ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುಸಂಕ; ಬದುಕಿನ ನಡಿಗೆಯೇ ಆತಂಕ

ಮಲೆನಾಡಿನ ಹಲವೆಡೆ ಹಳ್ಳ, ಹೊಳೆ ದಾಟುವ ಸಂಕಷ್ಟ l ಆಯತಪ್ಪಿದರೆ ನೀರಿಗೆ
Last Updated 12 ಸೆಪ್ಟೆಂಬರ್ 2022, 5:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದ ಹಲವೆಡೆ ಹಳ್ಳ, ಹೊಳೆ ದಾಟಲು ಕಾಲುಸಂಕಗಳೇ ದಾರಿ. ಕೆಲವೆಡೆ ಗ್ರಾಮಸ್ಥರೇ ಮರದ ದಿಮ್ಮಿ, ಕಟ್ಟಿಗೆ, ಹಲಗೆ, ಬಿದಿರು ಬಳಸಿ ಕಾಲುಸಂಕ ನಿರ್ಮಿಸಿಕೊಂಡಿದ್ದು, ಬಹಳಷ್ಟು ದುಃಸ್ಥಿತಿಯಲ್ಲಿವೆ.

ಮೂಡಿಗೆರೆ, ಕಳಸ, ಎನ್‌.ಆರ್.ಪುರ, ಶೃಂಗೇರಿ, ಕೊಪ್ಪ ತಾಲ್ಲೂಕುಗಳಲ್ಲಿ ಕಾಲುಸಂಕಗಳು ಇವೆ. ಮಳೆಗಾಲದಲ್ಲಿ ಹಳ್ಳ, ತೊರೆ, ಹೊಳೆಗಳು ಉಕ್ಕಿ ಹರಿಯುತ್ತವೆ. ಕಾಲುಸಂಕದಲ್ಲಿ ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗುವುದು ಕಷ್ಟಕರ.

ಕಾಡು, ಗುಡ್ಡ ಭಾಗಗಳ ಹಲವು ಜನವಸತಿಗಳ ಸಂಪರ್ಕ ಸೇತುಗಳು ಈ ಕಾಲು ಸಂಕಗಳು. ಈ ಪ್ರದೇಶಗಳ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಜನರು ನಿತ್ಯ ಕಾಲುಸಂಕದಲ್ಲೇ ಸಾಗಬೇಕು.

2019–20ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಸರ್ವಋತು ಸಂಪರ್ಕ ಕಲ್ಪಿಸಲು ‘ಶಾಲಾ ಸಂಪರ್ಕ ಸೇತು’ ಯೋಜನೆಯಡಿ 1,317 ಕಿರು ಸೇತುವೆಗಳನ್ನು ನಿರ್ಮಿಸುವುದಾಗಿ ಘೋಷಿಸಿತ್ತು. ಈ ಯೋಜನೆಯಡಿ ಜಿಲ್ಲೆಯಲ್ಲಿ 186 ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು. ಈ ಪೈಕಿ ಹಲವು ಕಾಮಗಾರಿಗಳು ಇನ್ನೂ ಮುಗಿದಿಲ್ಲ ಎಂಬ ದೂರುಗಳು ಇವೆ.

ಸೌದೆ, ಮೇವು, ಸಾಗಣೆ ಪ್ರಯಾಸ
ಕೊಪ್ಪ
: ತಾಲ್ಲೂಕು ಪಂಚಾಯಿತಿ ವತಿಯಿಂದ ಒಟ್ಟು 140 ಕಾಲುಸಂಕಗಳನ್ನು ಗುರುತಿಸಲಾಗಿದೆ. ಹಲವೆಡೆ ಕಾಂಕ್ರಿಟ್ ಕಾಲು ಸೇತುವೆ ನಿರ್ಮಿಸಲಾಗಿದೆ. ಅವುಗಳ ಪೈಕಿ ಕೆಲವು ಕಡೆಗೆ ದುರಸ್ತಿಗೆ ಆದ್ಯತೆ ನೀಡಬೇಕಿದೆ, ಕೈಪಿಡಿ ಹಾಕಿಕೊಡಬೇಕಿದೆ.

ತಾಲ್ಲೂಕಿನ ಅಬ್ಬಿಗುಂಡಿ ಗ್ರಾಮದಲ್ಲಿ ಮರದ ಕಾಲುಸಂಕ ಇತ್ತು. ಕೆಲವು ವರ್ಷ ಹಿಂದೆ ಬಾಲಕಿಯೊಬ್ಬಳು ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಾಗ ಶಿಕ್ಷಕಿಯೊಬ್ಬರು ರಕ್ಷಿಸಿದ್ದರು. ಬಳಿಕ ಎಚ್ಚೆತ್ತ ಸರ್ಕಾರ ಕಾಂಕ್ರಿಟ್ ಕಾಲುಸಂಕ ನಿರ್ಮಿಸಿತ್ತು.

ಅಬ್ಬಿಗುಂಡಿಯ ಕಾಲುಸಂಕ ತಳಪಾಯ ವಾಲಿ, ಅಪಾಯದ ಸ್ಥಿತಿಯಲ್ಲಿದೆ. ತಡೆಗೋಡೆ ಇಲ್ಲ. ಮಳೆಗಾಲದಲ್ಲಿ ತೇಲಿಕೊಂಡು ಬರುವ ಮರದ ದಿಮ್ಮಿಗಳು ಕಾಲುಸಂಕದ ಅಡಿಪಾಯದ ಕಂಬಕ್ಕೆ ಬಡಿದು ಹಾನಿಯಾಗುತ್ತಿದೆ. ಕೆಳಭಾಗದಲ್ಲಿ ನೀರಿನ ರಭಸಕ್ಕೆ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಕೊಪ್ಪ ತಾಲ್ಲೂಕಿನ ಸಿದ್ದರಮಠ ಸಮೀಪದ ಮಾತ್ಗಾರ್, ತೀರ್ಥಹಳ್ಳಿ ತಾಲ್ಲೂಕಿನ ಬಾಂದ್ ಹಡ್ಲು ಎಂಬಲ್ಲಿ ಹತ್ತಾರು ಮನೆಗಳಿವೆ. ಎರಡು ಗ್ರಾಮದ ಮಧ್ಯೆ ಹೊಳೆ ಹರಿಯುತ್ತದೆ. ಅದನ್ನು ದಾಟಲು ಗ್ರಾಮಸ್ಥರು ಮರದಿಂದ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ.

ಮಳೆಗಾಲ ಪೂರ್ವದಲ್ಲಿ ಪ್ರತಿವರ್ಷ ಮರದ ಕಾಲುಸಂಕವನ್ನು ಗ್ರಾಮಸ್ಥರೇ ನಿರ್ಮಿಸಿಕೊಳ್ಳುತ್ತಾರೆ. ಜೋರಾಗಿ ಮಳೆಯಾದಾಗ ಅದು ಹಾಳಾಗುವುದು ಮಾಮೂಲು. ಮಳೆ ಇಳಿಕೆಯಾದ ಬಳಿಕ ಗ್ರಾಮಸ್ಥರು ಮತ್ತೆ ಕಾಲುಸಂಕ ದುರಸ್ತಿಪಡಿಕೊಳ್ಳುತ್ತಾರೆ. ಮನೆಗಳಿಗೆ ಸೌದೆ, ದನ ಕರುಗಳಿಗೆ ಮೇವು, ಸೊಪ್ಪು ತರಲು ಪಡಿಪಾಟಲುಪಡಬೇಕು ಎಂದು ಸ್ಥಳೀಯರು ಹೇಳುತ್ತಾರೆ.

ಅಪಾಯದಲ್ಲಿ ಕಾಲುಸಂಕ
ಶೃಂಗೇರಿ:
ತಾಲ್ಲೂಕಿನ ಕೂಗೋಡು, ಹೆಮ್ಮಿಗೆ, ಮೀನಗರಡಿ, ವಾಮನ ಸರಳು, ವಂದಗದ್ದೆ, ಮಲಂದೂರು, ಅವುಂಟು, ಶೀರ್ಲು, ದೋಣುರೂ, ತಾರೋಳ್ಳಿಕೊಡಿಗೆ, ಬೆಳಗೋಡುಕೊಡಿಗೆ, ಅಸನುಬಾಳು, ಕೋಟೆ, ಹಾರುಗೋಪ್ಪ, ಕಲಿಗೆ, ತಲವಂತಿಕೊಡಿಗೆ, ದೇವಾಲೆಕೊಪ್ಪದ ಗ್ರಾಮಗಳ ಜನರಿಗೆ ಕಾಲುಸಂಕಗಳೇ ದಿಕ್ಕು. ಬಹುತೇಕ ಕಾಲುಸಂಕಗಳು ದುಃಸ್ಥಿತಿಯಲ್ಲಿವೆ.

ಮೀನಗರಡಿ, ವಂದಗದ್ದೆ, ಹಾರುಗೋಪ್ಪದ ಕಾಲು ಸಂಕಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಮಕ್ಕಳು ಶಾಲೆಗೆ ತೆರಳು, ಜನರು ಆಸ್ಪತ್ರೆ, ಪಟ್ಟಣಕ್ಕೆ ಬರಲು ಕಾಲು ಸಂಕ ದಾಟಿ ಬರಬೇಕು.

ಗ್ರಾಮಸ್ಥರು ತಾವೇ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ಪಾಡು ಹೇಳತೀರದು. ಜನಪ್ರತಿನಿಧಿಗಳ ಭರವಸೆಗಳು ಮರೀಚಿಕೆಯಾಗಿ ಉಳಿದಿದೆ.

ಗ್ರಾಮಸ್ಥರು ಹಳ್ಳಗಳ ಅಸುಪಾಸಿನಲ್ಲಿರುವ ಮರಗಳಿಗೆ ಪ್ಲಾಸ್ಟಿಕ್ ಹಗ್ಗವನ್ನು ಕಟ್ಟಿ ಕಾಲುಸಂಕವನ್ನು ನಿರ್ಮಿಸಿಕೊಳ್ಳುತ್ತಾರೆ. ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯಲು ಪರದಾಡಬೇಕು.

ಬೇರೆ ದಾರಿ ಇಲ್ಲ
ಕಳಸ:
ತಾಲೂಕಿನಲ್ಲಿ ಹಲವು ಹಳ್ಳಗಳನ್ನು ದಾಟಲು ಜನರು ಅಪಾಯಕಾರಿ ಕಾಲು ಸಂಕ ಮತ್ತು ತೂಗುಸೇತುವೆ ಬಳಸುತ್ತಿದ್ದಾರೆ. ಈ ಪೈಕಿ ಹೆಚ್ಚಿನವು ಸಂಸೆ ಗ್ರಾಮದ ವ್ಯಾಪ್ತಿಯಲ್ಲಿ ಇವೆ.

ಗುಳ್ಯ ಗಿರಿಜನ ಕಾಲೊನಿ, ಕಾರ್ಲೆ ಗಿರಿಜನ ಕಾಲೊನಿ, ಮರ್ಕೊಡು ಪ್ರದೇಶದಲ್ಲಿ ಇರುವ ತೂಗುಸೇತುವೆ ಮತ್ತು ಕಾಲು ಸಂಕ ದುಃಸ್ಥಿತಿಯಲ್ಲಿವೆ. ಈ ಸಂಕಗಳನ್ನೇ ಬಳಸಿ ಶಾಲಾ ಮಕ್ಕಳು ಪ್ರತಿದಿನ ಶಾಲೆಗೆ ಹೋಗುತ್ತಾರೆ. ವೃದ್ಧರು, ಮಹಿಳೆಯರು, ಮಕ್ಕಳಿಗೂ ಇದೇ ಆಧಾರ. ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

9 ಕಡೆ ಕಿರುಸೇತುವೆ
ಎನ್‌.ಆರ್‌.ಪುರ:
ತಾಲ್ಲೂಕಿನ ಕಾನೂರು, ಆಡುವಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಹಳ್ಳಗಳನ್ನು ದಾಟಲು ಗ್ರಾಮಸ್ಥರು ಕಾಲು ಸಂಕ ಆಶ್ರಯಿಸಿದ್ದರು. ಕಾನೂನು ಪಂಚಾಯಿತಿ ವ್ಯಾಪ್ತಿಯ 9 ಕಡೆ ಕಿರುಸೇತುವೆಗಳನ್ನು ನಿರ್ಮಿಸಲಾಗಿದೆ.

ರಾಮನಹಡ್ಲು ವ್ಯಾಪ್ತಿಯಲ್ಲಿ ಹಳ್ಳ ದಾಟಲು ಕಾಲುಸಂಕಗಳೇ ದಿಕ್ಕಾಗಿವೆ. ಇಲ್ಲಿಯೂ ಸೇತುವೆಗಳು ಮಂಜೂರಾಗಿವೆ, ಕಾಮಗಾರಿ ಆರಂಭವಾಗಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಆಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕಾಲುಸಂಕ ಇದ್ದ ಕಡೆ ಸೇರುವೆ ನಿರ್ಮಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರವೀಣ್‌ ತಿಳಿಸಿದರು.

_______

ಪೂರಕ ಮಾಹಿತಿ: ಕೆ.ಎನ್‌.ರಾಘವೇಂದ್ರ, ರವಿ ಕೆಳಗಂಡಿ, ಕೆ.ವಿ.ನಾಗರಾಜ್‌, ರವಿಕುಮಾರ್‌ ಶೆಟ್ಟಿಹಡ್ಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT