ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರೀಕೆರೆ: ಕುಡಿಯುವ ನೀರಿಗಾಗಿ ಪರದಾಟ 

ತಳಹಂತಕ್ಕೆ ತಲುಪಿದ ಮಾನಸಿಕೆರೆಯ ನೀರು– ಪಟ್ಟಣದಲ್ಲಿ ಶುರುವಾಗಲಿದೆ ಜಲಕ್ಷಾಮ
Last Updated 28 ಜೂನ್ 2019, 19:45 IST
ಅಕ್ಷರ ಗಾತ್ರ

ತರೀಕೆರೆ: ಭದ್ರ ನಾಲೆಯಿಂದ ನೀರು ಸರಬರಾಜು ಸ್ಥಗಿತಗೊಳಿಸಲಾಗಿದ್ದು, ಇದೀಗ ಸಂಗ್ರಹಿಸಲಾಗಿದ್ದ ಮಾನಸಿಕೆರೆಯ ನೀರು ಸಹ ತಳ ಹಂತಕ್ಕೆ ತಲುಪಿದೆ. ಇನ್ನು ಹತ್ತಾರು ದಿನಗಳಲ್ಲಿ ನೀರು ಖಾಲಿಯಾಗಲಿದ್ದು, ಇದಾದ ನಂತರ ಕುಡಿಯುವ ನೀರನ್ನು ಪುರಸಭೆ ಹೇಗೆ ಪೂರೈಸುತ್ತದೆ ಎಂಬ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ.

ಭದ್ರೆ ನೀರು ಸರಬರಾಜು ಇಲಾಖೆಯ ನಿಯಮದಂತೆ ವರ್ಷಕ್ಕೆ ಎರಡು ಬಾರಿ ನೀರನ್ನು ಸ್ಥಗಿತಗೊಳಿಸಲಾಗುತ್ತದೆ. ಈ ಸಂದರ್ಭದಲ್ಲಿ ಪುರಸಭೆಯು ದುಗ್ಲಾಪುರ ಗ್ರಾಮದ ಬಳಿ ಕೆರೆಯೊಂದನ್ನು ನಿರ್ಮಿಸಿದ್ದು, ಅಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಂಡು ಶುದ್ಧಿಕರಿಸಿ ನೀಡುತ್ತ ಬಂದಿದೆ. ಪಟ್ಟಣ ಬೆಳೆದಿದ್ದು, ನೀರು ಬಳಕೆದಾರರ ಸಂಖ್ಯೆ ಹೆಚ್ಚಾಗಿರುವುದರಿಂದ ಸಂಗ್ರಹದ ನೀರು ಸಾಕಾಗುತ್ತಿಲ್ಲ. ಆದ್ದರಿಂದ ಐದು ದಿನಕ್ಕೊಮ್ಮೆ ಮಾತ್ರ ನೀರು ಪೂರೈಸಲಾಗುತ್ತಿದೆ.

ಅರ್ಧ ಅಥವಾ ಮುಕ್ಕಾಲು ಅವಧಿಯಲ್ಲಿ ಮಾತ್ರ ಸಿಗುವ ನೀರನ್ನು ಜನರು ಶೇಖರಿಸಿಟ್ಟುಕೊಳ್ಳುವುದು ಸವಾಲಾಗಿದ್ದರೆ, ಬಡವರ್ಗದ ಕಾರ್ಮಿಕ ಜನರಿಗೆ ಸ್ವಂತ ನಲ್ಲಿಗಳು ಇಲ್ಲ. ಬೇರೆಯವರ ಮನೆಯ ನಲ್ಲಿಗಳ ಮುಂದೆ ಖಾಲಿ ಕೊಡಗಳನ್ನು ಹಿಡಿದು ನಿಲ್ಲುವ ದೃಶ್ಯ ಇಂದಿಗೂ ಸಾಮಾನ್ಯವಾಗಿದೆ. ಇಂತಹ ಜನರು ಕುಡಿಯುವ ನೀರು ಸಿಗದೆ ಪರದಾಡುವಂತಾಗಿದೆ.

ಪುರಸಭೆಯು ಪಟ್ಟಣದಲ್ಲಿ 173 ಕಿರು ನೀರು ಸರಬರಾಜು ಘಟಕಗಳನ್ನು ಸ್ಥಾಪಿಸಿದೆ. ಈ ನೀರು ಕುಡಿಯಲು ಯೋಗ್ಯವಾಗಿಲ್ಲ. ಟ್ಯಾಂಕರ್ ಮೂಲಕ ನೀರು ಪೂರೈಸಲು ನೀರು ಲಭ್ಯವಿಲ್ಲದಿರುವುದು ಸಮಸ್ಯೆಯಾಗಿ ಕಾಡುತ್ತಿದೆ.

ಸ್ಥಳೀಯ ಆಡಳಿತ ನೀರು ಬೇಕೆಂದು ಮನವಿ ಮಾಡಿದರೆ ನೀಡಲಾಗುವುದು ಎಂದು ಭದ್ರಾ ನೀರಾವರಿ ನಿಗಮದ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ. ಆದರೆ, ಪುರಸಭೆ ಪ್ರಕಾರ ಕಾಡಾ ಸಭೆಯಲ್ಲಿ ಮಾತ್ರ ಕುಡಿಯುವ ನೀರು ಪೂರೈಕೆಗೆ ಅನುಮತಿ ಸಿಗುತ್ತದೆ. ಇದಕ್ಕಾಗಿ ಮನವಿ ಮಾಡಲಾಗಿದೆ. ಹಿಂದೆಯು ಇದೇ ಸಮಸ್ಯೆ ಎದುರಾಗಿದ್ದಾಗ ಅಂದಿನ ಜಿಲ್ಲಾಧಿಕಾರಿ ಸತ್ಯವತಿ ಕಡೂರು- ಬೀರೂರಿಗೆ ನೀರು ನೀಡುವ ಪೈಪ್ ಲೈನ್ ಮೂಲಕ ಕೆರೆಗೆ ತಾತ್ಕಾಲಿಕವಾಗಿ ನೀರು ಹಾಯಿಸಿದ್ದರು, ಅದರಂತೆಯೇ ಈ ಬಾರಿಯು ಜಿಲ್ಲಾಡಳಿತ ಕ್ರಮ ವಹಿಸುತ್ತದೆ ಎಂದು ಪುರಸಭೆ ಅಧಿಕಾರಿಗಳು ಭರವಸೆ ನೀಡುತ್ತಾರೆ.

ಒಟ್ಟಾರೆ ಭದ್ರೆಯ ಪಕ್ಕದಲ್ಲಿರುವ ಪಟ್ಟಣಕ್ಕೆ ಕುಡಿಯುವ ನೀರು ಸಿಗದಿರುವುದು, ಇದಕ್ಕಾಗಿ ಯೋಜನೆಗಳು ರೂಪಿತವಾಗದಿರುವುದು ಹಾಗೂ ನಾಲ್ಕನೇ ಹಂತದ ಕುಡಿಯುವ ನೀರಿನ ಯೋಜನೆಗೆ ಸರ್ಕಾರ ಆರ್ಥಿಕ ಅಸಹಕಾರ ನೀಡಿರುವುದರಿಂದ ನಾಗರಿಕರಲ್ಲಿ ಅಸಮಾಧಾನ ಮೂಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT