ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಚನ ಸಾಹಿತ್ಯ ಸಂರಕ್ಷಿಸಿದ ಮಹನೀಯ ಡಾ.ಫ.ಗು.ಹಳಕಟ್ಟಿ’

ವಚನ ಸಾಹಿತ್ಯ ಸಂರಕ್ಷಣೆ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ರಮೇಶ್‌
Last Updated 3 ಜುಲೈ 2022, 2:17 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಡಾ.ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಸಂರಕ್ಷಣೆಗೆ ಜೀವನವನ್ನು ಮುಡಿಪಾಗಿಟ್ಟ ಮಹನೀಯ. ಸುಮಾರು 17ವರ್ಷ ಊರೂರು ಸುತ್ತಿ ವಚನ ಸಾಹಿತ್ಯವನ್ನು ಸಂಗ್ರಹಿಸಿ ‘ವಚನ ಸಾಹಿತ್ಯ ಸಾರ’ ಗ್ರಂಥವನ್ನು 1921ರಲ್ಲಿ ಪ್ರಕಟಿಸಿದರು’ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಹೇಳಿದರು.

ಡಾ.ಫ.ಗು.ಹಳಕಟ್ಟಿ ಜನ್ಮದಿನದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಕುವೆಂಪು ಕಲಾ ಮಂದಿರದಲ್ಲಿ ಏರ್ಪಡಿಸಿದ್ದ ವಚನ ಸಾಹಿತ್ಯ ಸಂರಕ್ಷಣೆ ದಿನಾಚರಣೆಯಲ್ಲಿ ಮಾತನಾಡಿದರು. ಫ.ಗು.ಹಳಕಟ್ಟಿ ಅವರು ಚಿಕ್ಕಂದಿನಲ್ಲಿ ಶಿವಲಿಂಗಮ್ಮ ಮಂಚಾಲೆ ಎಂಬವರ ಮನೆಗೆ ಹೋಗಿದ್ದಾಗ ತಾಳೆ ಗರಿಯ ವಚನಗಳ ಕಟ್ಟು ನೋಡಿ ಆಕರ್ಷಿತರಾಗಿ ಸಂಗ್ರಹದಲ್ಲಿ ತೊಡಗಿಕೊಂಡರು. ವಚನ ಸಾಹಿತ್ಯದ ಪ್ರಭಾವಕ್ಕೆ ಒಳಗಾದ ಅವರು ವಕೀಲ ವೃತ್ತಿಯನ್ನು ತ್ಯಜಿಸಿ ವಚನ ಸಾಹಿತ್ಯ ಸಂರಕ್ಷಣೆಗೆ ನಿಂತರು’ ಎಂದು ವಿವರಿಸಿದರು.

‘ಮುಂದಿನ ಪೀಳಿಗೆ ವಚನಗಳನ್ನು ತಲುಪಿಸುವ ನಿಟ್ಟಿನಲ್ಲಿ ವಚನಗಳ ಮುದ್ರಣಕ್ಕೆ ಮುಂದಾದರು. ಹಿತಚಿಂತಕರ ಮುದ್ರಾಣಲಯವನ್ನು ಸ್ಥಾಪಿಸಿದರು. ಆರ್ಥಿಕ ಬಿಕ್ಕಟ್ಟು ತಲೆದೋರಿದಾಗ ಮನೆಯನ್ನೇ ಮಾರಾಟ ಮಾಡಿ ಮುದ್ರಣಾಲಯ ನಡೆಸಿದರು. ‘ಶಿವಾನುಭವ’, ‘ನವ ಕರ್ನಾಟಕ’ ಪತ್ರಿಕೆಗಳನ್ನು ಅವರು ನಡೆಸಿದರು. ಅವರ ಕಾರ್ಯವನ್ನು ಶ್ಲಾಘಿಸಿ ಬ್ರಿಟಿಷರು ‘ರಾವ್‌ ಬಹದ್ದೂರ್‌’ ಬಿರುದು ನೀಡಿದರು’ ಎಂದು ಹೇಳಿದರು.

‘ವಿಜಯಪುರದ ಬಿಎಲ್‌ಡಿಇ ಸಂಸ್ಥೆಯವರು ಹಳಕಟ್ಟಿ ಅವರು ವಚನ ಸಾಹಿತ್ಯ ಸಂಗ್ರಹವನ್ನು 12 ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಅವರ ಸ್ಮರಣಾರ್ಥ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ್ದಾರೆ’ ಎಂದು ಹೇಳಿದರು.

‘ವಚನಕಾರರು ವಚನಗಳ ಮೂಲಕ ಜ್ಞಾನದ ಬೆಳಕನ್ನು ಜಗತ್ತಿಗೆ ಬಿತ್ತರಿಸಿ, ಜೀವನಕ್ಕೆ ನೀತಿ ಸಂಹಿತೆ ಹಾಕಿಕೊಟ್ಟು, ಸಮಾನತೆ, ಸಹಬಾಳ್ವೆ, ಭ್ರಾತೃತ್ವ, ಸಹಾನುಭೂತಿ ಚಿಂತನೆಗಳನ್ನು ಸಾರಿದ್ದಾರೆ. ದಯೆ, ಪ್ರೀತಿ, ಅನುಕಂಪ, ಮಾನವೀಯ ಮೌಲ್ಯಗಳ ಸಂದೇಶಗಳು ವಚನಗಳಲ್ಲಿ ಇವೆ. ವಚನಗಳ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದರು.

ಬಸವತತ್ವ ಪೀಠದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಉಪನ್ಯಾಸ ನೀಡಿದರು.

ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್ ಅಧ್ಯಕ್ಷತೆ ವಹಿಸಿದ್ದರು. ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT