ಸೋಮವಾರ, ಅಕ್ಟೋಬರ್ 21, 2019
24 °C
9ರಿಂದ ರಾಜ್ಯ ಮಟ್ಟದ ಕುಸ್ತಿ ಪಂದ್ಯ– ಭರದ ಸಿದ್ಧತೆ

ತರೀಕೆರೆ: ಜಂಗಿ ಕುಸ್ತಿಗೆ ಅಖಾಡ ಸಿದ್ಧ

Published:
Updated:
Prajavani

ಅರೆ ಬಯಲು ಮತ್ತು ಅರೆ ಮಲೆನಾಡಿನಿಂದ ಮಿಳಿತವಾಗಿರುವ ತರೀಕೆರೆಯ ಮಣ್ಣಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ‘ರಾಜ್ಯಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆ’ಯು ಪಟ್ಟಣದ ಬಯಲು ರಂಗಮಂದಿರದಲ್ಲಿ ಇದೇ 9ರಿಂದ ಮೂರು ದಿನಗಳ ಕಾಲ ನಡೆಯಲಿದೆ.

ಪ್ರತಿಷ್ಠೆಯ ಸಂಕೇತ ಎನಿಸಿರುವ ಈ ಕುಸ್ತಿಯನ್ನು ಪಟ್ಟಣದ ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದವರು ಪ್ರತಿವರ್ಷ ದಸರಾ ಹಬ್ಬದ ಅಂಗವಾಗಿ ಆಯೋಜಿಸುತ್ತ ಬಂದಿದ್ದಾರೆ. ಆಧುನಿಕತೆಯ ಪ್ರಹಾರಕ್ಕೆ ಸಿಲುಕಿ ತತ್ತರಿಸಿರುವ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾಗಿದ್ದ ಕುಸ್ತಿ ಕಲೆಯು ಜನರ ಪ್ರೋತ್ಸಾಹದಿಂದ ಹೊಸ ಆಯಾಮದೊಂದಿಗೆ ಮತ್ತೆ ಕ್ರೀಡಾ ಪ್ರೇಮಿಗಳನ್ನು ಸೆಳೆಯುತ್ತಿದೆ.

ಪಟ್ಟಣದಲ್ಲಿ ನಡೆಯುವ ಈ ಕುಸ್ತಿಯು ಹಲವು ಕಾರಣಗಳಿಗಾಗಿ ವಿಶೇಷತೆಯನ್ನು ಗಳಿಸಿದೆ. ಸ್ವಭಾವತಃ ಕುಸ್ತಿ ಪಟುಗಳಾಗಿದ್ದ ತರೀಕೆರೆಯನ್ನು ಆಳಿದ ಅಂದಿನ ಪಾಳೆಗಾರರು ಈ ಭಾಗದಲ್ಲಿ ಕುಸ್ತಿಯನ್ನು ಏರ್ಪಡಿಸಿ, ಪ್ರೋತ್ಸಾಯಿಸಿ ಬೆಳೆಸಿದ್ದು ಇನ್ನೂ ಜನ ಮಾನಸದಲ್ಲಿ ಉಳಿದಿದೆ. ಇಂದಿಗೂ ಸ್ಪರ್ಧಾ ವಿಜೇತರಿಗೆ ನೀಡುವ ‘ಅಖಾಡದ ಬಂಗಾರದ ಬಳೆ’ಯನ್ನು ‘ಪಾಳೆಗಾರ ಸರ್ಜಾ ಹನುಮಪ್ಪ ನಾಯಕ’ನ ಹೆಸರಿನಲ್ಲಿ ನೀಡಿ ಕುಸ್ತಿಪಟುಗಳನ್ನು ಗೌರವಿಸಲಾಗುತ್ತಿದೆ.

ಕುಸ್ತಿಯ ಪ್ರಮುಖ ಆಕರ್ಷಣೆಯಾಗಿರುವ ಬೆಳ್ಳಿ ಗದೆಯನ್ನು ಪುರಸಭೆ ವತಿಯಿಂದ ನೀಡಲಾಗುತ್ತಿದ್ದು, ಇಲ್ಲಿನ ಬೆಳ್ಳಿ ಗದೆಯನ್ನು ಜಯಿಸುವುದು ಎಂದರೆ ಪೈಲ್ವಾನ್‌ರಿಗೆ ಪ್ರತಿಷ್ಠೆಯ ವಿಷಯ. ಇಲ್ಲಿನ ಬೆಳ್ಳಿ ಗದೆ ವಿಜೇತ ಪೈಲ್ವಾನ್‌ರಿಗೆ ರಾಜ್ಯ ಕುಸ್ತಿ ವಲಯದಲ್ಲಿ ವಿಶೇಷ ಮನ್ನಣೆ ಸಿಗುತ್ತದೆ. ಉಳಿದಂತೆ ದಾನಿಗಳು ನೀಡುವ ಬೆಳ್ಳಿ ಪದಕ, ಬೆಳ್ಳಿ ಕಿರೀಟ ಹಾಗೂ ನಗದು ಬಹುಮಾನಗಳನ್ನು ಕುಸ್ತಿ ವಿಜೇತರಿಗೆ ನೀಡಲಾಗುತ್ತದೆ.

ಕಳೆದ ಮೂರು ವರ್ಷಗಳಿಂದ ಸತತವಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪ್ರೇಕ್ಷಕರ ಸುಖಾಸೀನ ಗ್ಯಾಲರಿಯನ್ನು ನಿರ್ಮಿಸಲಾಗುತ್ತಿದ್ದು, ಕೃತಕ ಕ್ರೀಡಾಂಗಣವನ್ನು ಸೃಷ್ಟಿಸಲಾಗುತ್ತಿದೆ. ಸಂಜೆ ವೇಳೆಗೆ ಬೆಳಕಿನ ವ್ಯವಸ್ಥೆ ಮಾಡಲಾಗುತ್ತಿದೆ. ಬಂದಂತಹ ಕುಸ್ತಿಪಟುಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಸಮಿತಿಯವರು ಅಚ್ಚುಕಟ್ಟಾಗಿ ನಿರ್ವಹಿಸಲು ಸಿದ್ಧರಾಗಿದ್ದಾರೆ.

ಶತಮಾನಗಳ ಇತಿಹಾಸ ಹೊಂದಿರುವ ಪಟ್ಟಣದ ದಸರಾ ಕುಸ್ತಿಯಲ್ಲಿ ಹಿಂದೆ ಮಹಾರಾಷ್ಟ್ರದ ಖಾನಾಪುರ, ಸಾಂಗ್ಲಿ ಜಿಲ್ಲೆಗಳಿಂದ ಹೈದ್ರಾಬಾದ್ ಕರ್ನಾಟಕದ ಪ್ರದೇಶಗಳಿಂದ ಬಂದಂತಹ ಕುಸ್ತಿ ಪಟುಗಳು ತಮ್ಮ ಪಟ್ಟುಗಳನ್ನು ಪ್ರದರ್ಶಿಸಿ ಇಂದಿಗೂ ಜನ ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ. ಬೆಳಗಾಂ ನಾಗಪ್ಪ, ಅರ್ಜುನ ಖಾನಾಪುರಿ, ಸ್ಟಾರ್ ನಾಗಪ್ಪ, ಚೋಟಾ ಚಾರ್ಲಿ, ಕೊಕ್ರೆ ಪೈಲ್ವಾನ್ ರನ್ನು ಇಲ್ಲಿನ ಹಿರಿಯರು ಸ್ಮರಿಸಿಕೊಳ್ಳುತ್ತಾರೆ.

‘ಕುಸ್ತಿ ಕಲೆಯನ್ನು ಪ್ರಚುರ ಪಡಿಸಿದ ಪಟ್ಟಣದ ಪೈಲ್ವಾನ್‌ಗಳಾದ ಕುಸ್ತಿ ಸಿದ್ದಣ್ಣ, ಕಿಟ್ಟಿ ಕರಿಯಣ್ಣ, ಅಣಬೆ ನಂಜುಂಡಪ್ಪ, ವಗ್ಗಯ್ಯ, ಕುರಿಯರ ತಿಮ್ಮಣ್ಣ, ಚೆನ್ನಣ್ಣರ ಶಿವಣ್ಣ, ಬೆಲ್ಲದ ಪುಟ್ಟಣ್ಣ, ಕಾಟಿ ಬೈರಪ್ಪ, ಬಂಡಿ ಕರಿಯಣ್ಣ, ಕರಡಿಗೆ ಮಲ್ಲಣ್ಣ, ಅಣ್ಣಪ್ಪ, ಗುಳಾಂ ಸಾಬ್, ಬಕ್ಷಿ ಸಾಬ್, ಪ್ಯಾರು ಸಾಬ್ ಸೇರಿದಂತೆ ಮೈಸೂರು ರಾಜ ದರ್ಬಾರಿನಲ್ಲಿ ಕುಸ್ತಿ ಪ್ರದರ್ಶಿಸಿದ್ದ ಕುಸ್ತಿ ಬಸಣ್ಣರು ಹಾಕುತ್ತಿದ್ದ ಪಟ್ಟುಗಳು ಇಂದಿಗೂ ನಮ್ಮ ಕಣ್ಣ ಮುಂದಿವೆ’ ಎನ್ನುತ್ತಾರೆ ಇಲ್ಲಿನ ಕುಸ್ತಿ ರಸಿಕರು.

ಕುಸ್ತಿಪಟುಗಳನ್ನು ತಯಾರಿಸುತ್ತಿದ್ದ ಇಲ್ಲಿನ ಗರಡಿ ಮನೆಗಳಾದ ರೇವಣ ಸಿದ್ದೇಶ್ವರ, ಭಗೀರಥ, ಮುರುಘ ರಾಜೇಂದ್ರ, ಮುರುಫ್, ಚನ್ನಕೇಶವ ಗರಡಿ , ದೊಡ್ಡಟ್ಟಿ ಗರಡಿ ಮನೆಗಳು ನಿರ್ವಹಣೆ ಇಲ್ಲದೆ ಸೊರಗಿವೆ. ಹಿಂದೆ ರಾಜಾಶ್ರಯದಲ್ಲಿ ನಡೆಯುತ್ತಿದ್ದ ಕುಸ್ತಿಯನ್ನು ಸರ್ಕಾರ ಪ್ರೋತ್ಸಾಹಿಸಲಿ. ಪೈಲ್ವಾನ್ ರಿಗೆ ನೌಕರಿ ಭದ್ರತೆಯನ್ನು ಒದಗಿಸಲಿ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

*
ಕುಸ್ತಿ ಸ್ಪರ್ಧೆಗೆ ಹಿಂದಿನಿಂದಲೂ ಯಾವುದೇ ಕೊರತೆಯಾಗದಂತೆ ನಾಗರಿಕರು ಸಹಕಾರ ನೀಡಿದ್ದಾರೆ. ಈ ಸಾರಿಯು ವಿಶಿಷ್ಟ ರೀತಿಯಲ್ಲಿ ಕುಸ್ತಿ ನಡೆದು ಜನಮನ ಸೂರೆಗೊಳ್ಳಲಿದೆ.
-ರಘು, ಕುಸ್ತಿ ಸಂಘದ ಅಧ್ಯಕ್ಷ

Post Comments (+)