ಶಾಲೆಗೆ, ದಾರಿ ಯಾವುದಯ್ಯಾ...?!

6

ಶಾಲೆಗೆ, ದಾರಿ ಯಾವುದಯ್ಯಾ...?!

Published:
Updated:
Deccan Herald

ಲಿಂಗಾಪುರ (ಎನ್.ಆರ್.ಪುರ): ನಮ್ಮ ಹಳ್ಳಿಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇಲ್ಲಿನ ಮಕ್ಕಳು ಶಾಲೆಗೆ ಹೋಗಲು ದಾರಿ ತೋರಿಸಿ...
–ಗ್ರಾಮಸ್ಥರು ಜನಪ್ರತಿನಿಧಿಗಳ ಮುಂದೆ ಅಳಲು ತೋಡಿಕೊಂಡ ಪರಿ ಇದು.

ತಾಲ್ಲೂಕಿನ ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಲಿಂಗಾಪುರ ಗ್ರಾಮಕ್ಕೆ ಭಾನುವಾರ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್.ಸದಾಶಿವ ಭೇಟಿ ನೀಡಿದಾಗ ಗ್ರಾಮಸ್ಥರು ಗ್ರಾಮದ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಗ್ರಾಮದ ನಿವಾಸಿ ಸುಜಾತ ಮಾತನಾಡಿ, ‘ಗ್ರಾಮದ ವ್ಯಾಪ್ತಿಯಿಂದ ಪಟ್ಟಣದ ವಿವಿಧ ಶಾಲೆಗಳಿಗೆ 47 ಮಕ್ಕಳು ಹೋಗುತ್ತಾರೆ. ಕೆಸರು ಗದ್ದೆಯಾಗಿರುವ ರಸ್ತೆಯಲ್ಲಿ ಮಕ್ಕಳು ನಿಯಮಿತವಾಗಿ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ವಾರದಲ್ಲಿ 2, 3 ದಿನ ಶಾಲೆಗೆ ಹೋಗದೆ ರಜೆ ಮಾಡುತ್ತಾರೆ’ ಎಂದು ಹದಗೆಟ್ಟ ರಸ್ತೆಯಿಂದಾಗುತ್ತಿರುವ ಸಮಸ್ಯೆ ವಿವರಿಸಿದರು.

‘ಹಿಂದೆ ಗ್ರಾಮದ ವ್ಯಾಪ್ತಿಯಲ್ಲಿ ರಂಗಮಂದಿರಕ್ಕೆ ಅನುದಾನ ಮಂಜೂರಾಗಿತ್ತು. ಇದರ ಕಾಮಗಾರಿಯನ್ನು ಗುತ್ತಿಗೆದಾರ ಪೂರ್ಣಗೊಳಿಸದೇ ಅರ್ಧಕ್ಕೆ ಬಿಟ್ಟು ಹೋದರು. ಗುತ್ತಿಗೆದಾರ ಯಾರೂ ಎಂಬುದು ಸಹ ಗೊತ್ತಿಲ್ಲ. ಗ್ರಾಮಸ್ಥರೆಲ್ಲರೂ ಹಣ ಹಾಕಿ ಹೊಸ ರಂಗಮಂದಿರವನ್ನು ನಿರ್ಮಿಸಿಕೊಂಡಿದ್ದೇವೆ’ ಎಂದು ಸತೀಶ್ ವಿವರಿಸಿದರು.

‘ಈ ಗ್ರಾಮಕ್ಕೆ ದೇವಸ್ಥಾನ ನಿರ್ಮಿಸಿಕೊಟ್ಟಿಲ್ಲ. ಅರಳಿಕಟ್ಟೆ ಕಟ್ಟಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಇಲ್ಲಿ ಬೀದಿ ದೀಪದ ವ್ಯವಸ್ಥೆ ಸಮರ್ಪಕವಾಗಿಲ್ಲ’ ಎಂದು ಗ್ರಾಮಸ್ಥ ಜಯಶಂಕರ ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ‘8 ವರ್ಷಗಳ ಹಿಂದೆ ಈ ಗ್ರಾಮವನ್ನು ಕಿರು ಅರಣ್ಯ ಪ್ರದೇಶ ಎಂದು ಘೋಷಿಸಲಾಗಿದೆ. ಹಾಗಾಗಿ ಹಕ್ಕು ಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸಲು ಶಾಸಕರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

‘ಗ್ರಾಮದ 6 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲು ಈಗಾಗಲೇ ಕ್ರಿಯಾಯೋಜನೆ ರೂಪಿಸಿ ಶಾಸಕರಿಗೆ ಸಲ್ಲಿಸಲಾಗಿದೆ. ತಕ್ಷಣವೇ ರಸ್ತೆ ದುರಸ್ತಿಗೆ ಜಲ್ಲಿ, ಕಲ್ಲು ಹಾಕಲು ಅನುದಾನ ನೀಡಲಾಗುವುದು. ರಂಗಮಂದಿರಕ್ಕೆ ₹1 ಲಕ್ಷ ಅನುದಾನ ನೀಡಲಾಗುವುದು. ದೇವಸ್ಥಾನಕ್ಕೆ ಆವರಣಗೋಡೆ ನಿರ್ಮಿಸಲು ಶಾಸಕರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

‘ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ವಾರ್ಷಿಕ ಕೇವಲ ₹16 ಲಕ್ಷ ಮಾತ್ರ ಅನುದಾನ ಬರುತ್ತಿದೆ. ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 732 ಕಿ.ಮೀ. ಮಣ್ಣು ರಸ್ತೆ, ಜಲ್ಲಿ ರಸ್ತೆ ಇದೆ. ಹಾಗಾಗಿ ಹೆಚ್ಚಿನ ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಲು ಆಗುತ್ತಿಲ್ಲ’ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ರಘುಶೆಟ್ಟಿ ಮಾತನಾಡಿ, ಗ್ರಾಮದ ವ್ಯಾಪ್ತಿಯಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ಮಾಡಿಸಿದರೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಜಾಗ ಯಾವುದು ಎಂಬುದು ಗೊತ್ತಾಗಲಿದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಬಾಬು, ಮುಖಂಡರಾದ ಬೀನು, ಏಲಿಯಾಸ್, ತರಿಯನ್, ಸುಂದರೇಶ್, ಮೂರ್ತಿ ಇದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !