ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಐಡಿಎಸ್‌ಜಿ ಕಾಲೇಜಿನಲ್ಲಿ ಶೌಚಾಲಯ ದುರವಸ್ಥೆ

ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು ?
Last Updated 11 ಫೆಬ್ರುವರಿ 2021, 2:26 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಐಡಿಎಸ್‌ಜಿ ಕಾಲೇಜಿನ ಶೌಚಾಲಯಗಳು ನೀರಿನ ಕೊರತೆ, ಮುರುಕಲು ಕಮೋಡು, ಕೊಳಕಿನ ತಾಣವಾಗಿವೆ. ವಿದ್ಯಾರ್ಥಿಗಳು ಯಾತನೆ ಪಡುವಂತಾಗಿದೆ.

ಶೌಚಾಲಯಗಳಲ್ಲಿ ನೀರಿನ ಸಮಸ್ಯೆ ವಿಪರೀತವಾಗಿದೆ. ಹಲವು ಹುಡುಗರು ಕಾಲೇಜಿನ ಅಕ್ಕಪಕ್ಕದ ಬಯಲಲ್ಲೇ ನಿಸರ್ಗ ಕರೆ ಮುಗಿಸುತ್ತಾರೆ. ವಿದ್ಯಾರ್ಥಿನಿಯರಿಗೆ ದುರವಸ್ಥೆಯ ಶೌಚಾಲಯಗಳೇ ಗತಿಯಾಗಿದೆ.

ಬೀರೂರು, ಕಡೂರು, ಸಖರಾಯಪಟ್ಟಣ, ಅಲ್ದೂರು, ಮೂಡಿಗೆರೆ ಮುಂತಾದ ಭಾಗಗಳಿಂದ ವಿದ್ಯಾರ್ಥಿಗಳು ಈ ಕಾಲೇಜಿಗೆ ಬರುತ್ತಾರೆ. 3500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. 150ಕ್ಕೂ ಹೆಚ್ಚು ಬೋಧಕರು (ಕಾಯಂ, ಅತಿಥಿ ಉಪನ್ಯಾಸಕರಸಹಿತ) ಇದ್ದಾರೆ. ಶೌಚಾಲಯಗಳ ನಳಗಳಲ್ಲಿ ನೀರು ಬರುವುದು ಅಪರೂಪ. ಹೀಗಾಗಿ, ಶೌಚಾಲಯದ ಪಡಸಾಲೆಯಲ್ಲಿ ಡ್ರಮ್‌ಗಳನ್ನು ಇಟ್ಟು ನೀರು ತುಂಬಿಸಲು ವ್ಯವಸ್ಥೆ ಮಾಡಲಾಗಿದೆ. ಡ್ರಮ್‌ಗಳಿಗೆ ನೀರು ತುಂಬಿಸಲು ‘ಮೀನಮೇಷ’ ಎಣಿಸುವುದು ಬಿಕ್ಕಟ್ಟು ಸೃಷ್ಟಿಸಿದೆ. ಬೋಧಕ ಸಿಬ್ಬಂದಿಯ ಶೌಚಾಲಯಗಳೂ ಸಮಸ್ಯೆಗಳಿಂದ ಹೊರತಾಗಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.

‘ಹಳ್ಳಿಯಿಂದ ಬೆಳಿಗ್ಗೆ ಹೊರಟು ಕಾಲೇಜಿಗೆ ಬರುತ್ತೇವೆ. ಮಧ್ಯಾಹ್ನದವರೆಗೂ ತರಗತಿಗಳು ಇರುತ್ತವೆ. ಕಾಲೇಜಿನ ಶೌಚಾಲಯ ದುಃಸ್ಥಿತಿ ಹೇಳತೀರದಾಗಿದೆ. ಡ್ರಮ್‌ನಲ್ಲಿ ನೀರು ಇಲ್ಲ ಎಂದು ಸಿಬ್ಬಂದಿಗೆ ಹೇಳಿದರೆ ನಮಗೇ ದಬಾಯಿಸುತ್ತಾರೆ. ನಮ್ಮ ಗೋಳು ಕೇಳುವವರಿಲ್ಲ’ ಎಂದು ಬಿ.ಎಸ್ಸಿ ವಿದ್ಯಾರ್ಥಿನಿಯೊಬ್ಬರು ಸಂಕಟ ತೋಡಿಕೊಂಡರು.

ಕೆಲವು ಕಡೆ ಅಳವಡಿಸಿರುವ ಕಮೋಡುಗಳು ಹಾಳಾಗಿವೆ. ಹೆಜ್ಜೆ ಇಡುವ ‘ಪಿಟ್‌’ಗಳು ಅಸ್ತವ್ಯಸ್ತವಾಗಿವೆ. ಕೆಲವೆಡೆ ಟೈಲ್ಸ್‌ಗಳು ಒಡೆದಿವೆ. ನಿರ್ವಹಣೆ ಇಲ್ಲದೆ ಕೆಲ ಕೋಣೆಗಳು ಕೊಳಕಾಗಿವೆ. ಡಬ್ಬಿಗಳಲ್ಲಿ ಕಸ ತುಂಬಿಕೊಂಡಿದೆ. ಮೊದಲ ಮಹಡಿಯ ಕೆಲವು ತರಗತಿ ಕೊಠಡಿಗಳು ದೂಳುಮಯವಾಗಿವೆ. ‘ಶೌಚಾಲಯ ನಿರ್ವಹಣೆ ಸಮಸ್ಯೆ ಬಹಳ ದಿನಗಳಿಂದ ಇದೆ. ಪರಿಹರಿಸಲು ಸಂಬಂಧಪಟ್ಟವರು ಗಮನಹರಿಸಬೇಕು’ ಎಂದು ಅತಿಥಿ ಉಪನ್ಯಾಸಕರೊಬ್ಬರು ಹೇಳುತ್ತಾರೆ.

‘ಶೌಚಾಲಯ ನಿರ್ವಹಣೆ ನಿರ್ಲಕ್ಷ್ಯ’
ಕೋವಿಡ್‌–19 ಮಾರ್ಗಸೂಚಿ, ಸ್ವಚ್ಛತೆ ಪಾಲನೆಗೆ ಕಾಲೇಜಿನವರು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದಾರೆ. ಮಾಸ್ಕ್‌ ಧಾರಣೆ, ಸ್ಯಾನಿಟೈಸರ್‌ನಿಂದ ಕೈ ತೊಳೆಯಲು ಕ್ರಮ ವಹಿಸಲಾಗಿದೆ. ಆದರೆ, ಶೌಚಾಲಯ ನಿರ್ವಹಣೆಗೆ ಕಾಲೇಜಿನವರು ಗಮನಹರಿಸದಿರುವುದು ವಿಪರ್ಯಾಸ. ಶೌಚಾಲಯ ಸಮರ್ಪಕ ನಿರ್ವಹಣೆಗೆ ತಕ್ಷಣ ಗಮನಹರಿಸಬೇಕು ಎಂಬುದು ವಿದ್ಯಾರ್ಥಿಗಳು ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT