ಗುರುವಾರ , ಅಕ್ಟೋಬರ್ 29, 2020
28 °C
ಚಿಕ್ಕಮಗಳೂರಿನಲ್ಲಿ ವಿವಿಧ ಪಕ್ಷ, ಸಂಘಟನೆಗಳ ಕಾರ್ಯಕರ್ತರ ಪ್ರತಿಭಟನೆ

ಉತ್ತರ ಪ್ರದೇಶ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ನ್ಯಾಯಕ್ಕಾಗಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಪಕ್ಷ ಹಾಗೂ ಸಂಘಟನೆಗಳು ಶನಿವಾರ ಪ್ರತಿಭಟನೆ ನಡೆಸಿದವು.

ನಗರದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು, ಕೇಂದ್ರ ಹಾಗೂ ಉತ್ತರ ಪ್ರದೇಶದ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.

ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಚ್. ದೇವರಾಜ್ ಮಾತನಾಡಿ, ‘ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಪರಿಶಿಷ್ಟ ಪಂಗಡದ ಯುವತಿ ಮೇಲೆ ಯುವಕರು ಅತ್ಯಾಚಾರ ನಡೆಸಿದ್ದಾರೆ. ಯುವತಿಯ ನಾಲಿಗೆ ತುಂಡರಿಸಿದ್ದಾರೆ. ಪ್ರಕರಣದಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾ ಗಿದೆ. ಉತ್ತರ ಪ್ರದೇಶದ ಸರ್ಕಾರ ಆರೋಪಿಗಳ ಪರವಾಗಿ ನಿಂತಿದೆ. ಸಾಕ್ಷ್ಯ ನಾಶ ಮಾಡಲು ಯತ್ನಿಸುತ್ತಿದೆ’ ಎಂದು ಆರೋಪಿಸಿದರು.

ಸಿಪಿಐ ರಾಜ್ಯ ಘಟಕದ ಕಾರ್ಯಕಾರಿಣಿ ಸದಸ್ಯ ಬಿ.ಅಮ್ಜದ್ ಮಾತನಾಡಿ, ‘ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತಿವೆ. ಮಹಿಳೆ, ಧರ್ಮ, ಸಂಸ್ಕೃತಿ ಬಗ್ಗೆ ಮಾತನಾಡುವ ಬಿಜೆಪಿಯವರು, ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯ ನಡೆದಾಗ ಮೌನ ವಹಿಸಿದ್ದಾರೆ’ ಎಂದು ಟೀಕಿಸಿದರು.

ಉತ್ತರ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಾಮಾಜಿಕ ನ್ಯಾಯ ದೊರೆಯುತ್ತಿಲ್ಲ. ಅಲ್ಲಿನ ಸರ್ಕಾರ ದೌರ್ಜನ್ಯಕ್ಕೆ
ಒಳಗಾದವರ ಜಾತಿ ನೋಡಿ ಅವರಿಗೆ ಸ್ಪಂದಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಳು ಮಾಡುತ್ತಿದೆ ಎಂದು ದೂಷಿಸಿದರು.

ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ರಾಧಾಕೃಷ್ಣ, ಜೆಡಿಎಸ್ ಮುಖಂಡರಾದ ಚಂದ್ರಪ್ಪ, ಲಕ್ಷ್ಮಣ್, ದಲಿತ ಸಂಘರ್ಷ ಸಮಿತಿಯ ಮರ್ಲೆ ಅಣ್ಣಯ್ಯ, ಮೋಹನ್, ಗಂಗಾಧರ್, ಮುಖಂಡರಾದ ಆರ್.ಆರ್.ಮಹೇಶ್, ಗೌಸ್‌ ಮೊಹಿಯುದ್ದೀನ್, ಸುಧಾ ಇದ್ದರು.

‘ದೌರ್ಜನ್ಯ ಖಂಡನೀಯ’

ಕೊಟ್ಟಿಗೆಹಾರ: ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ತಡಮಾಡದೇ ಗಲ್ಲಿಗೇರಿ ಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ಒತ್ತಾಯಿಸಿದ್ದಾರೆ.

‘ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದು ಖಂಡನೀಯ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತಿಭಟನೆ ನಾಳೆ

ಕೊಪ್ಪ: ‘ಉತ್ತರ ಪ್ರದೇಶದ ಹಾಥರಸ್‌ ನಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಹಾಗೂ ಸಾವು ಪ್ರಕರಣ ಖಂಡಿಸಿ ಬಹುಜನ ಸಮಾಜ ಪಕ್ಷ ತಾಲ್ಲೂಕು ಘಟಕ ವತಿಯಿಂದ ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆ 11ಕ್ಕೆ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಆನಂದ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.