ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸೇರಲಿದ್ದೇನೆ: ವೈಎಸ್‌ವಿ ದತ್ತ ಫೋನ್‌ ಸಂಭಾಷಣೆ ಆಡಿಯೊ ವೈರಲ್‌

Last Updated 11 ಮೇ 2022, 16:26 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಂಗ್ರೆಸ್‌ ಸೇರಲಿದ್ದೇನೆ ಎಂದು ಜೆಡಿಎಸ್‌ ಮುಖಂಡ ವೈಎಸ್‌ವಿ ದತ್ತ ಹೇಳಿರುವ ಫೋನ್‌ ಸಂಭಾಷಣೆಯ ಆಡಿಯೊ ವೈರಲ್‌ ಆಗಿದೆ.

ದತ್ತ ಅವರು ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಮಾತುಗಳು ಕೆಲ ತಿಂಗಳಿನಿಂದ ಹರಿದಾಡುತ್ತಿವೆ. ವೈರಲ್‌ ಆಡಿಯೊವು ಮಾತುಗಳಿಗೆ ಪುಷ್ಟಿ ನೀಡಿದಂತಿದೆ. ಫೋನ್‌ ಸಂಭಾಷಣೆ ಇಂತಿದೆ.

ದತ್ತ: ಹಲೋ
ವ್ಯಕ್ತಿ; ಅಣ್ಣ ನಮಸ್ಕಾರ
ದ: ಅದೇನೆ ನಾನು ಚೆಕ್‌ ಕೊಟ್ಟಿದ್ದೇನಲ್ಲಾ ಅದನ್ನು ಕಲೆಕ್ಷನ್‌ಗೆ ಹಾಕಿಕೊಳ್ಳಿ, ಅದಕ್ಕೆ ಮೂರು ತಿಂಗಳು ಟೈಂ ಇದೆ. ಒಂದು ತಿಂಗಳು ಬಿಟ್ಟು ಹಾಕಿಕೊಳ್ಳಿ, ಯಾಕೆಂದ್ರೆ ನಾನು ಕಾಂಗ್ರೆಸ್‌ ಪಾರ್ಟಿ ಸೇರುತ್ತಿದ್ದೇನೆ ‘ನೆಕ್ಸ್ಟ್‌ ಮಂತ್‌’, ಅಲ್ಲಿಂದ ನನ್ನದೆಲ್ಲ ವ್ಯವಸ್ಥೆ ಆಗುತ್ತಿದೆ. ಹಾಗಾಗಿ, ದಯವಿಟ್ಟು ನೀವು ಊರು ಮನೆಯವರು ಆಗಿರುವುದರಿಂದ ರಿಕ್ವೆಸ್ಟ್‌ ಮಾಡುತ್ತಿದ್ದೇನೆ, ಚೆಕ್‌ ಅನ್ನು ‘ನೆಕ್ಸ್ಟ್‌ಮಂತ್’ ಹಾಕಿಕೊಳ್ಳಿಪ್ಪಾ.
ವ್ಯ: ಏ ಹೌದಣ್ಣಾ, ಅರ್ಜೆಂಟ್‌ ಇ‌ತ್ತು ಯಾರಿಗೋ ಮಾತು ಕೊಟ್ಟಿದ್ದೆವು ಇಲ್ಲಿ.
ದ: ನೋಡಣ್ಣಾ ನೀನು ಊರು ಮನೆಯವನಾಗಿ, ನಾಳೆ ಬರೆದಿಟ್ಟುಕೋ ನನ್ಮಗಂದು ಮಂತ್ರಿಯಾಗಿಲ್ಲ ಅಂದ್ರೆ ಹೆಸರು ದತ್ತ ಅಲ್ಲ. ಮಂತ್ರಿಯಾಗುವ ಶಕ್ತಿ ದೇವರು ಕೊಟ್ಟಿದ್ದಾನೆ, ನಿಮಗೆಲ್ಲ ಅನುಕೂಲ ಆಗುತ್ತೆ. ನಿಮ್ಮ ದೊಡ್ಡವರು ಶ್ರೀಮಂತರು, ನೀವು ಅವರ ಜೊತೆ ಕೆಲಸ ಮಾಡುತ್ತಿದ್ದೀರಾ ‘ನೆಕ್ಸ್ಟ್‌ ಮಂತ್‌ ’ಹಾಕಿಕೊಳ್ಳಿ, 15ನೇ ತಾರೀಖು ಕ್ಲೋಸ್‌ ಮಾಡ್ಕೊ ಪ್ಲೀಸ್‌.
ವ್ಯ: 15ರಂದು ಮಿಸ್‌ ಮಾಡ್ಬೇಡಿ ಅಣ್ಣ, ನಾನು ‘ಕನ್ವಿನ್ಸ್‌’ ಮಾಡುತ್ತೇನೆ.
ದ: ಮಾರ್ಚ್‌ 15
ವ್ಯ: ಅಣ್ಣ ಈಗ ಕಾಂಗ್ರಸ್ ಸೇರುತ್ತಿದ್ದಿರಾ
ದ: ಕರೆಯುತ್ತಿದ್ದಾರೆ ಸಿದ್ದರಾಮಣ್ಣ, ನಿನಗೆ ಎಲ್ಲ ಅನುಕೂಲ ಮಾಡಿಕೊಡುತ್ತೇವೆ, ಮಂತ್ರಿ ಮಾಡ್ತೀವಿ ಬನ್ನಿ ಅಂತ, ತೀರ್ಮಾನ ಮಾಡ್ತೀನಿ, ನಿಮಗೆ ಹೇಳುತ್ತೇನೆ.
ವ್ಯ: ಸರಿ ಅಣ್ಣ, ಆಯ್ತು ಅಣ್ಣ
ದ: ಮಾರ್ಚ್‌ 15ಕ್ಕೆ ಹಾಕಣ್ಣ
ವ್ಯ: ಸರಿ ಅಣ್ಣ, ನಿಮಗೆ ಫೋನ್‌ ಮಾಡಿ 15ರಂದು ಬೆಳಿಗ್ಗೆ ಹಾಕುತ್ತೇನೆ ಅಣ್ಣ
ದ: ಮಾರ್ಚ್‌ 15
ವ್ಯ: ಆಯ್ತು ಅಣ್ಣ.

‘ಜನಾಭಿಪ್ರಾಯ ಹೇಳಿದ್ದೇನೆ ಅಷ್ಟೆ, ಅದು ನನ್ನ ತೀರ್ಮಾನ ಅಲ್ಲ’
‘ಆಡಿಯೊದಲ್ಲಿರುವುದು ನನ್ನದೇ ಧ್ವನಿ. ಜನಭಿಪ್ರಾಯ ಹೇಳಿದ್ದೇನೆ, ಅದು ನನ್ನ ತೀರ್ಮಾನ ಆಲ್ಲ’ ಎಂದು ವೈಎಸ್‌ವಿ ದತ್ತ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮಂತ್ರಿಯಾಗುತ್ತೇನೆ ಎಂದು ಹೇಳಿಲ್ಲ, ಮಂತ್ರಿ ಆಗುವ ಯೋಗ್ಯತೆ ಇದೆ ಎಂದು ಹೇಳಿದ್ದೇನೆ. ನಾನು ಸಾಲ ಕೊಡಬೇಕಿರುವ ಒಬ್ಬರು ಫೋನ್‌ ಮಾಡಿದ್ದರು. ಕಾಂಗ್ರೆಸ್‌ ಹೋಗ್ತಿಯಂತೆ ಹೌದಾ ಎಂದು ಕೇಳಿದರು. ಜನಾಭಿಪ್ರಾಯ ಆ ರೀತಿ ಇದೆ, ನೋಡಬೇಕು ಎಂದಿದ್ದೆ’ ಎಂದು ತಿಳಿಸಿದರು.

‘ಕ್ಷೇತ್ರದಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಜನರ ನಾಡಿಮಿಡಿತ ತಿಳಿಯುತ್ತಿದ್ದೇನೆ. ಕಾಂಗ್ರೆಸ್‌ನವರು ಆಹ್ವಾನಿಸಿರುವುದು ನಿಜ. ಸಿದ್ದರಾಮಣ್ಣ ನಮ್ಮ ಸ್ನೇಹಿತರು, ಕಾಂಗ್ರೆಸ್‌ಗೆ ಬರುವುದಾದರೆ ಬಾ ಎಂದು ಹೇಳಿದ್ದಾರೆ’ ಎಂದರು.

‘ಕಾಂಗ್ರೆಸ್‌ಗೆ ಹೋದರೆ ಗೆಲ್ಲುತ್ತೇನೆ ಎಂಬುದು ಕ್ಷೇತ್ರದ ಜನರ ಅಭಿಪ್ರಾಯವಾಗಿದೆ. ನಾನು ಇನ್ನು ತೀರ್ಮಾನ ಮಾಡಿಲ್ಲ. ಸಮಯ ಬಂದಾಗ ತೀರ್ಮಾನ ಕೈಗೊಳ್ಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT