ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕುಚಿತ ಭಾವ ತೊರೆಯಿರಿ, ಸೌಹಾರ್ದ ಮೆರೆಯಿರಿ: ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್‌

ಗಣರಾಜ್ಯೋತ್ಸವ
Last Updated 26 ಜನವರಿ 2019, 13:09 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಾತಿ, ಭಾಷೆ, ಪಂಗಡ ಸಂಕುಚಿತ ಭಾವನೆ ತೊರೆದು ಸ್ನೇಹ–ಸೌಹಾರ್ದ ವಾತಾವರಣ ನಿರ್ಮಿಸಿ ದೇಶದ ಒಗ್ಗಟ್ಟು, ಐಕ್ಯತೆ ಕಾಪಾಡಲು ಒಟ್ಟಾಗಿ ಎಲ್ಲರು ಶ್ರಮಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.

ನೇತಾಜಿ ಸುಭಾಷ್‌ ಚಂದ್ರಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಗಣರಾಜ್ಯೋತ್ಸವದ ಆಶಯಗಳು ಫಲ ನೀಡಿವೆಯೇ ಎಂದು ಯೋಚಿಸುವುದು ಅಗತ್ಯ. ಒಗ್ಗಟ್ಟಿನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರೂ, ಇಂದಿಗೂ ರಾಜ್ಯರಾಜ್ಯಗಳ ನಡುವೆ ಅನೇಕ ಕಲಹಗಳು ಹಾಗೆಯೇ ಉಳಿದಿದೆ. ಅದು ಗಡಿ ವಿವಾದ ಇರಬಹುದು, ಜಲ ವಿವಾದ ಇರಬಹುದು. ಇವೆಲ್ಲವನ್ನೂ ಮೆಟ್ಟಿ ನಿಲ್ಲುವ ಶಕ್ತಿ ಭಾರತಕ್ಕಿದೆ. ಎಲ್ಲ ಧರ್ಮಗಳನ್ನು ಗೌರವಿಸಿ ಕೋಮುಗಲಭೆಗಳಿಗೆ ಅವಕಾಶ ನೀಡದೆ ಸರ್ವಧರ್ಮ ಸಮನ್ವಯ ಭಾವ ಬೆಳೆಸಿಕೊಂಡು ಹೋಗುವ ಪಣ ತೊಡಬೇಕಿದೆ ಎಂದರು.

ಜಲಧಾರೆ ಯೋಜನೆಯಡಿ ತರೀಕೆರೆ, ಕಡೂರು ಮತ್ತು ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಮತ್ತು ಸಖರಾಯಪಟ್ಟಣ ಹೋಬಳಿ ಗುರುತಿಸಿ ₹380 ಕೋಟಿ ಅಂದಾಜು ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಮಂಜೂರಾತಿಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಕುಡಿಯುವ ನೀರು ನಿರ್ವಹಣೆಗೆ ಕಡೂರು ತಾಲ್ಲೂಕಿಗೆ₹ 50ಲಕ್ಷ ಹಾಗೂ ಉಳಿದ ತಾಲ್ಲೂಕುಗಳಿಗೆ ತಲಾ ₹ 25ಲಕ್ಷ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮಾರ್ಚ್ ಅಂತ್ಯಕ್ಕೆ ಎರಡು ಕಾಮಗಾರಿ ಮುಗಿಸಲು ಕ್ರಮ ವಹಿಸಲಾಗಿದೆ ಎಂದರು.

ತೆಂಗು ಬೆಳೆಗಾರರ ಹಿತರಕ್ಷಣೆಗೆ ಸರ್ಕಾರ ₹190 ಕೋಟಿ ರೂಪಾಯಿ ಮೊತ್ತದ ವಿಶೇಷ ಯೋಜನೆ ರೂಪಿಸಿದೆ. ಒಣಗಿರುವ ತೆಂಗಿನ ತೋಟಗಳಲ್ಲಿ ಹೊಸ ಗಿಡಗಳನ್ನು ನೆಟ್ಟು ಅವು ಫಲಕ್ಕೆ ಬರುವವರೆಗೆ ಪರ್ಯಾಯ ಬೆಳೆ ಬೆಳೆಯಲು ರೈತರನ್ನು ಪ್ರೋತ್ಸಾಹಿಸಲು ಸರ್ಕಾರ ಮುಂದಾಗಿದೆ ಎಂದರು.

ಪಶುಭಾಗ್ಯ ಯೋಜನೆಯಡಿ ನಿರುದ್ಯೋಗಿ ಯುವಜನರಿಗೆ ಮಾಂಸದ ಕುಕ್ಕುಟ ಕ್ಷೇತ್ರಗಳಲ್ಲಿ ರಾಜ್ಯವಲಯ, ರಾಷ್ಟ್ರೀಯ ಕೃಷಿವಿಕಾಸ ಯೋಜನೆಯಡಿ ಸಹಾಯಧನ ಯೋಜನೆ ಜಾರಿಗೊಳಿಸಲಾಗಿದೆ. ಕುರಿಗಾರರ ಆದಾಯ ಹೆಚ್ಚಳಕ್ಕೆ ನಾರಿ ಸುವರ್ಣ ಯೋಜನೆ ಜಾರಿಗೊಳಿಲಾಗಿದೆ ಎಂದರು

ಬೀದಿಬದಿ ವ್ಯಾಪಾರಿಗಳು, ಸಣ್ಣ ವರ್ತಕರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸಲು ಬಡವರ ಬಂಧು ಯೋಜನೆ ಜಾರಿಗೊಳಿಸಲಾಗಿದೆ. ಕರಾವಳಿ, ಮಲೆನಾಡು ಪ್ರದೇಶಗಳ ವಿದ್ಯಾರ್ಥಿಗಳಿಗಾಗಿ ಶಾಲಾ ಸಂಪರ್ಕ ಸೇತು ಹೆಸರಿನ ಶಾಶ್ವತ ಯೋಜನೆ ರೂಪಿಸಲಾಗಿದೆ. ಬಿಪಿಎಲ್ ಕುಟುಂಬಕ್ಕೆ ವಾರ್ಷಿಕ ₹ 5 ಲಕ್ಷ ಹಾಗೂ ಎಪಿಎಲ್ ಕುಟುಂಬಕ್ಕೆ ₹1.5 ಲಕ್ಷದವರೆಗೆ ಚಿಕಿತ್ಸೆ ವೆಚ್ಚ ಭರಿಸುವ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಶಾಸಕ ಸಿ.ಟಿ.ರವಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ, ಸದಸ್ಯ ಎಸ್‌.ಎಲ್‌.ಭೋಜೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯಣ್ಣ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಲ್ಲಾ ಪಂಚಾಯಿತಿ ಸಿಇಒ ಸಿ.ಸತ್ಯಭಾಮಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ಪಾಂಡೆ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರುತಿ, ನಗರಸಭೆ ಆಯುಕ್ತರಾದ ಎಂ.ವಿ.ತುಷಾರಮಣಿ ಜಿಲ್ಲಾ ಪಂಚಾಯಿತಿ ಸಾಮಾಜಿಕನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ಹಿರಿಗಯ್ಯ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತಾ ಅನಿಲ್‌ಕುಮಾರ್‌ ಇದ್ದರು.

ಕವಾಯತು: ಬಹುಮಾನ ಪಡೆದವರು

ಎನ್‌ಸಿಸಿ ವಿಭಾಗದಿಂದ ಐಡಿಎಸ್‌ಜಿ ಕಾಲೇಜು, ಸ್ಕೌಟ್ಸ್–ಗೈಡ್‌ ವಿಭಾಗದಿಂದ ಉಪ್ಪಳ್ಳಿಯ ಮಾಡೆಲ್ ಆಂಗ್ಲ ಪ್ರೌಢಶಾಲೆ , ಸೇವಾದಳ ವಿಭಾಗದಿಂದ ಬಸವನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆ, ಶಾಲಾ ತಂಡದ ವಿಭಾಗದಿಂದ ಕದ್ರಿಮಿದ್ರಿಯ ಕುವೆಂಪು ವಿದ್ಯಾನಿಕೇತನ ಪ್ರೌಢಶಾಲೆ ಹಾಗೂ ಕೆಂಪನಹಳ್ಳಿಯ ಆಶಾಕಿರಣ ಅಂಧ ಮಕ್ಕಳ ಶಾಲೆಗೆ ವಿಶೇಷ ಬಹುಮಾನ ನೀಡಲಾಯಿತು.

ಜಿಲ್ಲಾಮಟ್ಟದ ಸೈಕಲ್ ಸ್ಪರ್ಧೆ ವಿಜೇತರು

ಬಾಲಕರ ವಿಭಾಗ: ಡಾ.ಕೌಶಿಕ್– ಪ್ರಥಮ, ಸುಮಂತ್ ದ್ವಿತೀಯ, ನಂದನ್– ತೃತೀಯ ಬಹುಮಾನ ನೀಡಲಾಯಿತು.

ಬಾಲಕಿಯರ ವಿಭಾಗ: ಗ್ಲಾನಿಯ ಪ್ರಿಶಲ್ ಪ್ರೇರಿಸ್ –ಪ್ರಥಮ, ತೀರ್ಥಶ್ರೀ–ದ್ವಿತೀಯ, ಅಂಜನಾ ವೈ.ಟಿ– ತೃತೀಯ ಬಹುಮಾನ ನೀಡಲಾಯಿತು.

ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ

ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತ ಕೆ.ಜಿ. ಜಾನ್ಸನ್, ಆಯುಷ್ ಅಧಿಕಾರಿ ಡಾ.ಎಸ್‌.ಚಂದ್ರಕಾಂತ್, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಾಂತಿಪ್ರಿಯ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಎಂ.ಎಸ್.ಗುರುದತ್ , ಕಂದಾಯ ಇಲಾಖೆಯ ಉಪತಹಶೀಲ್ದಾರ್ ಕೆ.ಎಸ್.ಸುಜಾತಾ ಹಾಗೂ ಜಿಲ್ಲಾ ವಿಮಾ ಇಲಾಖೆ ಪ್ರಥಮದರ್ಜೆ ಸಹಾಯಕ ಜಿ.ಕೆ.ಬಸವರಾಜಪ್ಪ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT