ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.15ಕ್ಕೆ ಕಾಂಗ್ರೆಸ್ ಸೇರ್ಪಡೆ: ವೈಎಸ್‌ವಿ ದತ್ತ ಘೋಷಣೆ

ತುರ್ತಾದ, ಐತಿಹಾಸಿಕವಾದ ಬದಲಾವಣೆ ಬಯಸುತ್ತಿರುವ ಜನತೆ
Last Updated 6 ಜನವರಿ 2023, 6:01 IST
ಅಕ್ಷರ ಗಾತ್ರ

ಕಡೂರು: ‘ಜನವರಿ 15ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇನೆ’ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಹೇಳಿದರು.

ತಾಲ್ಲೂಕಿನ ಯಗಟಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಕಡೂರಿನಲ್ಲಿ ನಿರಂತರವಾಗಿ ಜನರ ಜೊತೆ ಸಂಪರ್ಕದಲ್ಲಿದ್ದೇನೆ. ಕಳೆದ ಒಂದೂವರೆ ವರ್ಷದಲ್ಲಿ ತಾಲ್ಲೂಕಿನಲ್ಲಿ ಹೋದೆಡೆಯೆಲ್ಲ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಬೇಕೆಂಬ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗುತ್ತಿತ್ತು. ಇಲ್ಲಿ ತುರ್ತಾದ, ಐತಿಹಾಸಿಕವಾದ ಹಾಗೂ ಅನಿವಾರ್ಯವಾದ ಬದಲಾವಣೆಯನ್ನು ಜನರು ಬಯಸಿದ್ದಾರೆ. ಜನಾಭಿಪ್ರಾಯ, ನನ್ನ ಜೊತೆಯಿರುವ ನನ್ನ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಒಟ್ಟಾರೆ ಅಭಿಪ್ರಾಯದಂತೆ ನನ್ನ ಸಮಾನ ಮನಸ್ಕ ಸ್ನೇಹಿತರಿರುವ ಕಾಂಗ್ರೆಸ್ ಪಕ್ಷಕ್ಕೆ ಬೇಷರತ್ತಾಗಿ ಸೇರುವ
ನಿರ್ಧಾರ ಮಾಡಿದೆ’ ಎಂದು ಅವರು ಹೇಳಿದರು.

‘ಎರಡು ದಿನಗಳ ಕಾಂಗ್ರೆಸ್ ಪಕ್ಷದಿಂದ ಕರೆ ಬಂದಿದ್ದು, ಜನವರಿ 15ರಂದು ಪಕ್ಷಕ್ಕೆ ಸೇರ್ಪಡೆಯಾಗಲು ಸೂಚಿಸಿದ್ದಾರೆ. ಅಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಾಗೂ ಸಿದ್ದರಾಮಯ್ಯ ಮತ್ತಿತರ ನಾಯಕರ ಸನ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇನೆ. ನನ್ನ ಅಭಿಮಾನಿಗಳು,ಕಾರ್ಯಕರ್ತರು ಕಡೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಐವತ್ತು ವರ್ಷಗಳಿಂದ ಒಂದೇ ಪಕ್ಷದಲ್ಲಿದ್ದು ಇದೀಗ ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ’ ಎಂದರು.

‘ಸಂಸದ ಪ್ರಜ್ವಲ್ ರೇವಣ್ಣ ಅವರು ಅತ್ಯಂತ ಗೌರವಯುತವಾಗಿ ಪಕ್ಷದಲ್ಲಿ ಉಳಿಯುವಂತೆ ಕರೆದಿದ್ದಾರೆ. ಅವರ ಪ್ರೀತಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಆದರೆ, ನಾನು ಮತ್ತೆ ಬರುವ ಪರಿಸ್ಥಿತಿಯಲ್ಲಿ ಇಲ್ಲ ಎಂಬುದನ್ನು ವಿನಮ್ರತೆಯಿಂದ ತಿಳಿಸುತ್ತೇನೆ’ ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ವೈ.ಎಸ್.ರವಿಪ್ರಕಾಶ್, ಯರದಕೆರೆ ವಿ. ರಾಜಪ್ಪ, ಶೂದ್ರ ಶ್ರೀನಿವಾಸ್, ಗಂಗರಾಜು, ಕೆ.ವೈ.ವಾಸು, ಪಂಚನಹಳ್ಳಿ ಪಾಪಣ್ಣ, ಪಾತೇನಹಳ್ಳಿ ಚೌಡಪ್ಪ, ತಿಮ್ಮೇಗೌಡ, ಬೀರೂರು ಮೋಹನ್, ಮುಬಾರಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT