ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮೀಜಿಗಳಿಗೂ ಹಿಡಿದ ಚುನಾವಣೆ ಹುಚ್ಚು

ಆಂಜನೇಯ ಸ್ವಾಮಿ ದೇಗುಲ ಉದ್ಘಾಟನೆ ಸಮಾರಂಭದಲ್ಲಿ ತರಳಬಾಳು ಶ್ರೀ ವಿಷಾದ
Last Updated 29 ಏಪ್ರಿಲ್ 2018, 10:15 IST
ಅಕ್ಷರ ಗಾತ್ರ

ಹರಪನಹಳ್ಳಿ: ಪ್ರಸ್ತುತ ಕಾಲಘಟ್ಟದಲ್ಲಿ ಸ್ವಾಮೀಜಿಗಳು ಸೇರಿದಂತೆ ಎಲ್ಲರಿಗೂ ಚುನಾವಣೆ ಹುಚ್ಚು ಆವರಿಸಿಕೊಂಡಿದೆ. ಸಮಾಜದಲ್ಲಿ ಸ್ವಾಮೀಜಿಗಳಿಗೆ ಅತ್ಯಂತ ಗೌರವ ಸ್ಥಾನವಿದೆ. ಸ್ವಾಮೀಜಿಗಳು ಒಂದು ಪಕ್ಷಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳಬಾರದು’ ಎಂದು ಸಿರಿಗೆರೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹುಣಸಿಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಆಂಜನೇಯ ಸ್ವಾಮಿ ನೂತನ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಗೋಪುರದ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಭ್ರಷ್ಟಾಚಾರ ಮನುಷ್ಯನ ಜೀವನದಲ್ಲೇ ಸೇರಿಕೊಂಡಿದೆ. ಇಂತಹ ಸಂದರ್ಭದಲ್ಲಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ತೀಡುವ ಕೆಲಸವನ್ನು ಸ್ವಾಮೀಜಿಗಳು ಮಾಡಬೇಕಿದೆ. ಮಾರ್ಗದರ್ಶನ ಮಾಡಬೇಕಾದವರೇ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರೆ ಸಮಾಜ ತಿದ್ದುವ ಕೆಲಸ ಯಾರು ಮಾಡಬೇಕು ಎಂದು ಪ್ರಶ್ನಿಸಿದರು.

ಬೇಕಿರುವುದು ಮನಶಾಂತಿ. ಕಷ್ಟಗಳನ್ನು ಕೊಡಬೇಡ ಭಗವಂತ ಎಂದು ದೇವರನ್ನು ಬೇಡುವ ಬದಲು ಕಷ್ಟಗಳನ್ನು ಎದುರಿಸುವ ಶಕ್ತಿ ಕೊಡು ಎಂದು ಪ್ರಾರ್ಥಿಸಬೇಕು. ಕಷ್ಟಗಳನ್ನು ಪರಿಶ್ರಮದಿಂದ ಎದುರುಗೊಂಡಾಗ ನಿಜವಾದ ಸವಾಲುಗಳನ್ನು ಎದುರಿಸಲು ಸಾಧ್ಯ. ನೀತಿ ಸಂಹಿತೆ ಚುನಾವಣೆ ಸಂದರ್ಭದ ನಿಯಮವಾಗಬಾರದು. ಇದು ನೀತಿ ಪ್ರಜ್ಞೆಯಾಗಿ ನಮ್ಮ ಜೀವನದುದ್ದಕ್ಕೂ ಇರಬೇಕು ಎಂದು ಹಳಿದರು.

‘ಗ್ರಾಮೀಣ ಪ್ರದೇಶದಲ್ಲಿ ಜನಪದೀಯ ಸೊಗಡು’ ವಿಷಯ ಕುರಿತು ಮಾತನಾಡಿದ ಗೋಟಗೋಡಿ ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಶ್ರೀಶೈಲ ಹುದ್ದಾರ, ‘ಪೂರ್ವಜರ ಜ್ಞಾನದ ಸಂಕೇತವಾದ ಜಾನಪದ ಸಂಸ್ಕೃತಿಯನ್ನು ಸಮಾಜಕ್ಕೆ ಪುನರಾವರ್ತಿಸಬೇಕಿದೆ. ಶಹರ, ಪಟ್ಟಣದಂತಹ ಪ್ರದೇಶಗಳಲ್ಲಿ ಗ್ರಾಮೀಣ ಬದುಕು ಕಾಣುವುದು ತುಂಬ ವಿರಳ. ನಮ್ಮ ಪೂರ್ವಜರು ಬಳುವಳಿಯಾಗಿ ನೀಡಿದ ಆಚರಣೆಗಳು ಕಣ್ಮರೆಯಾಗುತ್ತಿವೆ. ಜನಪದ ಕಲೆಗಳಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ’ ಎಂದರು.

‘ಅನುಭವ ವಾಣಿ’ ಕುರಿತು ಉಪನ್ಯಾಸ ನೀಡಿದ ಚಂದ್ರಶೇಖರಪ್ಪ, ‘ಭೂಮಿಯ ಮೇಲೆ ಜಲ ಕಡಿಮೆ ಆಗುತ್ತಿದ್ದರೂ ಭಕ್ತಿಯ ಜಲ ಬತ್ತಿಲ್ಲ. ಜಗತ್ತು ಚಿಂತೆಯ ಸಂತೆ. ಎಲ್ಲದರ ಬಗ್ಗೆ ನಾವು ಚಿಂತೆ ಮಾಡುತ್ತೇವೆ. ಆದರೆ, ಎಲ್ಲವನ್ನೂ ನೀಡಿದ ದೇವರ ಬಗ್ಗೆ ನಾವು ಚಿಂತಿಸುವುದಿಲ್ಲ. ಚಿಂತೆಯಿಂದ ಚಿಂತನೆಯತ್ತ ನಮ್ಮ ಮನಸ್ಸು ಕೇಂದ್ರಿಕೃತವಾಗಬೇಕಾದರೆ ವಚನ ಸಾಹಿತ್ಯವನ್ನು ನಾವು ಅಭ್ಯಸಿಸಬೇಕಿದೆ’ ಎಂದು ಹೇಳಿದರು.

ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಎಚ್.ಕೆ. ಮಹೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಗೌರವಾಧ್ಯಕ್ಷ ಬಿ. ಮೊಗಪ್ಪ, ಶಾಸಕ ಎಂ.ಪಿ. ರವೀಂದ್ರ, ಜೆಡಿಎಸ್ ಮುಖಂಡ ಅರಸೀಕೆರೆ ಎನ್. ಕೊಟ್ರೇಶ್, ನಂದಿಹಳ್ಳಿ ಹಾಲಪ್ಪ, ಡಿ. ಮಂಜುನಾಥ್, ಕೆ. ಚನ್ನಬಸವಗೌಡ್ರ, ಎಚ್.ಎನ್. ಬಸವಗೌಡ್ರು, ಬಿ.ಕೆ. ಪ್ರಕಾಶ್, ಜಿ. ನಂಜನಗೌಡ್ರು, ಪಿ. ಮಹಾಬಳೇಶ ಗೌಡ್ರು, ಎಂ. ಪ್ರಕಾಶ್ ಹುಣಸಿಹಳ್ಳಿ, ಶಶಿಕಲಾ ಶಾಂತಕುಮಾರ್, ಎಚ್.ಕೆ. ಸಂತೋಷ್, ಉಚ್ಚಂಗಿದುರ್ಗದ ಕೆಂಚನಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT