4
ಮಳೆಗಾಲಕ್ಕೂ ಮುನ್ನ ಚರಂಡಿ ಸ್ವಚ್ಛಗೊಳಿಸುವುದು ಮರೆತ ನಗರಸಭೆ, ಚರಂಡಿ ಸ್ವರೂಪಕ್ಕೆ ತಿರುಗಿದ ರಾಜಕಾಲುವೆಗಳು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

ಮನೆಗೆ ನುಗ್ಗುವ ನೀರು, ಮರಗುವವರು ಯಾರು?

Published:
Updated:
ನಗರದ ಎರಡನೇ ವಾರ್ಡ್‌ನಲ್ಲಿ ದಿನೇ ದಿನೇ ಚರಂಡಿ ಸ್ವರೂಪ ಪಡೆಯುತ್ತಿರುವ ರಾಜ ಕಾಲುವೆ

ಚಿಕ್ಕಬಳ್ಳಾಪುರ: ಹದಗೆಟ್ಟ ಚರಂಡಿ, ಕಾಲುವೆಗಳು ಜನರ ಬದುಕನ್ನು ಹೇಗೆ ನರಕಸದೃಶ್ಯ ಮಾಡುತ್ತವೆ ಎನ್ನುವುದು ಕಾಣಬೇಕಾದರೆ ನಗರದ 2ನೇ ವಾರ್ಡ್‌ನಲ್ಲಿ ಸುತ್ತು ಹಾಕಬೇಕು. ಪ್ರತಿ ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳದು ನಿರಾಶ್ರಿತರ ಪಾಡು. ಪ್ರವಾಹೋಪಾದಿಯಲ್ಲಿ ಬರುವ ನೀರು ಇಲ್ಲಿಯ ಮನೆಗಳಲ್ಲಿ ಏನೆಲ್ಲ ಕೊಚ್ಚಿಕೊಂಡು ಹೋಗಿದೆ ಎಂಬುದು ಲೆಕ್ಕ ಇಟ್ಟವರಿಲ್ಲ.

ನಗರಸಭೆಯ ನಿರ್ಲಕ್ಷ್ಯದಿಂದಾಗಿ 2ನೇ ವಾರ್ಡ್‌ನಲ್ಲಿ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ ಪಕ್ಕದ ರಸ್ತೆಯ ರಾಜಕಾಲುವೆಯ ಆಸುಪಾಸು ಇರುವ ನೂರಕ್ಕೂ ಹೆಚ್ಚು ಮನೆಗಳ ಜನರು ಮಳೆಗಾಲದಲ್ಲಿ ಮನೆಗಳಿಗೆ ಪದೇ ಪದೇ ನೀರು ನುಗ್ಗಿ ಪಡಬಾರದು ಪಾಡು ಪಡುವ ಸಂಕಟದ ಸ್ಥಿತಿಯಲ್ಲಿ ಬದುಕುವಂತಾಗಿದೆ. ಧೋ ಎಂದು ಮಳೆ ಸುರಿದರೆ ಇಲ್ಲಿನ ರಸ್ತೆಯಲ್ಲಿ ಸಂಚರಿಸುವವರಿಗೆ ‘ಜಲಕ್ರೀಡೆ’ಯ ಅನುಭವವಾಗುತ್ತದೆ!

ಕಳೆದ ವರ್ಷದ ಮಳೆಗಾಲದ ಒಂದು ದಿನ ವರುಣನ ಆರ್ಭಟಕ್ಕೆ ಇಡೀ ಬಡಾವಣೆಯಲ್ಲಿ ಸರೋವರ ಕಾಣಿಸಿಕೊಂಡಿತ್ತು. ಮಳೆ ಹೊಡೆತಕ್ಕೆ ನಲುಗಿದ್ದ ಇಲ್ಲಿನ ಜನರು ಸಮೀಪದ ರೇಷ್ಮೆಗೂಡು ಮಾರುಕಟ್ಟೆ ಕಟ್ಟಡದಲ್ಲಿ ನಿರಾಶ್ರಿತರ ರೀತಿ ಆಶ್ರಯ ಪಡೆಯುವ ಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಮೂರು ದಶಕಗಳಲ್ಲಿ ಅನೇಕ ಬಾರಿ ಅಂತಹ ಸ್ಥಿತಿ ಇಲ್ಲಿ ತಲೆದೋರಿದೆ ಎನ್ನುತ್ತಾರೆ ಇಲ್ಲಿನ ಹಿರಿಯ ನಾಗರಿಕರು.

‘ರಾಜಕಾಲುವೆಗಳು ತ್ಯಾಜ್ಯದ ತೊಟ್ಟಿಯಾಗಿ ಕಸದಿಂದ ತುಂಬಿರುವ ಪರಿಣಾಮ ಮಳೆ ನೀರು ಹರಿಯಲು ಜಾಗವಿಲ್ಲದೆ ದೊಡ್ಡ ಮಳೆಯ ಸಂದರ್ಭದಲ್ಲಿ ಕಾಲುವೆ ಅಕ್ಕಪಕ್ಕದ ಮನೆಗಳಲ್ಲಿ ಸುಮಾರು ಐದು ಅಡಿಗಳಷ್ಟು ಮಡುಗಟ್ಟಿ ನಿಂತು ನಿಧಾನವಾಗಿ ಹರಿಯುತ್ತದೆ. ಅನೇಕ ಮಳೆಗಾಲದಲ್ಲಿ ಇಲ್ಲಿನ ಜನರು ಗಂಟುಮೂಟೆ ಕಟ್ಟಿಕೊಂಡು ಬೇರೆಡೆ ಆಶ್ರಯ ಪಡೆದ ಉದಾಹರಣೆಗಳಿವೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಕಲಾ ಬೇಸರ ವ್ಯಕ್ತಪಡಿಸಿದರು.

‘ಕಳೆದ ಮಳೆಗಾಲದಲ್ಲಿ ನಮ್ಮ ಪಕ್ಕದ ಮನೆ ನೀರು ನುಗ್ಗಿ ಅರ್ಧ ರಾತ್ರಿಯಲ್ಲಿ ಬಿದ್ದೇ ಹೋಯಿತು. ಅದೃಷ್ಟವಶಾತ್ ಅಂದು ಆ ಮನೆಯಲ್ಲಿ ಯಾರೂ ಇರಲಿಲ್ಲ. ಅಂದಿನಿಂದ ಜೋರು ಮಳೆ ಸುರಿಯುವಾಗ ಮನೆಯಲ್ಲಿ ಇರಲು ಭಯವಾಗುತ್ತದೆ. ಮಳೆಗಾಲ ಬಂದರೆ ನಮಗೆ ನೆಮ್ಮದಿಯೇ ಕಳೆದು ಹೋಗುತ್ತದೆ. ಜಿಲ್ಲಾಡಳಿತ ಸಹ ಇದನ್ನೆಲ್ಲ ಕಂಡರೂ ಕಾಣದಂತೆ ನಿದ್ರೆಗೆ ಜಾರಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಾವು ಇಲ್ಲಿ 1984ರಲ್ಲಿಯೇ ಮನೆ ನಿರ್ಮಿಸಿಕೊಂಡಿದ್ದೇವೆ. ಅಂದಿನಿಂದ ಪ್ರತಿ ಮಳೆಗಾಲದಲ್ಲಿ ವರ್ಷಕ್ಕೆ ಅನೇಕ ಬಾರಿ ನಮ್ಮ ಮನೆಗೆ ನೀರು ನುಗ್ಗುತ್ತದೆ. ಅದರಿಂದಾಗಿ ಈಗಾಗಲೇ ನಮ್ಮ ಮನೆಯ ಕಿಟಕಿ, ಬಾಗಿಲುಗಳು, ಮಂಚ ಸೇರಿದಂತೆ ಅನೇಕ ವಸ್ತುಗಳು ಹಾಳಾಗಿವೆ. ಎಷ್ಟೋ ಬಾರಿ ಮನೆಯಲ್ಲಿನ ಪಾತ್ರೆ, ತರಕಾರಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಹಾಸಿಗೆಗಳು ಒದ್ದೆಯಾಗಿ ನಿದ್ದೆ ಇಲ್ಲದೆ ಕಳೆದ ದಿನಗಳಿವೆ. ಎಷ್ಟೋ ಬಾರಿ ದುರ್ವಾಸನೆಗೆ ಎರಡ್ಮೂರು ದಿನ ಊಟ ಸೇರಲ್ಲ’ ಎಂದು ಸ್ಥಳೀಯ ನಿವಾಸಿ ಶಶಿಕಲಾ ನೊಂದು ಹೇಳಿದರು.

‘ಇಷ್ಟು ವರ್ಷಗಳಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಆಗಾಗ ಬಂದು ನಮ್ಮ ಪ್ರದೇಶ ನೋಡಿಕೊಂಡು ಹೋಗುವ ‘ಶಾಸ್ತ್ರ’ ಮಾಡಿದ್ದು ಬಿಟ್ಟರೆ ರಾಜಕಾಲುವೆಗಳ ಅಭಿವೃದ್ಧಿಗೆ ಯಾರೊಬ್ಬರೂ ಕಾಳಜಿ ತೋರಿಲ್ಲ. ಬರೀ ಬಾಯಲ್ಲೇ ಭರವಸೆ ನೀಡುವವರ ಮಾತುಗಳನ್ನು ಕೇಳಿ ನಮಗೆ ರೋಸಿ ಹೋಗಿದೆ. ಇವತ್ತು ನಾವು ಯಾರನ್ನೂ ನಂಬುವ ಸ್ಥಿತಿಯಲ್ಲಿ ಇಲ್ಲ’ ಎಂದು ಸ್ಥಳೀಯ ನಿವಾಸಿ ಲಕ್ಷ್ಮೀದೇವಮ್ಮ ತಿಳಿಸಿದರು.

ಹೆಸರಿಗಷ್ಟೇ ಜಿಲ್ಲಾಡಳಿತ!

‘ನಗರಸಭೆಯ ನಿರ್ಲಕ್ಷ್ಯವನ್ನೇ ಲಾಭ ಮಾಡಿಕೊಂಡು ಕೆಲ ಪಟ್ಟಭದ್ರರು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಸರ್ಕಾರಿ ಭೂಮಿ ಕಬಳಿಸಿದ್ದಾರೆ. ಹೀಗಾಗಿ ಕಾಲುವೆಗಳು ಕಿರಿದಾಗುತ್ತಿವೆ. ಅಧಿಕಾರಿಗಳು ಒತ್ತುವರಿ, ಸ್ವಚ್ಛತೆಗೆ ಗಮನ ನೀಡುತ್ತಿಲ್ಲ. ಜಿಲ್ಲಾಡಳಿತದ ಧೋರಣೆ ನೋಡಿದರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ. ಹೀಗಾಗಿ ಜನರು ತಮ್ಮ ಗೋಳು ಯಾರಿಗೆ ಹೇಳಿಕೊಳ್ಳುವುದು?’ 
- ಸೋಮಯ್ಯ, 2ನೇ ವಾರ್ಡ್ ನಿವಾಸಿ

ರೋಸಿ ಹೋಗಿದ್ದೇವೆ

ಮಳೆಗಾಲದಲ್ಲಿ ಮನೆಗೆ ನುಗ್ಗು ಕೊಚ್ಚೆ ನೀರಿನಿಂದಾಗಿ ಅನೇಕ ದಿನಗಳ ಕಾಲ ಮನೆಗಳಲ್ಲಿ ದುರ್ವಾಸನೆ ಮನೆ ಮಾಡಿರುತ್ತದೆ. ಸೊಳ್ಳೆಗಳ ಕಾಟ ಕೇಳಲೇ ಬೇಡಿ. ಅನೇಕ ಮಳೆಗಾಲದಲ್ಲಿ ಅಸಹ್ಯಕರ ವಾತಾವರಣ ಕಂಡು ರೋಸಿ ಹೋಗಿದ್ದೇವೆ. ಯಾರೊಬ್ಬರೂ ನಮ್ಮ ಕಷ್ಟವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆರೋಗ್ಯ ಇಲಾಖೆಯವರಂತೂ ನಿದ್ದೆಯಿಂದ ಎಚ್ಚೆತ್ತುಕೊಂಡಿಲ್ಲ
- ಶಶಿಕಲಾ, 2ನೇ ವಾರ್ಡ್ ನಿವಾಸಿ

ಸಮಸ್ಯೆ ಆಲಿಸುವ ಸೌಜನ್ಯ ಇಲ್ಲ

ರಾಜಕಾಲುವೆಯಲ್ಲಿ ಭರ್ತಿಯಾಗಿರುವ ತ್ಯಾಜ್ಯವನ್ನು ಈವರೆಗೆ ತೆರವುಗೊಳಿಸಿಲ್ಲ. ಇತ್ತೀಚೆಗೆ ನಗರಸಭೆಯವರು ಜೆಸಿಬಿ ತಂದು ಕಾಲುವೆ ತ್ಯಾಜ್ಯ ತೆರವುಗೊಳಿಸುವಂತೆ ನಾಟಕವಾಡಿ ಹೋದರು. ಮತ್ತೇ ಇತ್ತ ಸುಳಿದಿಲ್ಲ. ಸೂಟು ಬೂಟಿನ ಅಧಿಕಾರಿಗಳಿಗೆ ನಮ್ಮ ಸಮಸ್ಯೆ ಆಲಿಸುವ ಸೌಜನ್ಯ ಸಹ ಇಲ್ಲ. ಇನ್ನು ನಮಗೆ ಪರಿಹಾರ ಹೇಗೆ ದೊರೆತಿತು?
- ರಾಜಗೋಪಾಲ್‌, 2ನೇ ವಾರ್ಡ್ ನಿವಾಸಿ

ಬರೀ ಸುಳ್ಳು ಭರವಸೆಗಳು

ಈವರೆಗೆ ನಮ್ಮ ಗೋಳು ಆಲಿಸಿ ಹೋದವರು ಒಬ್ಬರೂ ಕೊಟ್ಟ ಮಾತು ಉಳಿಸಿಕೊಳ್ಳುವ ಬದ್ಧತೆ ತೋರಿಲ್ಲ. ನಾವು ಬರೀ ಸುಳ್ಳು ಭರವಸೆಗಳನ್ನು ಕೇಳಿ ಇದೇ ಅಧ್ವಾನದ ಸ್ಥಿತಿಯಲ್ಲಿ ಬದುಕುವಂತಾಗಿದೆ. ಈಗಾಗಲೇ ರಾಜಕಾರಣಿಗಳು ನಮಗೆ ಬೇರೆಡೆ ನಿವೇಶನ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಅಷ್ಟಾದರೂ ಈಡೇರಿಸಿದರೆ ಸಾಕು ಎನಿಸುತ್ತಿದೆ
- ಲಕ್ಷ್ಮೀ ದೇವಮ್ಮ, 2ನೇ ವಾರ್ಡ್ ನಿವಾಸಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !