’ಕೃಷಿ ಉತ್ಪನ್ನಗಳಿಗೆ ದೇಶದಲ್ಲಿ ಏಕರೂಪ ದರ ನಿಗದಿಗೆ ಕೇಂದ್ರಕ್ಕೆ ಮೊರೆ‘

7

’ಕೃಷಿ ಉತ್ಪನ್ನಗಳಿಗೆ ದೇಶದಲ್ಲಿ ಏಕರೂಪ ದರ ನಿಗದಿಗೆ ಕೇಂದ್ರಕ್ಕೆ ಮೊರೆ‘

Published:
Updated:
Deccan Herald

ಚಿಕ್ಕಮಗಳೂರು: ಕೃಷಿ ಉತ್ಪನ್ನಗಳಿಗೆ ದೇಶದ ಎಲ್ಲ ರಾಜ್ಯಗಳಲ್ಲಿ ಏಕರೂಪ ದರ ನಿಗದಿಪಡಿಸಬೇಕು, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕುಗಳಿಗೆ (ಡಿಸಿಸಿಬಿ) ನಬಾರ್ಡ್‌ನಿಂದ ಶೇ 75 ಮರುಹಣಕಾಸು ಸೌಲಭ್ಯ ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜೆಡಿಎಸ್‌ ವರಿಷ್ಠ, ಸಂಸದ ಎಚ್‌.ಡಿ.ದೇವೇಗೌಡ ನೇತೃತ್ವದಲ್ಲಿ ನಿಯೋಗ ತೆರಳಿ ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಲಾಗುವುದು. ಉಪಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ‌ ನವದೆಹಲಿಗೆ ನಿಯೋಗ ಒಯ್ಯಲಾಗುವುದು’ ಎಂದು ಪ್ರತಿಕ್ರಿಯಿಸಿದರು.

‘ಕೇಂದ್ರ ಸರ್ಕಾರವು ಕೃಷಿಯ 13 ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸಿರುವುದು ಒಳ್ಳೆಯ ಬೆಳವಣಿಗೆ. ದೇಶದ ಎಲ್ಲ ರಾಜ್ಯಗಳಲ್ಲೂ ಕೃಷಿ ಉತ್ಪನ್ನಗಳಿಗೆ ಒಂದೇ ಬೆಲೆ ನಿಗದಿಪಡಿಸಲು ಕ್ರಮ ಕೈಗೊಂಡರೆ ರೈತರಿಗೆ ಅನುಕೂಲವಾಗುತ್ತದೆ. ಉದಾಹರಣೆಗೆ ಮಹಾರಾಷ್ಟ್ರದಲ್ಲಿ ತೊಗರಿ ಕ್ವಿಂಟಲ್‌ಗೆ ₹ 6,000 ಇದ್ದರೆ, ಕರ್ನಾಟಕ, ಇತರ ರಾಜ್ಯಗಳಲ್ಲಿಯೂ ಅಷ್ಟೇ ಇರಬೇಕು. ಬೆಲೆ ಏರುಪೇರಿನಿಂದ ರೈತರು ಜಂಜಾಟಕ್ಕೆ ಸಿಲುಕುವುದು ತಪ್ಪುತ್ತದೆ’ ಎಂದು ವಿಶ್ಲೇಷಿಸಿದರು.

‘ಪ್ರತಿ ಐದು ಕಿಲೋ ಮೀಟರ್‌ಗೆ ಒಂದು ಗೋದಾಮು ನಿರ್ಮಿಸಿದರೆ ರೈತರು ಬೆಳೆದ ಉತ್ಪನ್ನಗಳನ್ನು ಸಂಗ್ರಹಿಸಲು ಅನುಕೂಲವಾಗುತ್ತದೆ. ರೈತ ಗೋದಾಮಿನಲ್ಲಿ ಇಟ್ಟಿರುವ ಉತ್ಪನ್ನಕ್ಕೆ ಸಾಲ ನೀಡಬೇಕು. ಆತ ಇಟ್ಟಿರುವ ಉತ್ಪನ್ನದ ಪ್ರಮಾಣ ಆಧರಿಸಿ ಶೇ 75 ಸಾಲ (ಉತ್ಪನ್ನದ ಕನಿಷ್ಠ ಬೆಂಬಲ ಬೆಲೆ ಆಧಾರ) ಸಾಲ ಒದಗಿಸಬೇಕು. ಈ ಸಾಲಕ್ಕೆ ಆರು ತಿಂಗಳವರೆಗೆ ಬಡ್ಡಿ ವಿಧಿಸಬಾರದು. ಇಂಥ ವ್ಯವಸ್ಥೆ ಇದ್ದರೆ ರೈತರಿಗೆ ಅನುಕೂಲವಾಗುತ್ತದೆ. ಮೂಲಸೌಕರ್ಯ, ಹಣಕಾಸು ಸಂರಚನೆ ಎಲ್ಲವನ್ನೂ ವ್ಯವಸ್ಥಿತವಾಗಿ ರೂಪಿಸಿದರೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕು (ನಬಾರ್ಡ್‌) ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕುಗಳಿಗೆ ಶೇ 40 ಮರುಹಣಕಾಸು ಒದಗಿಸುತ್ತದೆ. ಮರುಹಣಕಾಸು ಪ್ರಮಾಣ ಶೇ 75 ಇದ್ದರೆ, ಈ ಬ್ಯಾಂಕುಗಳ ವಹಿವಾಟು ಮತ್ತು ರೈತರಿಗೆ ಸಾಲ ಸೌಲಭ್ಯ ಒದಗಿಸಲು ಸಹಕಾರಿಯಾಗುತ್ತದೆ’ ಎಂದರು.

‘ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಪ್ರಾಂಗಣದಲ್ಲಿ ದಲ್ಲಾಳಿಗಳು ರೈತರಿಂದ ಕಮಿಷನ್‌ ಪಡೆಯಲು ಅವಕಾಶ ಇಲ್ಲ. ರೈತರಿಂದ ತರಕಾರಿ, ಇತರ ಉತ್ಪನ್ನಗಳಿಗೆ ದಲ್ಲಾಳಿಗಳು ಕಮಿಷನ್‌ ವಸೂಲಿ ಮಾಡಿದರೆ ಕ್ರಮ ಜರುಗಿಸಬೇಕು. ಈ ಬಗ್ಗೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೈತರು ಇಚ್ಛಿಸಿದರೆ ಜಿಲ್ಲೆಯಲ್ಲಿ ರೈತ ಸಂತೆ (ಬಜಾರ್‌) ವ್ಯವಸ್ಥೆ ಕಲ್ಪಿಸಲಾಗುವುದು. ಎಪಿಎಂಸಿ ಪ್ರಾಂಗಣ, ಸಂತೆಕಟ್ಟೆಗಳಲ್ಲಿ ನಿರ್ದಿಷ್ಟ ಜಾಗ ಕಲ್ಪಿಸಿ ರೈತರು ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದು. ಹೀಗೆ ಮಾಡುವುದರಿಂದ ರೈತರ ಶೋಷಣೆ, ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ಬೀದರ್‌ನಲ್ಲಿ ಈ ಇಂಥ ವ್ಯವಸ್ಥೆ ಮಾಡಿಕೊಡಲಾಗಿದೆ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯರಾದ ಎಸ್.ಎಲ್‌.ಭೋಜೇಗೌಡ, ಎಸ್‌.ಎಲ್‌.ಧರ್ಮೇಗೌಡ ಇದ್ದರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !