ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಮುಖಿಯಾದ ತರಕಾರಿ ಬೆಲೆ: ₹ 100 ದಾಟಿದ ಟೊಮೆಟೊ ದರ

Last Updated 3 ಡಿಸೆಂಬರ್ 2021, 5:00 IST
ಅಕ್ಷರ ಗಾತ್ರ

ಕಡೂರು: ಅಕಾಲಿಕ ಮಳೆಯಿಂದ ತರಕಾರಿಗಳ ಬೆಲೆ ಗಗನಕ್ಕೇರಿವೆ. ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಟೊಮೆಟೊ ದರ ಕೆ.ಜಿ.ಗೆ ₹ 100ರ ಗಡಿ ದಾಟಿದೆ. ಇದು ಗ್ರಾಹಕರಿಗೆ ಬಿಸಿ ತಟ್ಟಿದರೂ, ಬೆಳೆಗಾರರಿಗೆ ತುಸು ಸಮಾಧಾನ ತಂದಿದೆ.

ತಾಲ್ಲೂಕಿನಲ್ಲಿ ಕಸಬಾ, ಸಿಂಗಟಗೆರೆ, ಯಗಟಿ, ಯಳ್ಳಂಬಳಸೆ ಹೋಬಳಿಗಳ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಟೊಮೆಟೊ ರೈತರ ಸ್ವಾವಲಂಬನೆಗೆ ದಾರಿ. ಆದರೆ, ಅನಿರೀಕ್ಷಿತವಾಗಿ ಸುರಿದ ಮಳೆಯಿಂದ ಶೇ 80 ರಷ್ಟು ಬೆಳೆ ನೆಲಕಚ್ಚಿದೆ. ಅದರ ಪರಿಣಾಮವಾಗಿ ಈಗ ಸೇಬು ಹಣ್ಣಿಗಿಂತ ಹೆಚ್ಚಿನ ದರದಲ್ಲಿ ಅಳಿದುಳಿದ ಟೊಮೆಟೊ ಮಾರಾಟವಾಗುತ್ತಿದೆ.

ಸ್ಥಳೀಯವಾಗಿ ಹೈಬ್ರಿಡ್ ಟೊಮೆಟೊ ಕೆ.ಜಿ.ಗೆ ₹ 80 ರಿಂದ ₹ 120ರವರೆಗೆ ಮಾರಾಟವಾದರೆ, ಹುಳಿ ಟೊಮೆಟೊ ₹ 70ರಿಂದ ₹ 90ಕ್ಕೆ ಬಿಕರಿಯಾಗುತ್ತಿದೆ. ಹಾಗೆಂದು ಟೊಮೆಟೊ ಬೆಳೆದ ಎಲ್ಲರಿಗೂ ಈ ಬೆಲೆ ದೊರೆಯಿತು ಎನ್ನಲಾಗದು‌. ಏಕೆಂದರೆ ಹಲವರ ಜಮೀನಿನಲ್ಲಿ ನೀರು ನಿಂತು ಬೆಳೆ ಕೊಳೆತು ಹೋದರೆ, ಮತ್ತೆ ಕೆಲವೆಡೆ ಹೂವು ಉದುರುತ್ತಿವೆ. ಕಟಾವಿಗೆ ಬಂದಿದ್ದ ಹಣ್ಣು ಗಿಡದಲ್ಲೆ ಕೊಳೆತು ಹೋಗಿದೆ. ಅಳಿದುಳಿದ ಬೆಳೆ ಗುಣಮಟ್ಟ ವಿಲ್ಲದಿದ್ದರೂ ಹೆಚ್ಚು ಬೆಲೆಯಿರುವುದು ವಾಸ್ತವ ಸಂಗತಿ.

ಇದು ಬರಿ ಟೊಮೆಟೊ ಕಥೆಯಷ್ಟೇ ಅಲ್ಲ. ಬೀನ್ಸ್, ಕ್ಯಾರೆಟ್, ಹಾಗಲ, ದಪ್ಪ ಮೆಣಸಿನಕಾಯಿ, ಹೂಕೋಸು, ನುಗ್ಗೆ ಎಲ್ಲದರ ಬೆಲೆಯೂ ಕೆ.ಜಿಗೆ ₹ 60ರಿಂದ ₹ 70 ಮೇಲಿದೆ. ಸೊಪ್ಪುಗಳ ಬೆಲೆಯೂ ಒಂದು ಕಟ್ಟಿಗೆ ₹ 6 ಇದೆ.

ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಮತ್ತು ಇತರೆ ತರಕಾರಿಗಳು ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ತರಕಾರಿ ಅವಕ ಕಡಿಮೆಯಾಗಿದ್ದು, ಒಂದು ತಿಂಗಳ ಹಿಂದೆ ಇದ್ದ ತರಕಾರಿ ಬೆಲೆಯಲ್ಲಿ 2 ರಿಂದ 3 ಪಟ್ಟು ಹೆಚ್ಚಳವಾಗಿದೆ. ಹೋಟೆಲ್ ಮಾಲೀಕರಿಗೂ ದುಬಾರಿ ಹಣ ನೀಡಿ ತರಕಾರಿ ಖರೀದಿಸುವ ಪರಿಸ್ಥಿತಿ ಎದುರಾಗಿದೆ.

ಕೇವಲ ಎರಡು ತಿಂಗಳ ಹಿಂದೆ ಟೊಮೆಟೊ ಬೆಲೆ ಒಂದು ಬಾಕ್ಸ್‌ಗೆ ₹ 20 ರಿಂದ ₹ 30 ಇತ್ತು. ಕೊಯಿಲು ಮಾಡಿದ ಹಣವೂ ಸಿಗದೆ ರೈತರು ಬೆಳೆಯನ್ನು ರಸ್ತೆಗೆ ಸುರಿದಿದ್ದರು. ಈಗ ಬೆಲೆಯಿದೆ, ಬೆಳೆಯಿಲ್ಲ ಎಂಬ ಪರಿಸ್ಥಿತಿ ರೈತರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT