿಶೀಲಿಸಿದಾಗ ಆಶ್ಚರ್ಯ ರೀತಿಯಲ್ಲಿ ಅಲ್ಲಿ ಹಸು ಹಾಲು ಸೂಸುತ್ತಿರುವುದು ಆತನ ಗಮನಕ್ಕೆ ಬಂದಿತು. ಬಳಿಕ ಈ ಬಗ್ಗೆ ಜೋತಿಷಿಗಳನ್ನು ವಿಚಾರಿಸಿದಾಗ ಲಕ್ಷ್ಮೀನಾರಾಯಣ ಸ್ವಾಮಿ ಸಾನ್ನಿಧ್ಯ ಇರುವುದು ಕಂಡು ಬಂತು ಎಂಬ ಪ್ರತೀತಿ ಇದೆ.

ದೇಗುಲದ ಪಕ್ಕದಲ್ಲಿಯೇ ಕಲ್ಲು ಬಂಡೆಯ ಮಧ್ಯೆ ಹುತ್ತವಿದ್ದು, ಆಗಾಗ ನಾಗರ ಹಾವು ಪ್ರತ್ಯಕ್ಷವಾಗುತ್ತಿತ್ತು. ನಂತರ ಊರ ಹಿರಿಯರ ನೇತೃತ್ವದಲ್ಲಿ ವೇದಶಾಸ್ತ್ರಜ್ಞ ಪಂಡಿತರ ಮೂಲಕ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕೈಂಕರ್ಯ ನಡೆಸಲಾಯಿತು. ಬಳಿಕ ಇದು ಲಕ್ಷ್ಮೀನಾರಾಯಣ ಕ್ಷೇತ್ರವಾಗಿ ಹೆಸರು ಪಡೆಯಿತು.

2017 ಫೆಬ್ರುವರಿ 23ರಂದು ಶೃಂಗೇರಿಯ ಭಾರತಿತೀರ್ಥ ಸ್ವಾಮೀಜಿಯವರ ಅಪ್ಪಣೆ ಮೇರೆಗೆ ವಿಧುಶೇಖರ ಭಾರತಿ ಸ್ವಾಮೀಜಿ ಅವರು ಬ್ರಹ್ಮ ಕುಂಭಾಭಿಷೇಕ ನೆರವೇರಿಸಿದರು.

‘ಉದ್ಭವ ಲಕ್ಷ್ಮೀನಾರಾಯಣ ಸ್ವಾಮಿ ಸನ್ನಿಧಿ ಇರುವ ಅತೀ ವಿರಳ ಪ್ರದೇಶಗಳಲ್ಲಿ ಅಂದಗಾರಿನ ದೇಗುಲವೂ ಒಂದು’ ಎಂದು ಅರ್ಚಕ ವೇದಬ್ರಹ್ಮಶ್ರೀ ಶ್ರೀನಿಧಿ ಭಟ್ ಹೇಳುವ ಮಾತು.

ಉದ್ಭವ ಆಂಜನೇಯ ಸ್ವಾಮಿ ಸನ್ನಿಧಿ: ಶತಮಾನಗಳ ಹಿಂದೆ ದೇವಸ್ಥಾನದ ನವೀಕರಣಕ್ಕಾಗಿ ಇಲ್ಲಿಗೆ ಕಲ್ಲಿನ ಕಂಬಗಳನ್ನು ತರಿಸಲಾಯಿತು. ಆದರೆ, ನವೀಕರಣ ಕೆಲಸ ಸ್ಥಗಿತಗೊಂಡಿತು. ಈ ತೊಡಕಿನ ಬಗ್ಗೆ ಜ್ಯೋತಿಷ್ಯದ ಮೊರೆ ಹೋದಾಗ ತಿಳಿದು ಬಂದ ಸಂಗತಿ ಎಂದರೆ, ನವೀಕರಣಕ್ಕೆ ತಂದಿರುವ ಒಂದು ಕಂಬದಲ್ಲಿ ಆಂಜನೇಯ ಸ್ವಾಮಿ ಒಡಮೂಡಿದೆ ಎಂಬುದು. ನಂತರ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಯಿತು.

ದೇವರ ಪೂಜೆಗೆ ದೇವಸ್ಥಾನ ಬಳಿ ಬಾವಿಯನ್ನು ಕೊರೆಯಲಾಯಿತು. ಹಲವು ಕಾಲ ಕಳೆದರೂ ನೀರು ಸಿಗಲಿಲ್ಲ, ಆ ಸಮಯದಲ್ಲಿ ಉತ್ತರ ಭಾರತದ ಸಾಧುವೊಬ್ಬರು ಕಾಶಿಯಿಂದ ತಂದ ಗಂಗಾ ಜಲವನ್ನು ಈ ಬಾವಿಗೆ ಹಾಕಿದರು. ನಂತರ ಬಾವಿಯಲ್ಲಿ ನೀರು ಕಾಣಿಸಿತು, ಕಾಲಾನಂತರ ಕೆರೆಯಾಗಿ ಮಾರ್ಪಾಡಾಯಿತು.

ಎತ್ತರದ ಗುಡ್ಡ ಪ್ರದೇಶವಾಗಿದ್ದರೂ ಬೇಸಿಗೆಯಲ್ಲಿಯೂ ಇಲ್ಲಿನ ಕೆರೆಯಲ್ಲಿ ನೀರು ಸಂಪೂರ್ಣ ಬತ್ತಿದ ಉದಾಹರಣೆಯಿಲ್ಲ. ನೀರಿನಲ್ಲಿ ಔಷಧೀಯ ಗುಣವಿದೆ ಎಂದು ನಂಬಿರುವ ಭಕ್ತರು ತೀರ್ಥವಾಗಿ ಸ್ವೀಕರಿಸುತ್ತಾರೆ.

ಅಂದಗಾರಿನ ಎ.ಜಿ.ಸುಬ್ರಹ್ಮಣ್ಯ ಅವರು ವಹಿವಾಟುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅರ್ಚಕ ಶ್ರೀನಿಧಿ ಭಟ್ ನಿತ್ಯಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಾರೆ.

ಪ್ರತಿವರ್ಷ ಜಾತ್ರಾ ಮಹೋತ್ಸವ, ಕಾರ್ತಿಕ ದೀಪೋತ್ಸವ, ರಂಗಪೂಜೆ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ, ವೇದ ಪಾರಾಯಣಗಳು ಎಂದಿನಂತೆ ಮುಂದುವರಿಯುತ್ತಿವೆ, ಈ ಮೂಲಕ ದೇವರನ್ನು ಆರಾಧಿಸಲಾಗುತ್ತಿದೆ.

ತೆರಳುವ ಮಾರ್ಗ: ತಾಲ್ಲೂಕು ಕೇಂದ್ರದಿಂದ ಸುಮಾರು 4 ಕಿ.ಮೀ. ದೂರವಿದೆ. ಚಿಕ್ಕಮಗಳೂರು ಕಡೆಗೆ ತೆರಳುವ ಮುಖ್ಯರಸ್ತೆಯಲ್ಲಿ ಎನ್.ಕೆ.ರಸ್ತೆಯಿಂದ 1.5 ಕಿ.ಮೀ. ದೂರ ಸಂಚರಿಸಿದರೆ ಸಮೀಪದಲ್ಲಿ ದೇವಸ್ಥಾನಕ್ಕೆ ಮಾರ್ಗ ದೊರೆಯುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು