ಶನಿವಾರ, ಡಿಸೆಂಬರ್ 7, 2019
22 °C
ವಿಶ್ವಕರ್ಮ ಜಯಂತ್ಯುತ್ಸವ

ಸಣ್ಣ ಸಮುದಾಯ ಎನ್ನುವ ಕೀಳರಿಮೆ ಬೇಡ, ಸಂಘಟಿತರಾಗಿ: ತಾ.ಪಂ ಅಧ್ಯಕ್ಷ ಜಯಣ್ಣ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ವಿಶ್ವಕರ್ಮ ಸಮುದಾಯದವರು ಸಂಘಟಿತರಾಗಬೇಕು. ಸಣ್ಣ ಸಮುದಾಯ ಎನ್ನುವ ಕೀಳರಿಮೆ ಬಿಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ ಸಲಹೆ ನೀಡಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ವಿಶ್ವ ಕರ್ಮ ಸಮುದಾಯವದರು ಒಗ್ಗೂಡಬೇಕು. ರಾಜಕೀಯವಾಗಿ, ಶೈಕ್ಷಣಿಕವಾಗಿ ಬೆಳವಣಿಗೆ ಸಾಧಿಸಬೇಕು. ನರೇಂದ್ರ ಮೋದಿ ಅವರು ಸಣ್ಣ ಸಮುದಾಯದಲ್ಲಿ ಜನಿಸಿದರು. ಆದರೆ ಅವಕಾಶ ಸದುಪಯೋಗ ಪಡಿಸಿಕೊಂಡು ಇಂದು ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಅವರಿಂದ ಜನರು ಪ್ರೇರಿತರಾಗಬೇಕು ಎಂದರು.

ವಿಶ್ವಕರ್ಮ ಸಮುದಾಯದವರು ಕಾಯಕ ಜೀವಿಗಳು. ಚಿನ್ನ, ಬೆಳ್ಳಿ, ಕಬ್ಬಿಣ, ಮರ, ಕಲ್ಲು, ಮಣ್ಣು ದೇವರ ಸೃಷ್ಟಿ ಆಗಿದೆ. ಆದರೆ ಚಿನ್ನಾಭರಣ, ಪೀಠೋಪಕರಣ, ಶಿಲ್ಪಗಳು, ವಿಶ್ವಕರ್ಮ ಸಮುದಾಯದವರ ಸೃಷ್ಟಿಯಾಗಿವೆ. ಅದ್ಭುತ ಶಿಲ್ಪಗಳು, ಕಟ್ಟಡಗಳನ್ನು ನಿರ್ಮಿಸಿದ ಕೀರ್ತಿ ಈ ಸಮುದಾಯವರಿಗೆ ಸಲ್ಲುತ್ತದೆ ಎಂದರು.

ರಾಜ್ಯ ಸರ್ಕಾರ ಐದು ವರ್ಷಗಳಿಂದ ವಿಶ್ವಕರ್ಮ ಆಚಾರ್ಯ ಜಯಂತ್ಯುತ್ಸವ ಆಚರಿಸುತ್ತಿದೆ. ರಾಮಾಯಣ, ಮಹಾಭಾರತ, ಭಗವದ್ಗೀತೆ, ವಿಶ್ವಕರ್ಮ ಆಚಾರ್ಯರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವ ಅಗತ್ಯ ಇದೆ ಎಂದರು.

ಉಪವಿಭಾಗಾಧಿಕಾರಿ ಶಿವಕುಮಾರ್ ಮಾತನಾಡಿ, ವಿಶ್ವಕರ್ಮ ಆಚಾರ್ಯ ಶಿಲ್ಪಾಕಲೆಯ ಪಿತಾಮಹಾ. ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಋಗ್ವೇದ, ಸ್ತಪತ್ಯ ವೇದಗಳಲ್ಲಿಯೂ ವಿಶ್ವಕರ್ಮ ಆಚಾರ್ಯರ ಹೆಸರು ಪ್ರಸ್ತಾಪವಾಗಿದೆ. ಕರ್ನಾಟಕ, ಬಿಹಾರ, ಜಾರ್ಖಂಡ್, ಓರಿಸ್ಸಾ ಸಹಿತ ದೇಶದ ಹಲವಾರು ರಾಜ್ಯಗಳಲ್ಲಿ ವಿಶ್ವಕರ್ಮ ಆಚಾರ್ಯರ ಶಿಲ್ಪಾಕಲೆಗಳಿವೆ. ಜಯಂತ್ಯುತ್ಸವಗಳು ಆಚರಣೆಗೆ ಸೀಮಿತ ಆಗಬಾರದು. ಮಹಾತ್ಮರು, ದಾರ್ಶನಿಕರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಆಚರಣೆಗೆ ನಿಜವಾದ ಅರ್ಥ ದೊರೆಯುತ್ತದೆ ಎಂದರು.

ಶಿವಮೊಗ್ಗದ ಭಾಗ್ಯಲಕ್ಷ್ಮಿ ಕೃಷ್ಣಮೂರ್ತಿ ಆಚಾರ್ಯ ಅವರು ವಿಶ್ವಕರ್ಮ ಆಚಾರ್ಯ ಕುರಿತು ಉಪನ್ಯಾಸ ನೀಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮಲ್ಲಿಗೆ ಸುಧೀರ್ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ, ತಹಶೀಲ್ದಾರ್ ನಂದಕುಮಾರ್, ವಿಶ್ವಕರ್ಮ ಅಭಿವೃದ್ಧಿ ನಿಗಮದ ನಿರ್ದೇಶಕ ರತೀಶ್, ವಿಶ್ವಕರ್ಮ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕಮಲಾಪತ್ತಾರ್, ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಕೃಷ್ಣ, ಜೈನ ಸಂಘದ ಅಧ್ಯಕ್ಷ ಗೌತಮ್ ಚಂದ್ ಜೈನ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು