ಸಂಚಾರ ನಿಯಮ ಉಲ್ಲಂಘನೆ ಪ್ರಕರಣ; 5 ವರ್ಷಗಳಲ್ಲಿ 4 ಪಟ್ಟು ಹೆಚ್ಚಳ

ಶುಕ್ರವಾರ, ಮೇ 24, 2019
23 °C

ಸಂಚಾರ ನಿಯಮ ಉಲ್ಲಂಘನೆ ಪ್ರಕರಣ; 5 ವರ್ಷಗಳಲ್ಲಿ 4 ಪಟ್ಟು ಹೆಚ್ಚಳ

Published:
Updated:
Prajavani

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ, ಐದು ವರ್ಷಗಳಲ್ಲಿ ನಾಲ್ಕು ಪಟ್ಟು ಜಾಸ್ತಿಯಾಗಿದೆ.

2013ನೇ ಸಾಲಿನಲ್ಲಿ 33,191ಪ್ರಕರಣ ದಾಖಲಿಸಲಾಗಿದ್ದು, ₹ 50 ಲಕ್ಷ ದಂಡ ವಸೂಲಾಗಿದೆ. 2018ನೇ ಸಾಲಿನಲ್ಲಿ 1,33,902 ಪ್ರಕರಣ ದಾಖಲಿಸಲಾಗಿದ್ದು, ₹ 1.80 ಕೋಟಿ ದಂಡ ಸಂಗ್ರಹವಾಗಿದೆ.

ಉಲ್ಲಂಘನೆ ಪೈಕಿ ಹೆಲ್ಮೆಟ್‌ ಧರಿಸದ ಪ್ರಕರಣಗಳು ಅತಿ ಹೆಚ್ಚು ಇವೆ. ಜಿಲ್ಲಾ ಪೊಲೀಸ್‌ ಇಲಾಖೆ ಅಂಕಿಅಂಶ ಪ್ರಕಾರ 2018ನೇ ಸಾಲಿನಲ್ಲಿ ಹೆಲ್ಮೆಟ್‌ ಧರಿಸದವು– 47,067, ಸೀಟ್‌ ಬೆಲ್ಟ್‌ ಧರಿಸದವು– 22,475, ಚಾಲನಾ ಪರವಾನಗಿ ಇಲ್ಲದಿರುವುದು– 2,920, ಎಲ್ಲೆಂದರಲ್ಲಿ ವಾಹನ ನಿಲುಗಡೆ– 2,523, ಅಜಾಗರೂಕತೆ– 647, ವಾಹನ ಚಲಾಯಿಸುವಾಗ ಮೊಬೈಲ್‌ ಬಳಕೆ– 528, ಮದ್ಯಸೇವಿಸಿ ವಾಹನ ಚಾಲನೆ– 403, ಅತಿ ವೇಗ– 394 ಪ್ರಕರಣಗಳು ದಾಖಲಾಗಿವೆ.

ಮಲೆನಾಡು, ಬಯಲುಸೀಮೆ ಭೌಗೋಳಿಕ ವೈಶಿಷ್ಟ್ಯದ ಈ ಜಿಲ್ಲೆಯ ಜಲಪಾತ, ಗಿರಿಶ್ರೇಣಿ, ಕಾನನ, ದೇಗುಲ ಮೊದಲಾದವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಾಂಗುಡಿ ಇದ್ದೇ ಇರುತ್ತದೆ. ಸಾಲು ರಜೆ, ವಾರಾಂತ್ಯದ ದಿನಗಳಲ್ಲಂತೂ ಪ್ರವಾಸಿ ವಾಹನಗಳು ಗಿಜಿಗುಡುತ್ತವೆ. ಜಿಲ್ಲೆಯಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ 2018ರಲ್ಲಿ (ಜನವರಿಯಿಂದ ಡಿಸೆಂಬರ್‌ಗೆ) 164 ರಸ್ತೆ ಅಪಘಾತ ಪ್ರಕರಣ ಸಂಭವಿಸಿದ್ದು, ಅಪಘಾತಗಳಲ್ಲಿ 170 ಮಂದಿ ಮೃತಪಟ್ಟಿದ್ದಾರೆ.

‘ಹೆಲ್ಮೆಟ್‌, ಸೀಲ್ಟ್‌ ಬೆಲ್ಟ್‌ ಧರಿಸದೆ ವಾಹನ ಚಲಾಯಿಸುವುದು, ಬೈಕಿನಲ್ಲಿ ಮೂವರು ಸವಾರಿ, ಡ್ರೈವಿಂಗ್‌ ಲೈಸೆನ್ಸ್‌ ಇಲ್ಲದೆ ಚಾಲನೆ, ಯದ್ವಾತದ್ವಾ ಚಾಲನೆ ಇಂಥವೆಲ್ಲ ಮಾಡುವುದು ಯುವಜನರೇ ಜಾಸ್ತಿ. ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಬಗ್ಗೆ ಪ್ರತಿ ಕಾಲೇಜಿನಲ್ಲಿಯೂ ಕಾರ್ಯಕ್ರಮ ಆಯೋಜಿಸಿ ಯುವಪೀಳಿಗೆಗೆ ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದು ಶಿಕ್ಷಕ ಮಂಜುನಾಥ್‌ ಹೇಳುತ್ತಾರೆ.

ಸಂಚಾರ ನಿಯಮ ಉಲ್ಲಂಘನೆ ನಿಗಾ ನಿಟ್ಟಿನಲ್ಲಿ ಆರು ತಿಂಗಳಿನಿಂದ ನಗರದಲ್ಲಿ ತಂಡಗಳನ್ನು ಹೆಚ್ಚಿಸಲಾಗಿದೆ. ಹೆಲ್ಮೆಟ್‌, ಸೀಟ್‌ ಬೆಲ್ಟ್‌, ನಿರ್ಲಕ್ಷ್ಯ ಅತಿವೇಗದಂಥ ಪ್ರಕರಣಗಳು ಕಡಿಮೆಯಾಗಿವೆ ಎಂದು ಪೊಲೀಸರು ಹೇಳುತ್ತಾರೆ.

‘ಸಂಚಾರ ವ್ಯವಸ್ಥೆ ಸುಧಾರಣೆಗೆ ಆದ್ಯತೆ’

ಸಂಚಾರ ವ್ಯವಸ್ಥೆ ಸುಧಾರಣೆಗೆ ಆದ್ಯತೆ ನೀಡಲಾಗುತ್ತಿದೆ. ನಗರದಲ್ಲಿ ಹಾಳಾಗಿರುವ ಸಂಚಾರ ಫಲಕ, ಪ್ರತಿಫಲನ (ರಿಫ್ಲೆಕ್ಟರ್ಸ್‌), ವಿಭಜಕ ಪೋಲ್‌ಗಳು ಮೊದಲಾದವನ್ನು ತೆಗೆದು ಹೊಸವನ್ನು ಅಳವಡಿಸಲು ಸಿದ್ಧತೆ ನಡೆದಿದೆ. ಈಗಾಗಲೇ ₹ 5 ಲಕ್ಷದ ಸಾಮಗ್ರಿ ಖರೀದಿಸಲಾಗಿದೆ, ಇನ್ನು ₹ 4 ಲಕ್ಷದ ಮೊತ್ತ ಸಾಮಗ್ರಿ ಬರಬೇಕಿದೆ. ಶೀಘ್ರದಲ್ಲಿ ಕೆಲಸ ಶುರು ಮಾಡಲಾಗುವುದು. ನಗರದಲ್ಲಿ ಹೊಸದಾಗಿ ಮೂರು ಕಡೆ (ಎಐಟಿ ವೃತ್ತ, ಹಿರೇಮಗಳೂರು ಬಳಿ...) ಸಿಗ್ನಲ್‌ ದೀಪ ಅಳವಡಿಸಬೇಕು ಎಂಬ ಬಗ್ಗೆ ರಸ್ತೆ ಸುರಕ್ಷತಾ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದರು. 

ಸಂಚಾರ ನಿಯಮ ಉಲ್ಲಂಘನೆ ಪ್ರಕರಣ, ದಂಡ ವಸೂಲಿ ಅಂಕಿಅಂಶ

ವರ್ಷ ಪ್ರಕರಣ ದಂಡ ಮೊತ್ತ

2013; 33,191; ₹ 50.51 ಲಕ್ಷ;

2014; 47,552; ₹ 79.17ಲಕ್ಷ;

2015; 47,036; ₹ 86.13 ಲಕ್ಷ;

2016; 80,901; ₹ 1.21 ಕೋಟಿ;

2017; 1,18,699; ₹ 1.59 ಕೋಟಿ;

2018; 1,33,902 ₹ 1.80 ಕೋಟಿ;

2019(ಮಾರ್ಚ್‌ವರೆಗೆ); 42,185 ₹ 52.22 ಲಕ್ಷ;

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !