ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದಂಗಡಿ ‘ಲೈಸೆನ್ಸ್‌‘ ಹೆಚ್ಚಳ; ನಾಗರಿಕರ ತಳಮಳ

Last Updated 26 ಮೇ 2019, 15:09 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದಲ್ಲಿ ಮದ್ಯದಂಗಡಿ, ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳು ಹೆಚ್ಚುತ್ತಿವೆ. ಜಿಲ್ಲೆಯಲ್ಲಿ 2018–19ನೇ ಸಾಲಿನಲ್ಲಿ ಹೊಸದಾಗಿ ಮಂಜೂರಾಗಿರುವ 13ಸನ್ನದುಗಳ(ಲೈಸೆನ್ಸ್‌) ಪೈಕಿ ಚಿಕ್ಕಮಗಳೂರು ವಲಯದಲ್ಲಿ ನಾಲ್ಕು ಇವೆ.

ನಗರದ ಮುಖ್ಯ ರಸ್ತೆಯ ಪಕ್ಕದಲ್ಲಿ ಹೊಸದಾಗಿ ಎರಡ್ಮೂರು ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳು ತಲೆಎತ್ತಿವೆ. ಕಾಲೇಜು, ವಿದ್ಯಾರ್ಥಿನಿಲಯದ ಆಸುಪಾಸಿನಲ್ಲಿ ತೆರೆಯಲು ಅನುಮತಿ ನೀಡಿರುವುದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.

‘ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸುತ್ತಮುತ್ತ ಎಂಟ್ಹತ್ತು ಮದ್ಯದಂಗಡಿಗಳಿವೆ. ನಿಲ್ದಾಣದ ಆಸುಪಾಸಿನಲ್ಲಿ ಕುಡಿದು ತೂರಾಡುವುದು, ಮತ್ತಿನಲ್ಲಿ ಎಲ್ಲೆಂದರಲ್ಲಿ ಬೀಳುವುದು, ಗಲಾಟೆ ಮಾಡುವುದು ಜಾಸ್ತಿಯಾಗಿದೆ. ಕೆಲವರಂತೂ ಗಡದ್ದಾಗಿ ಕುಡಿದು ಐ.ಜಿ.ರಸ್ತೆ ಪಾದಚಾರಿ ಮಾರ್ಗದಲ್ಲಿ ಸುಖನಿದ್ರೆಗೆ ಜಾರಿ ಬಿಟ್ಟಿರುತ್ತಾರೆ. ಪಾದಚಾರಿಗಳೇ ಅವರನ್ನು ದಾಟಿಕೊಂಡು ಓಡಾಡಬೇಕು. ಪೊಲೀಸರು ಕಂಡರೂ ಕಾಣದಂತೆ ನಟಿಸುತ್ತಾರೆ. ನಿಲ್ದಾಣದ ಬಳಿ ಕುಡುಕರ ಹಾವಳಿ ಹೆಚ್ಚಾಗಿದೆ’ ಎಂದು ಶಿಕ್ಷಕ ಮಂಜುನಾಥ್‌ ಅಳಲು ತೋಡಿಕೊಂಡರು.

ಜಿಲ್ಲೆಯಲ್ಲಿ ಕಳೆದ ವರ್ಷ ನವೀಕರಣಗೊಂಡಿರುವ 220 ಸನ್ನದುಗಳು ಪೈಕಿ 70 ಚಿಕ್ಕಮಗಳೂರು ವಲಯದಲ್ಲಿ ಇವೆ. ಸಿಎಲ್‌9 (ಬಾರ್‌)– 22, ಸಿಎಲ್‌2(ವೈನ್‌ಶಾಪ್‌)– 19, ಸಿಎಲ್‌7 (ಬೋರ್ಡಿಂಗ್–ಲಾಡ್ಜಿಂಗ್‌) – 11, ಸಿಎಲ್‌11ಸಿ (ಎಂಎಸ್‌ಐಎಲ್‌)–7, ಸಿಎಲ್‌–4 (ಕ್ಲಬ್‌)– 6 , ವೈನ್‌ ಟವರಿನ್‌–3 ಹಾಗೂ ಸಿಎಲ್‌6 (ಸ್ಟಾರ್‌ ಹೋಟೆಲ್‌) –2 ಈ ವಲಯದಲ್ಲಿವೆ.

‘ಹಾಸ್ಟೆಲ್‌, ಕಾಲೇಜಿನ ಪಕ್ಕದಲ್ಲಿ ಬಾರ್‌, ಕ್ಲಬ್‌ಗಳಿರಬಾರದು. ಶೈಕ್ಷಣಿಕ ವಾತಾವರಣಕ್ಕೆ ತೊಂದರೆಯಾಗುತ್ತದೆ. ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ನಾವು ಹೇಳಿದರೆ ಯಾರು ಕೇಳುತ್ತಾರೆ..?’ ಎಂದು ಉಪನ್ಯಾಸಕರೊಬ್ಬರು ನೊಂದುಕೊಂಡರು.

ಮೋಜು, ಮಸ್ತಿ, ಖುಷಿ ಅನುಭವಿಸಲು ಕಾಫಿನಾಡಿಗೆ ಪ್ರವಾಸಿಗರು ಬರುತ್ತಾರೆ. ವಾರಾಂತ್ಯ, ಸಾಲುಸಾಲು ರಜೆಗಳಿದ್ದಾಗ ನಗರದಲ್ಲಿ ಪ್ರವಾಸಿ ವಾಹನಗಳ ದಟ್ಟಣೆ ವಿಪರೀತ ಇರುತ್ತದೆ. ಪ್ರವಾಸಿಗರ ವಾಸ್ತವ್ಯದ ಪ್ರಮುಖ ಕೇಂದ್ರ ಚಿಕ್ಕಮಗಳೂರು ನಗರ. ವಾಸ್ತವ್ಯ ತಾಣಗಳಲ್ಲಿ ಮದ್ಯರಾಧನೆ, ಮೋಜು–ಮಸ್ತಿಗೆ ಪೂರಕ ವಾತಾವರಣ ಬಯುಸುವವರೇ ಹೆಚ್ಚು. ಕ್ಲಬ್‌, ಬಾರ್‌–ರೆಸ್ಟೊರೆಂಟ್‌ಗಳನ್ನು ಹುಡುಕಿಕೊಂಡು ಹೋಗುತ್ತಾರೆ.

ನಗರದ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್‌ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಂಜೆ, ರಾತ್ರಿ (11 ಗಂಟೆವರೆಗೆ) ವೈನ್‌ಶಾಪ್‌, ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳ ಬಳಿಯೂ ಈ ಸಮಸ್ಯೆ ವಿಪರೀತ ಇರುತ್ತದೆ. ವಾಹನ ದಟ್ಟಣೆ ಹೆಚ್ಚು ಇರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆಗಳು ಇರುತ್ತವೆ.

‘ಲೈಸೆನ್ಸ್‌ ಕೊಡುವಾಗ ಪರಿಶೀಲಿಸಿ ನಿಯಮಾನುಸಾರ ನೀಡಬೇಕು. ಮದ್ಯದಂಗಡಿಗಳು ಜಾಸ್ತಿಯಾದರೆ ಕುಡಿಯುವವರು ಜಾಸ್ತಿಯಾಗುತ್ತಾರೆ. ಕೆಲವು ಕಡೆ ಮದ್ಯದಂಗಡಿಗಳಲ್ಲಿ ಸಂಜೆ ಹೊತ್ತಿನಲ್ಲಿ ಸರದಿಯಲ್ಲಿ ನಿಂತಿರುತ್ತಾರೆ. ಮದ್ಯ ತಯಾರಿಸುವುದನ್ನೇ ನಿಲ್ಲಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಸಿಪಿಐ ಮುಖಂಡರಾದ ರಾಧಾಸುಂದರೇಶ್‌ ಒತ್ತಾಯಿಸಿದರು.

‘ಸ್ಥಳವನ್ನು ಪರಿಶೀಲಿಸಿಯೇ ವರದಿ ನೀಡಿರುತ್ತೇವೆ. ಕಚೇರಿ, ಶಾಲೆ, ಕಾಲೇಜುಗಳಿಂದು 100 ಮೀಟರ್‌ ಅಂತರ ಇರಬೇಕು ಎಂಬುದು ಸಹಿತ ನಿಯಮಾನುಸಾರವೇ ವರದಿ ನೀಡಿರುತ್ತೇವೆ. ಒಂದು ಮದ್ಯದಂಗಡಿಯಿಂದ ಮತ್ತೊಂದಕ್ಕೆ ಇಷ್ಟು ಅಂತರ ಇರಬೇಕು ಎಂದೇನೂ ಇಲ್ಲ’ ಎಂದು ಚಿಕ್ಕಮಗಳೂರಿನ ಅಬಕಾರಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT