ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಜಿಡಿ ಅವಾಂತರ: ಜನರ ಸಂಕಟ

ಕೊಳಚೆ ನೀರು ಹರಿಯಲು ಪೈಪ್‍ಲೈನ್ ಅಳವಡಿಸಿಲ್ಲ
Last Updated 11 ಮೇ 2020, 17:34 IST
ಅಕ್ಷರ ಗಾತ್ರ

ಬೀರೂರು: ಪಟ್ಟಣದ ಪೋಸ್ಟ್‌ ಆಫೀಸ್ ರಸ್ತೆಯಲ್ಲಿ ಯುಜಿಡಿ (ಒಳಚರಂಡಿ ಮಾರ್ಗ) ನಿರ್ಮಾಣದ ಸಂದರ್ಭದಲ್ಲಿ ಗುತ್ತಿಗೆದಾರರು ಮಾಡಿದ ತಪ್ಪಿನಿಂದಾಗಿ ನಿವಾಸಿಗಳು ಸಂಪರ್ಕ ಪಡೆದೂ ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಯುಜಿಡಿ ಕಾಮಗಾರಿಯ ಗುತ್ತಿಗೆದಾರರು ಇಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಸಮಯದಲ್ಲಿ ಕೇವಲ ಆಳುಗುಂಡಿ ನಿರ್ಮಿಸಿ ಅದರ ಮೂಲಕ ಕೊಳಚೆನೀರು ಹರಿದು ಹೋಗಲು ಪೈಪ್‍ಲೈನ್ ಅಳವಡಿಸದ ಕಾರಣ ಮನೆಗಳ ಒಳಗೆ ಮತ್ತು ಹಿತ್ತಲಿನಲ್ಲಿ ನೀರು ಪದೇ ಪದೇ ಉಕ್ಕುತ್ತಿತ್ತು. ಈ ಕಾರಣದಿಂದ ನಿವಾಸಿಗಳು ಪುರಸಭೆಗೆ ಪದೇ ಪದೇ ದೂರುವಂತಾಗುತ್ತಿತ್ತು. ಇತ್ತೀಚೆಗೆ ಸುರಿದ ಸಣ್ಣಮಳೆಗೂ ಮನೆಗಳ ಒಳಗೆ ನೀರು ನುಗ್ಗಿ, ಬೇಸತ್ತ ನಾಗರಿಕರು ಪುರಸಭೆಯ ಜೆಸಿಬಿ ಯಂತ್ರ ತರಿಸಿ ಮ್ಯಾನ್‍ಹೋಲ್ ತೆರೆಸಿ ನೋಡಿದರೆ ಗುಂಡಿ ತುಂಬಿದೆ, ಕೊಳಚೆ ಹರಿಯಲು ಪೈಪ್ ಇಲ್ಲ!.

ಅದಕ್ಕೂ ಮೊದಲು ಪುರಸಭೆಯ ಮನವಿ ಮೇರೆಗೆ ಸುಮಾರು ₹ 6ಸಾವಿರ ಖರ್ಚು ಮಾಡಿ ಕೆಲವರು ಯುಜಿಡಿ ಸಂಪರ್ಕವನ್ನೂ ಪಡೆದಿದ್ದರು. ಸಂಪರ್ಕ ಕಲ್ಪಿಸುವವರು ಮನೆಗಳಿಂದ ಇಳಿಗುಂಡಿಗೆ ಪೈಪ್‍ಲೈನ್ ಅಳವಡಿಸಿಕೊಟ್ಟಿದ್ದರು. ಹಾಗೆ ನೋಡಿದರೆ ಸರಾಗವಾಗಿ ಹರಿದುಹೋಗಬೇಕಿದ್ದ ಕೊಳಚೆ ನೀರು ಮತ್ತೆ ಮನೆಗಳ ಒಳಗೇ ವಾಪಸ್ ಬರಲು ಶುರುವಾದಾಗ ಈ ಅವಾಂತರ ಬೆಳಕಿಗೆ ಬಂದಿದೆ.

‘ನಾವು ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕನೆಕ್ಷನ್ ಪಡೆದಿದ್ದೆವು, ಕೆಲವೇ ದಿನಗಳಲ್ಲಿ ಮನೆಯ ಒಳಗೆ ಗಲೀಜು ವಾಪಸ್ ಬರಲು ಆರಂಭವಾಗಿತ್ತು, ಇತ್ತೀಚೆಗೆ ನಮ್ಮ ಮನೆಯ ಹಿತ್ತಿಲು ಅಲ್ಲದೆ ಪಕ್ಕದ ಮನೆಯ ಒಳಗೂ ಕೊಳಚೆ ಹೋಗುತ್ತಿದ್ದ ಕಾರಣ ಪುರಸಭೆಯವರನ್ನು ಕರೆಸಿ, ಅಗೆಸಿ ನೋಡಿದರೆ ಇಲ್ಲಿ ಕೇವಲ ಮ್ಯಾನ್‍ಹೋಲ್ ಇದೆ. ಮುಂದೆ ಹರಿಯಲು ಪೈಪ್‍ಲೈನ್ ಅಳವಡಿಸಿಲ್ಲ. ಅನಿವಾರ್ಯವಾಗಿ ಮತ್ತೆ ಹೊಸ ಲೈನ್ ಅಳವಡಿಸಲು ಸುಮಾರು ₹ 20ಸಾವಿರ ಖರ್ಚು ಮಾಡಬೇಕಾಯಿತು. ಇನ್ನೂ ಎಲ್ಲೆಲ್ಲಿ ಈ ಅವಾಂತರವಾಗಿದೆಯೋ ಗೊತ್ತಿಲ್ಲ, ಸಣ್ಣ ರಸ್ತೆಗಳಲ್ಲಿ ಕೇವಲ ಇಳಿಗುಂಡಿ ನಿರ್ಮಿಸಿ ಹೋಗಿದ್ದರೆ ಯಾರಿಗೂ ಗೊತ್ತಾಗುವುದೂ ಇಲ್ಲ, ನಮ್ಮ ತೆರಿಗೆ ಹಣ ಬಳಸಿ ಮಾಡಿದ ಯೋಜನೆಯಲ್ಲಿ ಈ ರೀತಿ ಅವಾಂತರ ಮಾಡಿದವರಿಗೆ ತಕ್ಕ ಶಿಕ್ಷೆಯನ್ನು ಸರ್ಕಾರ ನೀಡಲೇ ಬೇಕು’ ಎಂದು ಭರತ್ ಬಾಂಗ್ರೆ ಆಗ್ರಹಿಸಿದರು.

ಒಟ್ಟಿನಲ್ಲಿ ಜನರ ತೆರಿಗೆ ಹಣ ಬಳಸಿ ಜಾರಿಗೊಳಿಸಲಾದ ಯೋಜನೆ ವೈಫಲ್ಯದ ಸುಳಿಯಲ್ಲಿದ್ದು, ಸಂಪರ್ಕ ಪಡೆದವರ ಸ್ಥಿತಿ ಅಯೋಮಯವಾಗಿದೆ. ಯೋಜನೆ ಪೂರ್ಣ ಅನುಷ್ಠಾನಕ್ಕೆ ಬಂದರೆ ಇನ್ನೂ ಏನೇನು ದುಸ್ಥಿತಿ ಒದಗಿಬರಲಿದೆಯೋ ಎಂಬ ಆತಂಕ ಸ್ಥಳೀಯರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT