ತಿಂಗಳಿಗೆ ಎರಡು ಜನಸಂಪರ್ಕ ಸಭೆ: ಅಹವಾಲು ಸ್ವೀಕಾರ, ಇತ್ಯರ್ಥಕ್ಕೆ ಜಿ.ಪಂ.ಹೆಜ್ಜೆ

7

ತಿಂಗಳಿಗೆ ಎರಡು ಜನಸಂಪರ್ಕ ಸಭೆ: ಅಹವಾಲು ಸ್ವೀಕಾರ, ಇತ್ಯರ್ಥಕ್ಕೆ ಜಿ.ಪಂ.ಹೆಜ್ಜೆ

Published:
Updated:
Deccan Herald

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲೆಯ ಎಲ್ಲ ತಾಲ್ಲೂಕಿನ ಹೋಬಳಿ ಮಟ್ಟದಲ್ಲಿ ತಿಂಗಳಿಗೆ ಎರಡು ಜನಸಂಪರ್ಕ ಸಭೆ ನಡೆಸಲಾಗುವುದು. ಸಮಸ್ಯೆಗಳನ್ನು ಆಲಿಸಿ, ಇತ್ಯರ್ಥಕ್ಕೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಆರ್‌.ಆನಂದಪ್ಪ ಇಲ್ಲಿ ಗುರುವಾರ ತಿಳಿಸಿದರು.

ತರೀಕೆರೆ ತಾಲ್ಲೂಕಿನ ಕಸಬಾ ಹೋಬಳಿಯ ದೋರನಾಳು ಗ್ರಾಮದಲ್ಲಿ ಇದೇ 18ರಂದು, ಕೊಪ್ಪ ತಾಲ್ಲೂಕಿನ ಮೇಗುಂದ ಹೋಬಳಿಯ ಜಯಪುರದಲ್ಲಿ 28ರಂದು ಸಭೆ ನಿಗದಿಯಾಗಿದೆ. ಬೆಳಿಗ್ಗೆ 10 ಗಂಟೆಗೆ ಸಭೆ ಆರಂಭವಾಗಲಿದೆ. ಜನಪ್ರತಿನಿಧಿಗಳು, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ, ಹೋಬಳಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಭಾಗವಹಿಸುವರು. ಸಾರ್ವಜನಿಕರು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ವ್ಯಾ‍ಪ್ತಿಗೆ ಒಳಪಡುವ ಅಹವಾಲುಗಳನ್ನು ಸಲ್ಲಿಸಬಹುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜನಸಂಪರ್ಕ ಸಭೆ ನಿಟ್ಟಿನಲ್ಲಿ ಒಬ್ಬರು ನೊಡೆಲ್‌ ಅಧಿಕಾರಿಯನ್ನು ನೇಮಿಸಲಾಗಿದೆ. ಅವರು ಅಹವಾಲುಗಳ ಪಟ್ಟಿಯನ್ನು ನಿರ್ವಹಿಸುವರು. ಪರಿಹಾರ ನಿಟ್ಟಿನಲ್ಲಿ ನಿಗಾವಹಿಸುವರು . ಪ್ರತಿ ತಿಂಗಳು ಬಯಲು ಸೀಮೆ ಮತ್ತು ಮಲೆನಾಡು ಭಾಗದಲ್ಲಿ ತಲಾ ಒಂದು ಸಭೆ ನಡೆಸಲಾಗುವುದು. ತಿಂಗಳ ಮೊದಲ ಮತ್ತು ಕೊನೆ ವಾರ ಸಭೆ ನಡೆಯಲಿದೆ ಎಂದು ಹೇಳಿದರು.

ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲ್ಲೂಕುಗಳಲ್ಲಿ ನೀರು ಪೂರೈಸಿರುವ ಟ್ಯಾಂಕರ್‌ ಬಾಕಿ ಪಾವತಿ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಗಮನ ಸೆಳೆಯಲಾಗಿದೆ. ಗ್ರಾಮ ಪಂಚಾಯಿತಿಯವರು 14ನೇ ಹಣಕಾಸು ಆಯೋಗ ಅನುದಾನದಲ್ಲಿ ಶೇ 20ರಷ್ಟು ಬಾಕಿ ಪಾವತಿಗೆ ಬಳಸಬೇಕು, ಉಳಿಕೆ ಮೊತ್ತವನ್ನು ಜಿಲ್ಲಾಡಳಿತದ ವತಿಯಿಂದ ಪಾವತಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅತಿವೃಷ್ಟಿ ಪರಿಹಾರ ನಿಟ್ಟಿನಲ್ಲಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಈಗ ಜಿಲ್ಲೆಗೆ ₹ 25 ಕೋಟಿ ಮಂಜೂರಾಗಿದೆ ಎಂದು ಆನಂದಪ್ಪ ತಿಳಿಸಿದರು.

‘ಇ–ಆಫೀಸ್‌’ ಆರಂಭಕ್ಕೆ ಸಿದ್ಧತೆ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿ, ಜಿಲ್ಲಾ ಪಂಚಾಯಿತಿಯ ಎಲ್ಲ ಕಚೇರಿಗಳಲ್ಲಿ ನವೆಂಬರ್‌ 1ರಿಂದ ‘ಇ–ಆಫೀಸ್‌’ (ಲೆಸ್‌ ಪೇಪರ್‌) ಶುರು ಮಾಡಲು ಉದ್ದೇಶಿಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇಎಂಡಿ (ಎಂಪ್ಲಾಯಿಸ್‌ ಮಾಸ್ಟರ್‌ ಡಾಟಾ) ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

‘11 ಸಾವಿರ ಕಡತಗಳ (19 ಲಕ್ಷ ಪುಟಗಳು) ಸ್ಕ್ಯಾನಿಂಗ್‌ ಪ್ರಕ್ರಿಯೆ ಮುಗಿದಿದೆ. ಇ–ಆಫೀಸ್‌’ ಅನುಷ್ಟಾನದಿಂದ ಕಡತಗಳ ಶೀಘ್ರ ವಿಲೇವಾರಿಗೆ ಅನುಕೂಲವಾಗಲಿದೆ. ಕಡತಗಳ ಅಪ್‌ಡೇಟ್‌, ವ್ಯವಸ್ಥಿತ ಮತ್ತು ಪಾರದರ್ಶಕ ನಿರ್ವಹಣೆ ಸಹಕಾರಿಯಾಗಲಿದೆ. ಅಕ್ರಮಗಳಿಗೆ ಕಡಿವಾಣ ಬೀಳುತ್ತದೆ. ತಾಂತ್ರಿಕ ಸಮಸ್ಯೆ, ತೊಡಕುಗಳು ಉಂಟಾಗದಂತೆ ಎಚ್ಚರ ವಹಿಸಲಾಗುವುದು ಎಂದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಕ್ರಮ ವಹಿಸಲಾಗಿದೆ. ಖಾತರಿ ಶ್ರೇಯಾಂಕ ಪಟ್ಟಿಯಲ್ಲಿ ಕಳೆದ ನವೆಂಬರ್‌ನಲ್ಲಿ ಜಿಲ್ಲೆಯು ರಾಜ್ಯದಲ್ಲಿ 27ನೇ ಸ್ಥಾನದಲ್ಲಿ ಇತ್ತು. ಮಾರ್ಚ್‌ ಅಂತ್ಯಕ್ಕೆ 16 ಸ್ಥಾನ ಲಭಿಸಿದೆ ಎಂದು ತಿಳಿಸಿದರು.

ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 36 ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಜಲಸಂರಕ್ಷಣೆ ಮತ್ತು ಅಂತರ್ಜಲಮಟ್ಟ ಸುಧಾರಣೆ ನಿಟ್ಟಿನಲ್ಲಿ ಗಮನಹರಿಸಲಾಗಿದೆ. ಜಿಲ್ಲೆಯಲ್ಲಿ 82 ಶಾಲೆ ಕಾಂ‍ಪೌಂಡುಗಳು, 53 ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ ಶುರು ಮಾಡಲಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿ ವೇತನ ಪಾವತಿ ನಿಟ್ಟಿನಲ್ಲಿ ಸರ್ಕಾರವು ಸ್ಟೂಡೆಂಟ್‌ ಸ್ಕಾಲರ್‌ಶಿ‍ಪ್‌ ಪೋರ್ಟ್‌ಲ್‌ (ಎಸ್‌ಎಸ್‌ಪಿ )ಕಾರ್ಯಗತಗೊಳಿಸಿದೆ. ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಲು ಇಸಿಇಗೆ ಆಧಾರ್‌ ಸಂಖ್ಯೆ, ಅಗತ್ಯ ಮಾಹಿತಿ ಅಪ್‌ಲೋಡ್‌ ಮಾಡಲು ವ್ಯವಸ್ಥೆ ಮಾಡಲಾಗಿದೆ. ವಿವಿಧ ಇಲಾಖೆಗಳಿಂದ ನೀಡುವ ವಿದ್ಯಾರ್ಥಿವೇತನಗಳು ಈ ಹೊಸ ವ್ಯವಸ್ಥೆಯಡಿ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಪಾವತಿಯಾಗಲಿದೆ ಎಂದು ತಿಳಿಸಿದರು.

ಬಾಳೆಹಳ್ಳಿ, ಕಡೂರಹಳ್ಳಿ ಇತರೆಡೆಗಳಲ್ಲಿ ಶುದ್ಧಗಂಗಾ ಕುಡಿಯುವ ನೀರಿನ ಘಟಕಗಳ ಸಮಸ್ಯೆ ಇದೆ. ಏಜೆನ್ಸಿಗಳವರು ಸರಿಯಾಗಿ ನಿರ್ವಹಣೆ ಮಾಡದಿರುವುದು ತೊಡಕಾಗಿ ಪರಿಣಮಿಸಿದೆ. ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಕರ್ತಿಕೆರೆ ಗ್ರಾಮ ಪಂಚಾಯಿತಿ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವುದಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಪ್ರತಿಕ್ರಿಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !