ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯ–ಇಲಾಖೆ ಕೆಲಸಗಳಿಂದ ವಿಮುಕ್ತಿಗೆ ಒತ್ತಾಯ: ಗ್ರಾಮಲೆಕ್ಕಾಧಿಕಾರಿಗಳ ಪ್ರತಿಭಟನೆ

Last Updated 17 ಜುಲೈ 2019, 12:32 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಅನ್ಯ ಇಲಾಖೆ ಕೆಲಸಗಳಿಂದ ಗ್ರಾಮ ಲೆಕ್ಕಾಧಿಕಾರಿಗಳನ್ನು ವಿಮುಕ್ತಗೊಳಿಸುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಗ್ರಾಮ ಲೆಕ್ಕಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಸುಭಾಷ್ ಚಂದ್ರಬೋಸ್ ಜಿಲ್ಲಾಆಟದ ಮೈದಾನದಲ್ಲಿ ಜಮಾಯಿಸಿದ ಗ್ರಾಮ ಲೆಕ್ಕಾಧಿಕಾರಿಗಳು, ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು.

ಆರ್ಥಿಕ ಗಣತಿ, ಜೀತ ಪದ್ಧತಿ ಸಮೀಕ್ಷೆ, ಬೆಳೆ ಹಾನಿ ಸಮೀಕ್ಷೆ, ಪಡಿತರ ಚೀಟಿ ಸಮೀಕ್ಷೆಗೆ ಗ್ರಾಮ ಲೆಕ್ಕಾಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರಧಾನಮಂತ್ರಿ ಕಿಸಾನ್‌ ಯೋಜನೆ ಪ್ರಗತಿ ನಿಟ್ಟಿನಲ್ಲಿ ಗ್ರಾಮ ಲೆಕ್ಕಿಗರಿಗೆ ಅತಿಯಾದ ಒತ್ತಡ ಹೇರಲಾಗುತ್ತಿದೆ. ಕೃಷಿ , ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ಪಶುಸಂಗೋಪನೆ, ತೋಟಗಾರಿಕೆ ರೇಷ್ಮೆ, ಇನ್ನಿತರ ಇಲಾಖೆಗಳ ಕೆಲಸಗಳಿಂದ ಗ್ರಾಮ ಲೆಕ್ಕಿಗರನ್ನು ವಿಮುಕ್ತಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗ್ರಾಮ ಲೆಕ್ಕಾಧಿಕಾರಿಗಳಿಗೆ ಜಾಬ್ ಕಾರ್ಡ್ ನೀಡಬೇಕು. ಕಾಲ ಕಾಲಕ್ಕೆ ಬಡ್ತಿ ನೀಡಬೇಕು. ಸಮಾನ ಹುದ್ದೆಗೆ ಸಾಮನ ವೇತನ ನೀಡಬೇಕು. ರಜೆ ದಿನಗಳಲ್ಲಿ ಕೆಲಸ ಮಾಡುವಂತೆ ಒತ್ತಡ ಹಾಕಬಾರದು. ತಾಂತ್ರಿಕ ಕೆಲಸಗಳಿಂದ ಮುಕ್ತಿ ನೀಡಬೇಕು. ಗ್ರಾಮ ಲೆಕ್ಕಾಧಿಕಾರಿಗೆ ವಸತಿ ಗೃಹ ವ್ಯವಸ್ಥೆ ಮಾಡಬೇಕು. ಸಕಾಲ ವ್ಯವಸ್ಥೆಯಲ್ಲಿರುವ ರ್ಯಾಂಕಿಂಗ್ ಪದ್ಧತಿ ಕೈ ಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬೆಳೆ ಸಮೀಕ್ಷೆಗೆ ಮೊಬೈಲ್ ಆ್ಯಪ್ ಬಳಸಬಾರದು. ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು. ಗ್ರಾಮ ಸಹಾಯಕ ಹುದ್ದೆಯನ್ನು ಖಾಯಂಗೊಳಿಸಬೇಕು ಎಂದು ಮನವಿ ಮಾಡಿದರು.

ಗ್ರಾಮಲೆಕ್ಕಾಧಿಕಾರಿಗಳ ಜಿಲ್ಲಾ ಪ್ರಧಾನಕಾರ್ಯದರ್ಶಿ ಲವಕುಮಾರ್ ಮಾತನಾಡಿ, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹಿಂದಿನ ವರ್ಷ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ರಾಜ್ಯ ಸರ್ಕಾರ ಪ್ರತಿಭಟನೆಗೆ ಸ್ಪಂದಿಸಿ, ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಆದರೆ ಈವೆರೆಗೆ ಬೇಡಿಕೆಗಳು ಈಡೇರಿಲ್ಲ ಎಂದು ದೂರಿದರು.

ಸಂಘದ ಜಿಲ್ಲಾಘಟಕದ ಅಧ್ಯಕ್ಷ ನಾಗೇಶ್, ಸದಸ್ಯರಾದ ಸತ್ಯನಾರಾಯಣ್, ಮಧುಸೂಧನ್, ಹರ್ಷವರ್ದನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT