ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು | ಉಲ್ಬಣಿಸಿದ ನೀರಿನ ಬವಣೆ; ಜನರ ಪರದಾಟ

ತಾಂತ್ರಿಕ ಸಮಸ್ಯೆ; 15 ದಿನಗಳಿಂದ ಭದ್ರಾ ಕುಡಿಯುವ ನೀರು ಪೂರೈಕೆ ಸ್ಥಗಿತ
Published 9 ಆಗಸ್ಟ್ 2023, 6:57 IST
Last Updated 9 ಆಗಸ್ಟ್ 2023, 6:57 IST
ಅಕ್ಷರ ಗಾತ್ರ

ಎನ್.ಸೋಮಶೇಖರ್

ಬೀರೂರು:  ಭದ್ರಾ ಕುಡಿಯುವ ನೀರಿನ ಯೋಜನೆಯಲ್ಲಿನ ಹಲವು ತಾಂತ್ರಿಕ ಸಮಸ್ಯೆಗಳಿಂದ ಬೀರೂರು ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಕಳೆದ 15 ದಿನಗಳಿಂದ ನೀರಿನ ಬವಣೆ ತೀವ್ರಗೊಂಡಿದ್ದು, ಜನರು ನೀರಿಗಾಗಿ ಖಾಸಗಿ ಟ್ಯಾಂಕರ್‌ ಮೊರೆ ಹೋಗುವಂತಾಗಿದೆ.

‘2013ರಲ್ಲಿ ಜಾರಿಯಾದ ಯೋಜನೆ ಈವರೆಗೂ ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ. ಸದಾ ಒಂದಿಲ್ಲೊಂದು ಸಮಸ್ಯೆ ಇರುತ್ತದೆ. ಗುಣಮಟ್ಟದ ನಿರ್ವಹಣೆ ಇಲ್ಲದೆ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕಡೂರು-ಬೀರೂರು ಪುರಸಭೆಗಳು ವಿಫಲವಾಗಿವೆ’ ಎನ್ನುವುದು ಜನರ ದೂರು. 

ಪೈಪ್‍ಲೈನ್ ದೋಷ, ಮೋಟಾರ್ ಕೆಡುವುದು, ಜಾಕ್‍ವೆಲ್ ದುರಸ್ತಿ, ಬೈಪಾಸ್ ರಸ್ತೆ ಕಾಮಗಾರಿ, ವಿದ್ಯುತ್ ಸಮಸ್ಯೆ, ಕಾರ್ಮಿಕರಿಗೆ ಸಕಾಲದಲ್ಲಿ ಸಂಬಳ ಪಾವತಿಯಾಗದಿರುವುದು ಹೀಗೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತದೆ. ಇದರಿಂದ  32 ಹಳ್ಳಿಗಳಲ್ಲಿ ಕುಡಿಯುವ ನೀರು ಪೂರೈಕೆ ತಿಂಗಳಲ್ಲಿ ಒಂದೆರಡು ಬಾರಿ ಸ್ಥಗಿತಗೊಳ್ಳುವುದು ಸಾಮಾನ್ಯವಾಗಿದೆ. ತರೀಕೆರೆ ಬಳಿಯ ನೀರು ಶುದ್ದೀಕರಣ ಘಟಕ ನಿರ್ವಹಣೆ ಕಡೂರು ಪುರಸಭೆ ಮತ್ತು ಲಕ್ಕವಳ್ಳಿ ಹತ್ತಿರದ ಜಾಕ್‍ವೆಲ್ ನಿರ್ವಹಣೆ ಬೀರೂರು ಪುರಸಭೆಯದ್ದಾಗಿದೆ. ಬೀರೂರು ಪುರಸಭೆ ನೀರು ಸರಬರಾಜು ನಿರ್ವಹಣೆಗೆಂದೇ ವಾರ್ಷಿಕ ₹60 ಲಕ್ಷ ವ್ಯಯಿಸುತ್ತಿದೆ. ಹೀಗಿದ್ದರೂ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಸಿಗುತ್ತಿಲ್ಲ.

‘ಭದ್ರಾ ಕುಡಿಯುವ ನೀರು ಪೂರೈಕೆಯಾಗದೆ 18 ದಿನಗಳು ಕಳೆದಿವೆ. ಈ ಸಮಸ್ಯೆ ಜನರಿಗೆ ಹೊಸದೇನಲ್ಲ. ವರ್ಷದಲ್ಲಿ ಹಲವು ಬಾರಿ ಇದನ್ನು ಎದುರಿಸುತ್ತಿದ್ದೇವೆ. ಆದರೆ, ಪುರಸಭೆ ಆಡಳಿತ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವಿಫಲವಾಗುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿ ಪುರಸಭೆಗೆ ಸೇರಿದ ಸಾಕಷ್ಟು ಕೊಳವೆಬಾವಿಗಳಿದ್ದು, ಇಂತಹ ಸಮಸ್ಯೆಗಳು ಎದುರಾದಾಗ ಆ ಕೊಳವೆಬಾವಿಗಳಿಂದ ಪಟ್ಟಣಕ್ಕೆ ನೀರು ಒದಗಿಸುವ ಪರ್ಯಾಯ ವ್ಯವಸ್ಥೆ ರೂಪಿಸುವಲ್ಲೂ ಪುರಸಭೆ ನಿರ್ಲಕ್ಷ್ಯ ವಹಿಸಿದೆ. ನೀರು ಪೂರೈಕೆಯನ್ನು ಸಮರ್ಪಕವಾಗಿ ಮಾಡದೆ  ಜನರನ್ನು ಸಮಸ್ಯೆಯ ಕೂಪಕ್ಕೆ ತಳ್ಳುತ್ತಿದೆ’ ಎಂದು ಪಟ್ಟಣದ ಹಳೇಪೇಟೆ ನಿವಾಸಿ ಓಂಕಾರಪ್ಪ ದೂರಿದರು.

ರಾಜ್ಯ ಮಾದಿಗ ಸಮಾಜದ ಬೀರೂರು ಘಟಕದ ಅಧ್ಯಕ್ಷ ಬಿ.ಎನ್.ಆನಂದ್ ಮಾತನಾಡಿ, ‘ಭದ್ರಾ ಕುಡಿಯುವ ನೀರನ್ನು ಸಮಗ್ರವಾಗಿ ಪೂರೈಸದ ಪುರಸಭೆ, ನಾವು ನೀರಿನ ತೆರಿಗೆ ಕಟ್ಟುವಾಗ ಏಕೆ ರಿಯಾಯಿತಿ ನೀಡುವುದಿಲ್ಲ? ಸಾಕಷ್ಟು ಜನರು ಮುಂಗಡವಾಗಿ ವಾರ್ಷಿಕ ತೆರಿಗೆ ಪಾವತಿ ಮಾಡುತ್ತಾರೆ. ಸಮಸ್ಯೆ ಎದುರಾದಾಗ ಇವರು ಮತ್ತೆ ಟ್ಯಾಂಕರ್‌ಗೆ  ಹಣ ನೀಡಬೇಕು. ವರ್ಷದಲ್ಲಿ 6 ತಿಂಗಳು ಕೂಡ ನಿರಂತರವಾಗಿ ನೀರು ಪೂರೈಸಲು ಪುರಸಭೆಗೆ ಆಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತರೀಕೆರೆಯ ನೀರು ಶುದ್ಧೀಕರಣ ಘಟಕದಲ್ಲಿ ಯಂತ್ರದ ದುರಸ್ತಿ ಮಾಡಿ ತಾಂತ್ರಿಕ ದೋಷವನ್ನು ಪರಿಹರಿಸಲು ಪ್ರಯತ್ನಿಸುತ್ತಿರುವ ತಜ್ಞರು.
ತರೀಕೆರೆಯ ನೀರು ಶುದ್ಧೀಕರಣ ಘಟಕದಲ್ಲಿ ಯಂತ್ರದ ದುರಸ್ತಿ ಮಾಡಿ ತಾಂತ್ರಿಕ ದೋಷವನ್ನು ಪರಿಹರಿಸಲು ಪ್ರಯತ್ನಿಸುತ್ತಿರುವ ತಜ್ಞರು.

ಕಡೂರು-ಬೀರೂರು ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಹದಿನೈದು ದಿನಗಳಿಂದ ಬಾರದ ನೀರು ಟ್ಯಾಂಕರ್-ಕೊಳವೆಬಾವಿ ಮೊರೆಹೋದ ನಾಗರಿಕರು

‘ಭದ್ರಾ ಕುಡಿಯುವ ನೀರನ್ನು ಪಟ್ಟಣದ ಜನರಿಗೆ ಪೂರೈಸಲು ಸಮಸ್ಯೆ ಆಗಿದೆ. ಸರಿಪಡಿಸುವ ಸಲುವಾಗಿ ನೀರು ಶುದ್ಧೀಕರಣ ಘಟಕದಲ್ಲಿ ಕಳೆದ 15 ದಿನಗಳಿಂದ ತಾಂತ್ರಿಕ ಕೆಲಸವನ್ನು ಮಾಡುತ್ತಿದ್ದೇವೆ. ಮೋಟರ್ ದುರಸ್ತಿಯಾಗಿ ಸ್ವಿಚ್ ಆನ್ ಮಾಡುವ ಹೊತ್ತಿಗಾಗಲೇ ಮತ್ತೆ ಕೆಟ್ಟು ಹೋಗಿದೆ. ಪುನಃ ಬೆಂಗಳೂರಿನ ತಜ್ಞರು ಬಂದು ಪರೀಕ್ಷಿಸುತ್ತಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ದೋಷ ಸರಿಪಡಿಸಿ ನೀರು ಪೂರೈಸಲಾಗುವುದು’ ಎಂದು ಪುರಸಭೆ ಎಂಜಿನಿಯರ್ ವೀಣಾ  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT