ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ | ಬಿಜೆಪಿಗೆ 140ಕ್ಕೂ ಅಧಿಕ ಸ್ಥಾನ ನಿಶ್ಚಿತ: ಯಡಿಯೂರಪ್ಪ

ಶೃಂಗೇರಿಯಲ್ಲಿ ವಿಜಯ ಸಂಕಲ್ಪ ಯಾತ್ರೆ
Last Updated 17 ಮಾರ್ಚ್ 2023, 7:23 IST
ಅಕ್ಷರ ಗಾತ್ರ

ಶೃಂಗೇರಿ: ‘ಯಾರು ಏನೇ ಹೇಳಲಿ, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಜಯ ಗಳಿಸಲಿದ್ದು, ಮತ್ತೆ ಸರ್ಕಾರ ರಚಿಸುವುದು ನಿಶ್ಚಿತ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶೃಂಗೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಹಲವರು ಈಗಾಗಲೇ ಮುಖ್ಯಮಂತ್ರಿ ಆಗಿದ್ದೇವೆ ಎಂಬ ಕನಸು ಕಾಣುತ್ತಿರುವವರ ಕನಸು ಖಂಡಿತ ನನಸಾಗುವುದಿಲ್ಲ. ರಾಜ್ಯದ ವಾತಾವರಣವು ಬಿಜೆಪಿ ಪರವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ರಾಜ್ಯಕ್ಕೆ ಬಂದಾಗ ಜನ ತೋರಿಸಿದ ಬೆಂಬಲ ನೋಡಿದಾಗ ನಮಗೆ ಆಶ್ಚರ್ಯವಾಗಿದೆ. ಕಾಂಗ್ರೆಎಸ್ ಪಕ್ಷದಲ್ಲಿ ಯಾರೂ ಸರಿಯಾದ ನಾಯಕರಿಲ್ಲ. ರಾಹುಲ್ ಗಾಂಧಿ ಅವರು ಮೋದಿಯವರ ಸಮಕ್ಕೆ ಬರಲು ಎಂದಿಗೂ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ’ ಎಂದು ಛೇಡಿಸಿದರು.

ಮೂಡಿಗೆರೆಯಲ್ಲಿನ ಪಕ್ಷದೊಳಗಿನ ಬಣ ರಾಜಕೀಯ ಕುರಿತು ಪ್ರತಿಕ್ರಿಯಿಸಿ, ‘ಚುನಾವಣಾ ಕಣ ಆರಂಭವಾಗುವ ವರೆಗೂ ಅಧಿಕಾರಕ್ಕೆ ಬರುವ ಪಕ್ಷದೊಳಗೆ ಬಣ ಇರುವುದು ಸ್ವಾಭಾವಿಕ ಸಂಗತಿ. ಆದರೆ, ಪಕ್ಷದ ಹೈಕಮಾಂಡ್ ಅಲ್ಲಿ ಯಾರು ಅಭ್ಯರ್ಥಿ ಆಗಬೇಕು ಎಂದು ತೀರ್ಮಾನ ಕೊಟ್ಟ ಮೇಲೆ ಅವರನ್ನು ಗೆಲ್ಲಿಸಲು ಎಲ್ಲರೂ ಶ್ರಮಿಸಬೇಕಾಗುತ್ತದೆ. ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್‍ನಲ್ಲಿ ಚರ್ಚೆ ಮತ್ತು ಅಭಿಪ್ರಾಯ ಸಂಗ್ರಹ ಆಗುತ್ತಿದೆ. ಅವರ ತೀರ್ಮಾನ ಆದ ನಂತರ ಸ್ಪರ್ಧಿಗಳ ಪಟ್ಟಿ ಬಿಡುಗಡೆಗೊಳ್ಳಲಿದೆ’ ಎಂದರು.

ರೈತರಿಗೆ ತೊಂದರೆಕೊಟ್ಟರೆ ಕ್ರಮ: ಸೆಕ್ಷನ್ 4(1) ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಾಗುವಳಿ ಮಾಡುತ್ತಿರುವ ಯಾರಿಗೂ ತೊಂದರೆ ಕೊಡದಂತೆ ಸೂಚನೆ ಕೊಟ್ಟಿದ್ದೇವೆ. ಆದರೆ, ಅಧಿಕ ಪ್ರಸಂಗ ಮಾಡಿ ಅರಣ್ಯ ಅಧಿಕಾರಿಗಳು ಕಿರುಕುಳ ನೀಡುವುದು ನಮ್ಮ ಗಮನಕ್ಕೆ ಬಂದಿದೆ. ಯಾವುದೇ ಕಾರಣಕ್ಕೆ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಕಾರ್ಯ ಆಗುವುದಿಲ್ಲ ಎಂಬುದನ್ನು ಮುಖ್ಯಮಂತ್ರಿಯೇ ಸ್ಪಷ್ಟಪಡಿಸಿದ್ದಾರೆ. ಇದನ್ನು ಮೀರಿ ನಡೆದುಕೊಂಡ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಕ್ಕೆ ಮುಖ್ಯಮಂತ್ರಿಗೆ ತಿಳಿಸುತ್ತೇನೆ’ ಎಂದು ಯಡಿಯೂರಪ್ಪ ತಿಳಿಸಿದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನದ ತನಿಕೋಡು ಗೇಟ್‌ನಿಂದ ಮಾಳದ ಗೇಟ್‍ನವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಅಡ್ಡಿ ಕುರಿತ ಪ್ರಶ್ನೆಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್ ಉತ್ತರಿಸಿ, ‘ಈ ರಸ್ತೆ ಕೆಲಸ ಕೈಗೊಳ್ಳುವ ಬಗ್ಗೆ ರಾಜ್ಯ ವನ್ಯ ಜೀವಿ ಮಂಡಳಿ ಸಭೆಯಲ್ಲಿ ಮುಕ್ತ ಅನುಮತಿ ದೊರೆತಿದೆ. ಈ ಬಗ್ಗೆ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಕೇಂದ್ರ ಹೆದ್ದಾರಿ ಸಚಿವಾಲಯವು ಈ ರಸ್ತೆ ಅಭಿವೃದ್ಧಿಗಾಗಿ ₹ 562 ಕೋಟಿ ಹಾಗೂ ಅರಣ್ಯ ಇಲಾಖೆಗೆ ₹ 100 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದಲ್ಲದೆ, ಶೃಂಗೇರಿಯ ಆಗುಂಬೆ ಮಾರ್ಗದ ನೇರಳಕೂಡಿಗೆಯಲ್ಲಿ ಮಳೆಗೆ ಕುಸಿದ ರಸ್ತೆ ಭಾಗದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ₹ 4 ಕೋಟಿ ಅನುದಾನ ನೀಡಲಾಗಿದೆ’ ಎಂದರು.

ಸಂಸದ ಸದಾನಂದಗೌಡ, ವಿಧಾನಸಭಾ ಉಪ ಸಭಾಪತಿ ಎಂ.ಕೆ ಪ್ರಾಣೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಮುರುಡಪ್ಪ, ಮುಖಂಡರಾದ ದತ್ತಾತ್ರಿ, ಕಿಶೋರ್, ದೇವರಾಜ್, ತಲಗಾರು ಉಮೇಶ್, ಅಂಬ್ಲೂರು ರಾಮಕೃಷ್ಣ, ಹರೀಶ್ ಶೆಟ್ಟಿ, ನೂತನ್, ಹಾಲ್ಮಿಕ್ಕಿ ಅರುಣ್ ಕುಮಾರ್, ಶೆಟ್ಟಿಗದ್ದೆ ರಾಮಸ್ವಾಮಿ, ಮಹಬಲ್ ರಾವ್, ಎಂ.ಎಸ್ ರಂಗನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT